ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಡೊಸಲ್ಫಾನ್ ಅಧ್ಯಯನಕ್ಕೆ ಸಮಿತಿ

Last Updated 22 ಫೆಬ್ರುವರಿ 2011, 17:40 IST
ಅಕ್ಷರ ಗಾತ್ರ

ನವದೆಹಲಿ: ಕೇರಳ, ಕರಾವಳಿ ಕರ್ನಾಟಕದಲ್ಲಿ ಪ್ರತಿಕೂಲ ಪರಿಣಾಮ ಉಂಟುಮಾಡಿರುವ ವಿನಾಶಕಾರಿಯಾದ ‘ಎಂಡೊಸಲ್ಫಾನ್’ ಕೀಟನಾಶಕ ನಿಷೇಧ ಕುರಿತು ಖಚಿತ ಭರವಸೆ ನೀಡದ ಸರ್ಕಾರ, ಇದರ ಪರಿಣಾಮ   ಅಧ್ಯಯನಕ್ಕೆ ಪರಿಣಿತರ ಸಮಿತಿ ರಚಿಸಿರುವುದಾಗಿ ಮಂಗಳವಾರ ಹೇಳಿತು.

ವಿನಾಶಕಾರಿ ಎಂಡೊಸಲ್ಫಾನ್ ಜನ ಮತ್ತು ಜಾನುವಾರಿನ ಮೇಲೆ ಮಾಡಿರುವ ಪರಿಣಾಮ ಕುರಿತು ಭಾರತೀಯ ವೈದ್ಯ ಮಂಡಳಿ ತಜ್ಞರು ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಕೊಡಲಿದ್ದಾರೆ. ವರದಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಆಹಾರ ಖಾತೆ ಸಚಿವ ಶರದ್ ಪವಾರ್ ಲೋಕಸಭೆಗೆ ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಕೇರಳದ ಸದಸ್ಯ ಕೆ.ಸುಧಾಕರನ್ ಕೇಳಿದ ಪ್ರಶ್ನೆಗೆ, ಸಚಿವರು ಉತ್ತರಿಸಿದರು. ಕರ್ನಾಟಕದ ಸದಸ್ಯರಾದ ಧ್ರುವನಾರಾಯಣ್, ಡಿ. ವಿ. ಸದಾನಂದಗೌಡ ದನಿಗೂಡಿಸಿದರು. ಸದಾನಂದ ಗೌಡರು ಈ ವಿಷಯ ಪ್ರಸ್ತಾಪ ಮಾಡಿದ್ದು ಶೂನ್ಯ ವೇಳೆಯಲ್ಲಿ.

ಕೇರಳದ ಕಾಸರಗೋಡು ಮತ್ತು ಕರಾವಳಿ ಕರ್ನಾಟಕದಲ್ಲಿ ಎಂಡೊಸಲ್ಫಾನ್ ಅಪಾಯಕಾರಿ ಪರಿಣಾಮ ಮಾಡಿದೆ. ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಇದನ್ನು ನಿಷೇಧಿಸಿದೆ. ಕರ್ನಾಟಕ ಸರ್ಕಾರ  ಕೂಡಾ ಈಚೆಗೆ ಇದೇ ಕ್ರಮ ಕೈಗೊಂಡಿದೆ.ಕೀಟನಾಶಕ ಬಳಕೆಗೆ ಸಂಬಂಧಿಸಿದಂತೆ ಬೇರೆ ಬೇರೆ ರಾಜ್ಯಗಳು   ಬೇರೆ ಬೇರೆ ನಿಲುವು ತಳೆದಿವೆ ಎಂದರು. ಜನರ ಆತಂಕಕ್ಕೆ ಕಾರಣವಾಗಿರುವ ಕೀಟನಾಶಕದ ಪರಿಣಾಮ ಕುರಿತು ಕೇಂದ್ರ ಸರ್ಕಾರ 1991ರಿಂದ 2004ರವರೆಗೆ 4 ಸಮಿತಿಗಳನ್ನು ರಚಿಸಿದೆ.

ಎಲ್ಲ ಸಮಿತಿಗಳು ಇದರಿಂದ ಹಾನಿ ಇಲ್ಲ ಎಂಬುದಾಗಿ ವರದಿ ಕೊಟ್ಟಿವೆ ಎಂದರು. ಸುಮಾರು 60ದೇಶಗಳಲ್ಲಿ ಕೀಟನಾಶಕ ನಿಷೇಧ ಆಗಿದೆ. 40 ದೇಶಗಳಲ್ಲಿ ಬಳಕೆಯಲ್ಲಿದೆ. ಆಸ್ಟ್ರೇಲಿಯಾ, ಚೀನಾ ಮತ್ತು ಬ್ರೆಜಿಲ್‌ಗಳು ಈಗಲೂ ಇದನ್ನು ಉಪಯೋಗ ಮಾಡುತ್ತಿವೆ ಎಂದರು.

ಎಂಡೊಸಲ್ಫಾನ್ ಸಮಸ್ಯೆಯೇ ಅಲ್ಲ. ಸಮಸ್ಯೆ ಇರುವುದು ಬಳಕೆ ವಿಧಾನದಲ್ಲಿ. ವೈಮಾನಿಕ ಸಿಂಪರಣೆ ಎರಡು ರಾಜ್ಯಗಳಲ್ಲಿ ಅಪಾಯಕಾರಿ ಪರಿಣಾಮಕ್ಕೆ ಕಾರಣವಾಗಿದೆ. ನಿರ್ದಿಷ್ಟ ಮಾರ್ಗಸೂಚಿ ಅನುಸರಿಸಿದ್ದರೆ ಕೆಟ್ಟ ಪರಿಣಾಮ ಆಗುತ್ತಿರಲಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಈ ಕೀಟನಾಶಕ ಕೇರಳದಲ್ಲಿ 400 ಜನರನ್ನು ಬಲಿ ತೆಗೆದುಕೊಂಡಿದೆ.

4000ಜನರು ಅಸ್ವಸ್ಥರಾಗಿದ್ದಾರೆ. ಈ ಜನರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಶೂನ್ಯ ವೇಳೆಯಲ್ಲಿ ಇದೇ ವಿಷಯ ಪ್ರಸ್ತಾಪಿಸಿದ ಸದಾನಂದಗೌಡರು, ಕರ್ನಾಟಕ ಸರ್ಕಾರ ಇದನ್ನು ನಿಷೇಧ ಮಾಡಿದೆ. ರಾಜ್ಯ ಸರ್ಕಾರಕ್ಕೆ ಮೂರು ತಿಂಗಳು ಮಾತ್ರ ಇದನ್ನು ನಿಷೇಧಿಸುವ ಅಧಿಕಾರವಿದೆ. ಕೇಂದ್ರ ಅಗತ್ಯ ತೀರ್ಮಾನ ಮಾಡಬೇಕು ಎಂದು ಆಗ್ರಹಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT