ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಹುಲ್‌ ಗಾಂಧಿ ಹಿಂದುತ್ವ ಹೇಳಿಕೆ | ಭಾರತ ಮಾತೆಗೆ ನೋವುಂಟಾಗಿದೆ: ಆದಿತ್ಯನಾಥ್

Published 2 ಜುಲೈ 2024, 3:26 IST
Last Updated 2 ಜುಲೈ 2024, 3:26 IST
ಅಕ್ಷರ ಗಾತ್ರ

ಲಖನೌ: ರಾಹುಲ್‌ ಗಾಂಧಿ ಹಿಂದುತ್ವದ ಹೇಳಿಕೆಗೆ ಕಿಡಿಕಾರಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಇದು ಕೇವಲ ಹಿಂದೂ ಸಮುದಾಯಕ್ಕೆ ಮಾತ್ರವಲ್ಲದೇ ಭಾರತ ಮಾತೆಗೂ ನೋವುಂಟಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ರಾಹುಲ್‌ ತಮ್ಮ ಮೊದಲ ಭಾಷಣದಲ್ಲಿಯೇ ಬಿಜೆಪಿ ಸರ್ಕಾರ ವಿರುದ್ಧ ಹರಿಹಾಯ್ದಿದರು. ಆಡಳಿತ ಪಕ್ಷ ಹಿಂದೂಗಳಲ್ಲ, ‘ಹಿಂಸಾಚಾರ ಮತ್ತು ದ್ವೇಷದ ಭಾವನೆ ಮೂಡಿಸಲು ಪ್ರಯತ್ನಿಸುತ್ತಾರೆ ಎಂದು ಹೇಳಿದ್ದರು.

ಸುದ್ದಿಗಾರರೊಂದಿಗೆ ಮಾತನಾಡಿದ ಯೋಗಿ ಆದಿತ್ಯನಾಥ್ ‘ ಇದು ಕೇವಲ ಹಿಂದೂ ಸಮುದಾಯಕ್ಕೆ ಮಾತ್ರವಲ್ಲದೇ, ಭಾರತ ಮಾತೆಯ ಆತ್ಮಕ್ಕೂ ನೋವಾಗಿದೆ. ಈ ಕೂಡಲೇ ರಾಹುಲ್‌ ಕ್ಷಮೆಯಾಚಿಸಬೇಕು‘ ಎಂದು ಆದಿತ್ಯನಾಥ್ ಒತ್ತಾಯಿಸಿದ್ದಾರೆ.

ಸದನದಲ್ಲಿ ರಾಹುಲ್ ನೀಡಿರುವ ಹೇಳಿಕೆಯು ಅತ್ಯಂತ ಖಂಡನೀಯ ಮತ್ತು ನಾಚಿಕೆಗೇಡಿನ ಸಂಗತಿಯಾಗಿದೆ. ಕಾಂಗ್ರೆಸ್‌ನವರು ಒಂದು ಸಮುದಾಯದ ಓಲೈಕೆ ರಾಜಕಾರಣದಲ್ಲಿ ತೊಡಗಿದ್ದಾರೆ. ಹೀಗಾಗಿ ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆದಿತ್ಯನಾಥ್ ಟೀಕಾಪ್ರಹಾರ ನಡೆಸಿದ್ದಾರೆ.

ಅಯೋಧ್ಯೆ ನಿರ್ಮಾಣದ ವೇಳೆ ಅಲ್ಲಿನ ಸ್ಥಳೀಯ ಭೂಮಿಯನ್ನು ಕಸಿದುಕೊಳ್ಳಲಾಗಿದೆ ಹಾಗೂ ಅವರಿಗೆ ಯಾವುದೇ ಪರಿಹಾರವನ್ನು ನೀಡಿಲ್ಲ ಎಂಬ ರಾಹುಲ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ಅಯೋದ್ಯೆ ಮತ್ತು ಉತ್ತರ ಪ್ರದೇಶಕ್ಕೆ ಅವಮಾನ ಮಾಡಲು ಯತ್ನಿಸುತ್ತಿದ್ದಾರೆ. ಅಲ್ಲಿನ ಜನರಿಗೆ ಪರಿಹಾರ ಕ್ರಮವಾಗಿ ₹1,733 ಕೋಟಿ ಭರಿಸಲಾಗಿದೆ ಎಂದು ತಿರುಗೇಟು ನೀಡಿದ್ದಾರೆ.

ಅಯೋಧ್ಯೆಯ ಗುರುತನ್ನು ಕಸಿದುಕೊಂಡವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಇಂದು ಅಯೋಧ್ಯೆ ತನ್ನ ವೈಭವವನ್ನು ಪುನಃ ಸ್ಥಾಪಿಸಿದೆ. ಈ ಮೂಲಕ ಇಡೀ ವಿಶ್ವವನ್ನೇ ತನ್ನತ್ತ ಸೆಳೆಯುತ್ತಿದೆ. ಈ ವಿಷಯವನ್ನು ಕಾಂಗ್ರೆಸ್ ಉತ್ತಮವೆಂದು ಪರಿಗಣಿಸುವುದಾದರೂ ಹೇಗೆ?, ಕಾಂಗ್ರೆಸ್ ಪಕ್ಷ ಸುಳ್ಳಿನ ಕಂತೆ ಎಂದು ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿಯವರ ಭಾಷಣದ ವೇಳೆ ಮಧ್ಯಪ್ರವೇಶಿಸಿದ ಮೋದಿ , ಇಡೀ ಹಿಂದೂ ಸಮಾಜವನ್ನು ಹಿಂಸಾತ್ಮಕ ಎಂದು ಕರೆಯುವುದು ಗಂಭೀರ ವಿಷಯವಾಗಿದೆ ಎಂದರು. ಆದರೆ, ‘ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಂಪೂರ್ಣ ಹಿಂದೂ ಸಮಾಜವಲ್ಲ‘ ಎಂದು ಗಾಂಧಿ ತಿರುಗೇಟು ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT