ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪದ್ಮಾವತಿ’ ಪ್ರವೇಶಕ್ಕೆ ಗುಜರಾತ್‌ನಲ್ಲೂ ತಡೆ

Last Updated 22 ನವೆಂಬರ್ 2017, 13:35 IST
ಅಕ್ಷರ ಗಾತ್ರ

ಅಹಮದಾಬಾದ್‌: ಸಿನಿಮಾ ಬಿಡುಗಡೆಗೂ ಮುನ್ನವೇ ಪ್ರತಿಭಟನೆಯ ಬಿಸಿ ಎದುರಿಸುತ್ತಿರುವ ಪದ್ಮಾವತಿ ಚಿತ್ರವನ್ನು ಗುಜರಾತ್‌ ಸರ್ಕಾರವೂ ನಿಷೇಧಿಸಿದೆ!

ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಗುಜರಾತ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪದ್ಮಾವತಿ ಚಿತ್ರ ಬಿಡುಗಡೆಗೆ ಅವಕಾಶ ನೀಡದಿರಲು ಗೃಹ ಇಲಾಖೆ ನಿರ್ಧರಿಸಿದೆ. ರಾಜ್ಯದಲ್ಲಿ ಯಾವುದೇ ರೀತಿ ವಿವಾದ ಸೃಷ್ಟಿಯಾಗಲು ಆಸ್ಪದ ನೀಡುವುದಿಲ್ಲ ಎಂದು  ಮುಖ್ಯಮಂತ್ರಿ ವಿಜಯ್‌ ರೂಪಾನಿ ತಿಳಿಸಿದ್ದಾರೆ.

ಚಿತ್ರದಲ್ಲಿ ರಜಪೂತ ರಾಣಿ ಪದ್ಮಿನಿಯನ್ನು ಆಕ್ಷೇಪಾರ್ಹವಾಗಿ ಚಿತ್ರಿಸಿ, ಇತಿಹಾಸವನ್ನೇ ತಿರುಚಲಾಗಿದೆ ಎಂದು ರಜಪೂತ ಸಮುದಾಯ ಸೇರಿ ಹಲವು ಸಂಘಟನೆಗಳು ಪದ್ಮಾವತಿ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಮಧ್ಯಪ್ರದೇಶದಲ್ಲಿ ಚಿತ್ರ ಬಿಡುಗಡೆಯನ್ನು ನಿಷೇಧಿಸಿದ ಬೆನ್ನಲೇ ಗುಜರಾತ್‌ ಸರ್ಕಾರ ತನ್ನ ನಿರ್ಧಾರ ಘೋಷಿಸಿದೆ.

ಡಿ.9 ಹಾಗೂ ಡಿ.14ರಂದು ಎರಡು ಹಂತಗಳಲ್ಲಿ ಗುಜತಾರ್ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಿಗದಿಯಾಗಿದೆ. ರಜಪೂತ ಸಮುದಾಯದವರ ಭಾವನೆಗಳಿಗೆ ಧಕ್ಕೆಯಾಗುವಂತಹ ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದು ಹಾಕುವಂತೆ ರಾಜಸ್ಥಾನ ಹಾಗೂ ಉತ್ತರ ಪ್ರದೇಶ ರಾಜ್ಯಗಳು ಸಹ ಆಗ್ರಹಿಸಿವೆ.

ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಚಿತ್ರದಲ್ಲಿ ಪದ್ಮಿನಿ ಮತ್ತು ಅಲ್ಲಾವುದ್ದೀನ್‌ ಖಿಲ್ಜಿ ನಡುವೆ ಪ್ರಣಯವಿದ್ದಂತೆ ಚಿತ್ರಿಸಲಾಗಿದೆ ಎಂದು ಪ್ರತಿಭಟನೆ ನಡೆಸಲಾಗುತ್ತಿದೆ. ರಾಣಿ ಪದ್ಮಾವತಿ ತನ್ನ ಸತಿತ್ವ ಕಾಪಾಡುವುದು ಹಾಗೂ ಮೊಘಲರಿಗೆ ಶರಣಾಗುವುದರ ಬದಲಾಗಿ ಅಗ್ನಿ ಪ್ರವೇಶ ಮಾಡಿ, ತನ್ನನ್ನು ತಾನೇ ಸುಟ್ಟುಕೊಂಡಿದ್ದರು ಎಂಬ ಇತಿಹಾಸದಲ್ಲಿ ಅನೇಕರ ನಂಬಿಕೆ ಇದೆ.

ಡಿ.1ಕ್ಕೆ ನಿಗದಿಯಾಗಿದ್ದ ಚಿತ್ರ ಬಿಡುಗಡೆಯನ್ನು ಮುಂದೂಡಲಾಗಿದ್ದು, ಸೆನ್ಸಾರ್‌ ಮಂಡಳಿ ಪ್ರಮಾಣ ಪತ್ರ ದೊರೆತ ನಂತರವಷ್ಟೇ ಬಿಡುಗಡೆ ದಿನಾಂಕ ನಿರ್ಧರಿಸುವುದಾಗಿ ಚಿತ್ರ ನಿರ್ಮಾಣ ಸಂಸ್ಥೆ ವಯಕಾಮ್‌18 ಮೋಷನ್‌ ಪಿಕ್ಚರ್ಸ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT