ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರವಿಂದ ಕೇಜ್ರಿವಾಲ್‌ ಕೆನ್ನೆಗೆ ಏಟು

ನಾಲ್ಕು ದಿನಗಳಲ್ಲಿ ಎರಡನೇ ಬಾರಿಗೆ ರೋಡ್‌ ಷೋ ವೇಳೆ ಘಟನೆ
Last Updated 8 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಾಯವ್ಯ ದೆಹಲಿಯ ಸುಲ್ತಾನಪುರಿ ಪ್ರದೇಶದಲ್ಲಿ ಮಂಗಳವಾರ ರೋಡ್‌ ಷೋ ನಡೆಸು­ತ್ತಿದ್ದ ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ಗೆ ವ್ಯಕ್ತಿಯೊಬ್ಬ ಕಪಾಳ­ಮೋಕ್ಷ ಮಾಡಿ­ದ್ದಾನೆ. ಕಳೆದ ನಾಲ್ಕು ದಿನಗಳಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಘಟನೆಗೆ ಬಿಜೆಪಿ ಕಾರಣ ಎಂದು ಎಎಪಿ ಆರೋಪಿಸಿದೆ.

ಹಲ್ಲೆ ನಡೆಸಿದ ವ್ಯಕ್ತಿಯನ್ನು ಲಲಿ ಎಂದು ಗುರುತಿಸಲಾಗಿದ್ದು, ಆತ ಆಟೊ ಚಾಲಕ ಎಂದು ತಿಳಿದು ಬಂದಿದೆ. ರೋಡ್‌ ಷೋ ಸಂದರ್ಭದಲ್ಲಿ ಕೇಜ್ರಿವಾಲ್‌ ಅವರಿಗೆ ಮಾಲೆ ಹಾಕಿದ  ಬಳಿಕ ಅವರ ಕಪಾಳಕ್ಕೆ ಲಲಿ ಹೊಡೆ­ದಿದ್ದಾನೆ.

ಅಲ್ಲಿದ್ದ ಎಎಪಿ ಕಾರ್ಯಕರ್ತರು ನಂತರ ಆತನನ್ನು ಥಳಿಸಿ­ದ್ದಾರೆ.  ಪೊಲೀಸರು ಲಲಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ‘ಕೇಜ್ರಿವಾಲ್‌ ಅವರ ಕಣ್ಣಿಗೆ ಗಾಯಗಳಾಗಿವೆ ಮತ್ತು ಅವರ ಕನ್ನಡಕ ಕೆಳಗೆ ಬಿದ್ದಿತ್ತು’ ಎಂದು ಎಎಪಿ ಮುಖಂಡ ಮನೀಷ್‌ ಸಿಸೋಡಿಯಾ ಟ್ವೀಟ್‌ ಮಾಡಿದ್ದಾರೆ.

‘ಆಟೊ ಚಾಲಕರಿಗೆ ನೀಡಿದ್ದ ಭರವಸೆಯನ್ನು ಈಡೇರಿಸದ ಕಾರಣ ಕೇಜ್ರಿವಾಲ್‌ ಮೇಲೆ ದಾಳಿ ನಡೆಸಿದ್ದೇನೆ’ ಎಂದು ದೆಹಲಿ ಹೊರವಲಯದ ಅಮನ್‌ ವಿಹಾರ ನಿವಾಸಿ ಲಲಿ ಹೇಳಿದ್ದಾನೆ.

‘ಪ್ರಧಾನಿಯಾಗುವುದಕ್ಕಾಗಿ ಕೆಲವರು ಹಿಂಸೆಗೆ ಏಕೆ ಅವಕಾಶ ಕಲ್ಪಿಸುತ್ತಿದ್ದಾರೆ ಎನ್ನುವುದು ನನಗೆ ಗೊತ್ತಾಗುತ್ತಿಲ್ಲ. ಈ ರೀತಿ ದಾಳಿ ನಡೆಸುವ ಮೂಲಕ ನಮ್ಮ ಬಾಯಿ ಮುಚ್ಚಿಸಬಹುದು ಎಂದು ತಿಳಿದುಕೊಂಡರೆ ಅದು ಶುದ್ಧ ತಪ್ಪು. ನಮ್ಮ ಉಸಿರು ಇರುವವರೆಗೆ ಹೋರಾಟ ಮುಂದುವರಿಯ­ಲಿದೆ’ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.ಮ ‘ಪದೇ ಪದೇ ನನ್ನ ಮೇಲೆ ಏಕೆ ದಾಳಿ ನಡೆಸಲಾಗುತ್ತಿದೆ ಎಂದು ಸುಮ್ಮನೆ ಕ್ಷಣಕಾಲ ಯೋಚಿಸಿದೆ. ಇದರ ಹಿಂದಿನ ಶಕ್ತಿ ಯಾರು. ಅವರು ಏನು ಬಯಸಿದ್ದಾರೆ. ಇದರಿಂದ ಅವರು ಏನು ಸಾಧಿಸಲಿದ್ದಾರೆ’ ಎಂದು ಬಳಿಕ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ.ಘಟನೆ ಬಳಿಕ ಕೇಜ್ರಿವಾಲ್‌ ರಾಜ್‌ಘಾಟ್‌ಗೆ ತೆರಳಿದರು. 

ಖಂಡನೆ: ಘಟನೆಯನ್ನು ಕಾಂಗ್ರೆಸ್‌ ಮತ್ತು ಬಿಜೆಪಿ ಖಂಡಿಸಿವೆ. ‘ಯಾರು ಯಾರನ್ನೂ ಹೊಡೆಯು­ವಂತಿಲ್ಲ. ಇದು ಪ್ರಜಾ­ಪ್ರಭುತ್ವಕ್ಕೆ ವಿರುದ್ಧ ವಾದದ್ದು. ಇದನ್ನು ನಾವು ಬೆಂಬಲಿಸು­ವು­ದಿಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಕಪಿಲ್‌ ಸಿಬಲ್‌ ಹೇಳಿದ್ದಾರೆ. ‘ಇಂತಹದ್ದನ್ನು ನಾವು ಮಾನ್ಯ ಮಾಡುವುದಿಲ್ಲ. ಎಎಪಿ ಮುಖಂಡರು ಹೇಳು­ವುದು ಒಂದು, ಮಾಡುತ್ತಿ­ರುವುದು ಇನ್ನೊಂದು. ಹೀಗಾಗಿ ಇಂತಹ ಘಟನೆಗಳು ಮರುಕಳಿಸುತ್ತಿವೆ’ ಎಂದು ಬಿಜೆಪಿ ಮುಖಂಡ ವಿಜಯ್‌ ಗೊಯೆಲ್‌ ಪ್ರತಿಕ್ರಿಯಿಸಿದ್ದಾರೆ. ‘ಎಎಪಿ ಚಳವಳಿಯಿಂದ ಜನ ಪ್ರಭಾವಿತರಾಗಿದ್ದಾರೆ. ಕೆಲವರು ಇದನ್ನು ಹಳಿ ತಪ್ಪಿಸಲು ಪ್ರಯತ್ನಿಸುತ್ತಿ­ದ್ದಾರೆ’ ಎಂದು ಎಎಪಿ ಮುಖಂಡ ಮನೀಷ್‌ ಸಿಸೋಡಿಯಾ ಹೇಳಿದ್ದಾರೆ.

ನನ್ನ ಜೀವಕ್ಕೆ ಅಪಾಯ: ಕೇಜ್ರಿವಾಲ್‌
ನವದೆಹಲಿ (ಐಎಎನ್‌ಎಸ್‌): ‘ಪೂರ್ವ­ಯೋಜಿತ ಸಂಚಿನ ಪ್ರಕಾರ ಪದೇ ಪದೇ ನನ್ನ ಮೇಲೆ ದಾಳಿ ನಡೆಸಲಾಗುತ್ತಿದೆ. ಮತ್ತು ನನ್ನ ಜೀವಕ್ಕೆ ಅಪಾಯವಿದೆ’ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರು ಮಂಗಳವಾರ ಇಲ್ಲಿ ಹೇಳಿದ್ದಾರೆ.

ಆದರೆ, ಯಾವುದೇ ಕಾರಣಕ್ಕೂ ಭದ್ರತೆ­ಯನ್ನು ಪಡೆದುಕೊಳ್ಳುವುದಿಲ್ಲ ಎಂದಿದ್ದಾರೆ. ‘ಪೂರ್ವಯೋಜಿತ ರೀತಿಯಲ್ಲಿ ನನ್ನ ಮೇಲೆ ದಾಳಿ ನಡೆಸಲಾಗುತ್ತಿದೆ. ದಾಳಿಕೋರರನ್ನು ಬಂಧಿಸಿದಾಗಲೆಲ್ಲ ಅವರು ಒಂದೇ ತರಹದ  ಉತ್ತರ ನೀಡುತ್ತಿದ್ದಾರೆ’ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ‘ಕೇವಲ ನಮ್ಮ ಮೇಲೆ ಮಾತ್ರ ಏಕೆ ದಾಳಿ ನಡೆಯುತ್ತಿವೆ’ ಎಂದು ಪ್ರಶ್ನಿಸಿದ ಅವರು, ಎಎಪಿ ಹೊಸ ಶಕ್ತಿಯಾಗಿ ಹೊರಹೊಮ್ಮುವ ಮೂಲಕ ಹಲವು ಪಕ್ಷಗಳ ನಡುವಣ ಹೊಂದಾಣಿಕೆ ಹಾಳುಗೆಡವಿದೆ’ ಎಂದಿದ್ದಾರೆ.

‘ಮುಂದಿನ ದಿನಗಳಲ್ಲಿ ಇನ್ನಷ್ಟು ದಾಳಿ ನಡೆಯುತ್ತವೆ. ನನ್ನನ್ನು ಕೊಲೆ ಕೂಡ ಮಾಡಬಹುದು’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
‘ನನಗೆ ಭದ್ರತೆ ಬೇಕಾಗಿಲ್ಲ.  ಎಲ್ಲಿಯವರೆಗೆ ದೇವರು ನನ್ನನ್ನು ಜೀವಂತವಾಗಿಡಲು ಬಯಸುತ್ತಾನೊ ಅಲ್ಲಿಯವರೆಗೆ ಯಾರೂ ಕೂಡ ನನಗೆ ಯಾವುದೇ ರೀತಿಯ ಹಾನಿ ಮಾಡುವುದಕ್ಕೆ ಆಗುವುದಿಲ್ಲ. ನನ್ನ ಸಮಯ ಮುಗಿದಿದೆ ಎಂದು ದೇವರು ಭಾವಿಸಿದರೆ ನಾನು ಸಾಯುತ್ತೇನೆ. ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ’ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

ಕಳೆದ ನಾಲ್ಕು ದಿನಗಳಲ್ಲಿ ಕೇಜ್ರಿವಾಲ್‌ ಮೇಲೆ ನಡೆದ ಎರಡನೇ ಹಲ್ಲೆ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT