ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉದ್ಯೋಗಾಕಾಂಕ್ಷಿ ಆತ್ಮಹತ್ಯೆ: ವಿದ್ಯಾರ್ಥಿಗಳ ಆಕ್ರೋಶ

ತೆಲಂಗಾಣ: ಕೆ. ಚಂದ್ರಶೇಖರ್ ರಾವ್‌ ನೇತೃತ್ವದ ಸರ್ಕಾರದ ವಿರುದ್ಧ ಪ್ರತಿಭಟನೆ
Published 14 ಅಕ್ಟೋಬರ್ 2023, 16:24 IST
Last Updated 14 ಅಕ್ಟೋಬರ್ 2023, 16:24 IST
ಅಕ್ಷರ ಗಾತ್ರ

ಹೈದರಾಬಾದ್‌ (ಪಿಟಿಐ): ‘ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿದ್ದ 23 ವರ್ಷ ವಯಸ್ಸಿನ ಪ್ರವಲ್ಲಿಕಾ ಎಂಬ ಯುವತಿಯು ಇಲ್ಲಿಯ ಅಶೋಕನಗರದ ಹಾಸ್ಟೆಲ್‌ನಲ್ಲಿ ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸರು ಶನಿವಾರ ಹೇಳಿದ್ದಾರೆ.

ಪ್ರಕರಣ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಉದ್ಯೋಗಾಕಾಂಕ್ಷಿಗಳು ಮತ್ತು ವಿರೋಧಪಕ್ಷಗಳು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್‌ ನೇತೃತ್ವದ ತೆಲಂಗಾಣ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

‘ಆತ್ಮಹತ್ಯೆ ಕುರಿತ ಸುದ್ದಿ ಶುಕ್ರವಾರ ರಾತ್ರಿ ಬಹಿರಂಗವಾಗುತ್ತಿದ್ದಂತೆ ಭಾರಿ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಅಶೋಕನಗರದಲ್ಲಿ ನೆರೆದು ಬಿಆರ್‌ಎಸ್‌ ನೇತೃತ್ವದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಯುವತಿಯ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸುವಾಗಲೂ ಪ್ರತಿಭಟನನಿರತ ವಿದ್ಯಾರ್ಥಿಗಳು ಪೊಲೀಸರನ್ನು ತಡೆಯಲು ಮುಂದಾದರು. ಪೊಲೀಸರು ವಿದ್ಯಾರ್ಥಿಗಳನ್ನು ಅಲ್ಲಿಂದ ಚದುರಿಸಲು ಯತ್ನಿಸಿದರು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಆತ್ಮಹತ್ಯೆಗೆ ಶರಣಾದ ಯುವತಿ ವರಂಗಲ್‌ ಮೂಲದವರು. ಯುವತಿಯ ಕೋಣೆಯಲ್ಲಿದ್ದ ಮರಣ ಪತ್ರವನ್ನು ವಶಕ್ಕೆ ಪಡೆಯಲಾಗಿದೆ. ಹೆತ್ತವರಿಗಾಗಿ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ ಎಂದು ಯುವತಿಯು ಪೋಷಕರಿಗೆ ಪತ್ರದ ಮೂಲಕ ಕ್ಷಮೆ ಯಾಚಿಸಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಯುವತಿಯ ಹಾಸ್ಟೆಲ್‌ ಸ್ನೇಹಿತೆ ಹೇಳಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಆದರೆ, ತೆಲಂಗಾಣ ರಾಜ್ಯ ಲೋಕಸೇವಾ ಆಯೋಗವು (ಟಿಎಸ್ಎಪಿಎಸ್‌ಸಿ) ಗ್ರೂಪ್-2 ಪರೀಕ್ಷೆಯನ್ನು ಮತ್ತೆ ಮುಂದೂಡಿದ್ದರಿಂದ ಉದ್ಯೋಗ ಸಿಗದೇ ಹತಾಶಳಾಗಿ ಯುವತಿ ನೇಣು ಹಾಕಿಕೊಂಡಿದ್ದಾಳೆ ಎಂದು ಪ್ರತಿಭಟನಕಾರರು ದೂರಿದ್ದಾರೆ.

ಸರ್ಕಾರದ ವಿರುದ್ಧ ವಿಪಕ್ಷಗಳ ವಾಗ್ದಾಳಿ

ಯುವತಿಯ ಸಾವಿಗೆ ರಾಜ್ಯ ಸರ್ಕಾರವೇ ಕಾರಣ ಎಂದು ತೆಲಂಗಾಣದ ವಿಪಕ್ಷಗಳು ಆಡಳಿತಾರೂಢ ಪಕ್ಷ ಬಿಆರ್‌ಎಸ್‌ ವಿರುದ್ಧ ವಾಗ್ದಾಳಿ ನಡೆಸಿವೆ.

‘ಯುವತಿಯ ಮರಣಪತ್ರವನ್ನು ಬಹಿರಂಗಪಡಿಬೇಕು. ಆದರೆ ಅದನ್ನೂ ‘ಬಂಧಿಸಲಾಗಿದೆ’. ಹಲವಾರು ತಿಂಗಳಿನಿಂದ ಆಕೆ ಸ್ಪರ್ಧಾತ್ಮಕ ಪರೀಕ್ಷೆಗೆ ಶ್ರದ್ಧೆಯಿಂದ ತಯಾರಾಗುತ್ತಿದ್ದಳು. ಆದರೆ, ಪರೀಕ್ಷೆಗಳನ್ನು ಪದೇ ಪದೇ ರದ್ದುಪಡಿಸಿದ್ದರಿಂದ ಮತ್ತು ಮುಂದೂಡಿದ್ದರಿಂದ ಇಂತಹ ನಿರ್ಧಾರ ತೆಗೆದುಕೊಂಡಿದ್ದಾಳೆ’ ಎಂದು ಸರ್ಕಾರದ ವಿರುದ್ಧ ಬಿಜೆಪಿ ಸಂಸದ ಕೆ. ಲಕ್ಷ್ಮಣ್‌ ಅವರು ‘ಎಕ್ಸ್‌’ನಲ್ಲಿ ಕಿಡಿಕಾರಿದ್ದಾರೆ.

‘ರಾಜ್ಯಸರ್ಕಾರದ ಸಂಪೂರ್ಣ ನಿರ್ಲಕ್ಷ್ಯದಿಂದ ಸಾವಿಗೀಡಾ‌ದ ಯುವತಿ ಹಾಗೂ ಬಾಧಿತರಾದ ಇತರಿಗೆ ನ್ಯಾಯ ದೊರೆಯಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರತಿಭಟನಾನಿರತ ವಿದ್ಯಾರ್ಥಿಗಳ ಜೊತೆಗೂಡಿದ ಕಾಂಗ್ರೆಸ್‌ ಮುಖಂಡ ಎಂ. ಅನಿಲ್‌ ಕುಮಾರ್‌ ಅವರು, ‘ಎರಡು ಬಾರಿ ಟಿಎಸ್‌ಪಿಎಸ್‌ಸಿ ಪರೀಕ್ಷೆಗಳನ್ನು ರದ್ದು ಮಾಡಿದ್ದರಿಂದಲೇ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಮತ್ತು ಯುವತಿಯ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT