ಲಖನೌ/ನವದೆಹಲಿ: ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆರಂಭಿಸಿದೆ. ಸುದೀರ್ಘ ಕಾಲದಿಂದ ಬಾಕಿ ಇರುವ ವಿವಾದಕ್ಕೆ ಪರಿಹಾರ ದೊರೆಯಬಹುದು ಎಂಬ ಆಶಾವಾದ ಹುಟ್ಟಿದೆ. ಆದರೆ, 1992ರ ಡಿಸೆಂಬರ್ 6ರಂದು ಸಾವಿರಾರು ಕರಸೇವಕರಿಂದ ನಾಶವಾದ ಬಾಬರಿ ಮಸೀದಿ ಪ್ರಕರಣದ ವಿಚಾರಣೆ 25 ವರ್ಷಗಳ ಬಳಿಕವೂ ಕುಂಟುತ್ತಲೇ ಸಾಗಿದೆ.

ಈಗ, ಪ್ರಾಸಿಕ್ಯೂಷನ್ ಸಾಕ್ಷಿಗಳು ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಗಳನ್ನು ದಾಖಲಿಸಲು ಆರಂಭಿಸಿದ್ದಾರೆ. ಇದಾದ ಬಳಿಕ, ಪ್ರತಿವಾದಿಗಳ ಪರ ಸಾಕ್ಷ್ಯಗಳ ಹೇಳಿಕೆ ದಾಖಲಾಗಬೇಕು.

ಪ್ರಾಸಿಕ್ಯೂಷನ್ ಪರವಾಗಿ 196 ಸಾಕ್ಷಿಗಳಿದ್ದಾರೆ. ಈವರೆಗೆ 60 ಸಾಕ್ಷಿಗಳ ಹೇಳಿಕೆಯಷ್ಟೇ ದಾಖಲಾಗಿದೆ. ಇವರ ಹೇಳಿಕೆ ದಾಖಲಾದ ಬಳಿಕ ಪ್ರತಿವಾದಿಗಳ ವಕೀಲರು ಇವರನ್ನು ಪಾಟೀ ಸವಾಲಿಗೆ ಒಳಪಡಿಸಬಹುದು ಎಂದು ಪ್ರಕರಣಕ್ಕೆ ಸಂಬಂಧಿಸಿದ ವಕೀಲರು ಹೇಳುತ್ತಾರೆ.

ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದ ಪ್ರಕರಣದ ಮುಖ್ಯ ದೂರುದಾರರಾದ ಹಾಶಿಂ ಅನ್ಸಾರಿ, ಮಹಾಂತ ರಾಮಚಂದ್ರ ಪರಮಹಂಸ ದಾಸ ಮತ್ತು ಮಹಾಂತ ಭಾಸ್ಕರ ದಾಸ ನಿಧನರಾಗಿದ್ದಾರೆ. ಅನ್ಸಾರಿ ಅವರು ಈ ಪ್ರಕರಣದ ಅತ್ಯಂತ ಹಳೆಯ ಫಿರ್ಯಾದಿ.

ಮಸೀದಿ ಧ್ವಂಸ ಪ್ರಕರಣವು ಅತ್ಯಂತ ಸಂಕೀರ್ಣವಾದುದಾಗಿದ್ದು ತ್ವರಿತವಾಗಿ ವಿಚಾರಣೆ ಮುಗಿಸುವುದು ಸಾಧ್ಯವಿಲ್ಲ ಎಂಬುದು ಕಾನೂನು ಪರಿಣತರ ಅಭಿಪ್ರಾಯ. ‘ಕಾಲಮಿತಿಯಲ್ಲಿ ಪ್ರಕರಣದ ವಿಚಾರಣೆ ಪೂರ್ಣಗೊಳಿಸುವಂತೆ ಮತ್ತು ದಿನವೂ ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಹೇಳಿದೆ. ಹಾಗಾಗಿ ವಿಚಾರಣೆ ವೇಗ ಪಡೆದುಕೊಳ್ಳಲಿದೆ’ ಎಂದು ಪ್ರಕರಣದ ವಕೀಲರು ಹೇಳುತ್ತಾರೆ.

ಬಿಜೆಪಿಯ ಹಿರಿಯ ಮುಖಂಡರಾದ ಎಲ್.ಕೆ. ಅಡ್ವಾಣಿ, ಉಮಾಭಾರತಿ, ಮುರಳಿ ಮನೋಹರ ಜೋಷಿ ಅವರ ವಿರುದ್ಧ ವಿಶೇಷ ನ್ಯಾಯಾಲಯವು ಷಡ್ಯಂತ್ರ ಆರೋಪದಲ್ಲಿ ದೋಷಾರೋಪ ನಿಗದಿ ಮಾಡಿದೆ.

ಅಡ್ವಾಣಿ, ಜೋಷಿ ಮತ್ತು ಉಮಾಭಾರತಿ ಅವರ ವಿರುದ್ಧದ ಅಪರಾಧ ಒಳಸಂಚು ಆರೋಪಗಳ ಬಗ್ಗೆ ಮತ್ತೆ ವಿಚಾರಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಈ ಹಿಂದೆ ಹೇಳಿತ್ತು. ಪ್ರಕರಣವನ್ನು ರಾಯಬರೇಲಿ ವಿಶೇಷ ನ್ಯಾಯಾಲಯದಿಂದ ಲಖನೌ ನ್ಯಾಯಾಲಯಕ್ಕೆ ವರ್ಗಾಯಿಸಿದೆ. ಈ ಪ್ರಕರಣದ ಬಗ್ಗೆ ದಿನವೂ ವಿಚಾರಣೆ ನಡೆಸಬೇಕು ಎಂದೂ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಎರಡು ವರ್ಷಗಳಲ್ಲಿ ವಿಚಾರಣೆ ಪೂರ್ಣಗೊಳಿಸುವಂತೆ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಎರಡು ವರ್ಷಗಳಲ್ಲಿ ವಿಚಾರಣೆ ಪೂರ್ಣಗೊಳಿಸುವುದು ಅಸಾಧ್ಯವಲ್ಲದಿದ್ದರೂ ಸುಲಭವಲ್ಲ ಎಂಬುದು ಪರಿಣತರ ಅಭಿಪ್ರಾಯ.

ಮೇಲ್ಮನವಿ ವಿಚಾರಣೆಗೆ ವರ್ಷ ಬೇಕಿಲ್ಲ: ಸುಪ್ರೀಂ ಕೋರ್ಟ್

ರಾಮಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದದ ಮೇಲ್ಮನವಿಯ ವಿಚಾರಣೆಗೆ ಒಂದು ವರ್ಷ ಬೇಕಾಗದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.

ಅಲಹಾಬಾದ್ ಹೈಕೋರ್ಟ್ 2010ರಲ್ಲಿ ನೀಡಿರುವ ತೀರ್ಪಿನ ಮೇಲ್ಮನವಿಯ ವಿಚಾರಣೆಗೆ ಕನಿಷ್ಠ ಒಂದು ವರ್ಷ ಬೇಕು ಎಂದು ಸುನ್ನಿ ವಕ್ಫ್ ಮಂಡಳಿ ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ಪ್ರತಿಪಾದಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸುಪ್ರೀಂ ಕೋರ್ಟ್, ‘90 ದಿನ ವಿಚಾರಣೆ ನಡೆಸಿ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ. ಮೇಲ್ಮನವಿಯ ವಿಚಾರಣೆಗೆ ಅಷ್ಟು ಸಮಯ ಬೇಕಾಗದು’ ಎಂದು ಹೇಳಿದೆ.

ಮೇಲ್ಮನವಿಯ ವಿಚಾರಣೆಗೆ ಭಾರಿ ಸಮಯ ಬೇಕು, ಕನಿಷ್ಠ ಪಕ್ಷ ಒಂದು ವರ್ಷವಾದರೂ ಬೇಕು. ಹಾಗಾಗಿ ವಿಚಾರಣೆಯನ್ನು ಈಗ ಕೈಗೆತ್ತಿಕೊಳ್ಳಬಾರದು ಎಂದು ಮುಸ್ಲಿಂ ದೂರುದಾರರ ಪರವಾಗಿ ಹಾಜರಾದ ವಕೀಲರಾದ ಕಪಿಲ್ ಸಿಬಲ್, ರಾಜೀವ್ ಧವನ್ ಮತ್ತು ದುಷ್ಯಂತ ದವೆ ವಾದಿಸಿದರು. ಹತ್ತನೇ ಶತಮಾನದಷ್ಟು ಹಿಂದಿನ ವಿಚಾರ ಇದು. ಹಾಗಾಗಿ ಇದನ್ನು ಸಾಮಾನ್ಯ ನಿವೇಶನ ವಿವಾದ ಎಂದು ಪರಿಗಣಿಸಬಾರದು ಎಂದು ಧವನ್ ವಾದಿಸಿದ್ದಾರೆ.

ಡಿ. 5ರಂದು ವಿಚಾರಣೆ ಆರಂಭಿಸಲಾಗುವುದು ಎಂದು ಆಗಸ್ಟ್ 11ರಂದೇ ಸುಪ್ರೀಂ ಕೋರ್ಟ್ ನಿರ್ಧರಿಸಿತ್ತು. ಸುಪ್ರೀಂ ಕೋರ್ಟ್‌ನ ಈ ಆದೇಶವನ್ನು ನಿರ್ಲಕ್ಷ್ಯದಿಂದ ಕಾಣಬಾರದು ಎಂದು ರಾಮಜನ್ಮಭೂಮಿ ನ್ಯಾಸ ಮತ್ತು ಇತರರ ಪರವಾಗಿ ವಾದಿಸುತ್ತಿರುವ ಹರೀಶ್ ಸಾಳ್ವೆ ಹೇಳಿದರು. ಹೈಕೋರ್ಟ್ ನೀಡಿರುವ ತೀರ್ಪು ತಪ್ಪೇ ಸರಿಯೇ ಎಂಬುದನ್ನಷ್ಟೇ ಸುಪ್ರೀಂ ಕೋರ್ಟ್ ಹೇಳಬೇಕಿದೆ ಎಂದು ಸಾಳ್ವೆ ಪ್ರತಿಪಾದಿಸಿದರು.

ಅಲಹಾಬಾದ್ ಹೈಕೋರ್ಟ್‌ನ ತೀರ್ಪು ಏನು?

ವಿವಾದಿತ ನಿವೇಶನವನ್ನು ಮೂರು ಭಾಗಗಳಾಗಿ ವಿಂಗಡಿಸಬೇಕು; ದೂರುದಾರರಾದ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾಡ ಮತ್ತು ರಾಮ ಲಲ್ಲಾಗೆ ಒಂದೊಂದು ಭಾಗವನ್ನು ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ತ್ರಿಸದಸ್ಯ ಪೀಠದ ಒಬ್ಬರು ನ್ಯಾಯಮೂರ್ತಿ ಈ ತೀರ್ಪಿಗೆ ಭಿನ್ನಮತ ವ್ಯಕ್ತಪಡಿಸಿದ್ದರು.

13 ಮೇಲ್ಮನವಿ

ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ 13 ಮೇಲ್ಮನವಿಗಳು ಸಲ್ಲಿಕೆಯಾಗಿವೆ.ಪ್ರಕರಣಕ್ಕೆ ಸಂಬಂಧಿಸಿದ ಈ ದಾಖಲೆಗಳೇ ಒಟ್ಟು 8 ಭಾಷೆಗಳಲ್ಲಿವೆ. ಅವುಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ ಕೊಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಈ ದಾಖಲೆಗಳೇ ಪ್ರಮುಖ ಆಧಾರವಾಗಿರಲಿವೆ.

ಮತ್ತೊಂದು ಅರ್ಜಿ

ರಾಮಜನ್ಮಭೂಮಿ–ಬಾಬರಿ ಮಸೀದಿ ವಿವಾದವು ಒಂದು ನಿವೇಶನಕ್ಕೆ ಸೀಮಿತವಾದುದಲ್ಲ. ದೇಶದ ಜಾತ್ಯತೀತ ಹೆಣಿಗೆಯ ಮೇಲೆ ದೂರಗಾಮಿ ಪರಿಣಾಮ ಬೀರಬಲ್ಲ ಹಲವು ಅಂಶಗಳು ಈ ವಿವಾದದಲ್ಲಿ ಒಳಗೊಂಡಿವೆ. ವಿಚಾರಣೆಯಲ್ಲಿ ಈ ಎಲ್ಲವನ್ನೂ ಸುಪ್ರೀಂ ಕೋರ್ಟ್ ಗಣನೆಗೆ ತೆಗೆದುಕೊಳ್ಳಬೇಕು ಎಂದು ನಾಗರಿಕ ಹಕ್ಕು ಕಾರ್ಯಕರ್ತರ ಗುಂಪೊಂದು ಇತ್ತೀಚೆಗೆ ಅರ್ಜಿ ಸಲ್ಲಿಸಿದೆ.

ಸಂಧಾನ ಯತ್ನ

ವಿವಾದಕ್ಕೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳುವುದಾಗಿ ಉತ್ತರ ಪ್ರದೇಶದ ಶಿಯಾ ಕೇಂದ್ರ ವಕ್ಫ್ ಮಂಡಳಿಯು ಸುಪ್ರೀಂ ಕೋರ್ಟ್‌ಗೆ ಇತ್ತೀಚೆಗೆ ಹೇಳಿತ್ತು. ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣ ಮಾಡಿ, ಅಯೋಧ್ಯೆಯಿಂದ ಸ್ವಲ್ಪ ದೂರದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇರುವಲ್ಲಿ ಮಸೀದಿ ನಿರ್ಮಿಸಬಹುದು ಎಂಬ ಪ್ರಸ್ತಾವವನ್ನು ಮಂಡಳಿಯು ಮುಂದಿರಿಸಿತ್ತು.

ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್ ಅವರು ಎರಡೂ ಪಂಗಡಗಳ ಜತೆಗೆ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಲು ನೆರವಾಗುವುದಾಗಿ ಇತ್ತೀಚೆಗೆ ಹೇಳಿದ್ದರು. ಆದರೆ, ಈ ಎರಡೂ ಸಂಧಾನ ಪ್ರಸ್ತಾವಗಳನ್ನು ನಿವೇಶನ ವಿವಾದದ ದೂರುದಾರರು ತಿರಸ್ಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.