ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದಕ ಹಿಂದೂ ಹೇಳಿಕೆ ನೀಡಿದ್ದ ಕಮಲ್‌ ಹಾಸನ್ ವಿರುದ್ಧ ಕ್ರಮಕ್ಕೆ ಸೂಚನೆ

Last Updated 16 ಮೇ 2019, 1:31 IST
ಅಕ್ಷರ ಗಾತ್ರ

ನವದೆಹಲಿ: ‘ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ, ಆತ ನಾಥುರಾಂ ಗೋಡ್ಸೆ’ ಎಂಬ ನಟ ಕಮಲ್‌ ಹಾಸನ್‌ ಅವರ ಹೇಳಿಕೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್‌ ಬುಧವಾರ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.

ಕಮಲ್‌ ಹಾಸನ್‌ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ‘ಇದು ನಮ್ಮ ಕಾರ್ಯವ್ಯಾಪ್ತಿಗೆ ಬರುವುದಿಲ್ಲ’ ಎಂದು ಅದನ್ನು ವಿಚಾರಣೆಗೆ ಎತ್ತಿಕೊಳ್ಳಲು ನಿರಾಕರಿಸಿದ ನ್ಯಾಯಮೂರ್ತಿಗಳಾದ ಜಿ.ಎಸ್‌. ಸಿಸ್ತಾನಿ ಹಾಗೂ ಜ್ಯೋತಿ ಸಿಂಗ್‌ ಅವರನ್ನೊಳಗೊಂಡ ಪೀಠವು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಯೋಗಕ್ಕೆ ಸೂಚನೆ ನೀಡಿದೆ.

‘ಕಮಲ್‌ ಅವರು ತಮ್ಮ ಪಕ್ಷದ ಅಭ್ಯರ್ಥಿಯ ಪರ ಮತಗಳಿಸಲು ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಉದ್ದೇಶ ಪೂರ್ವಕವಾಗಿ ಈ ಹೇಳಿಕೆ ನೀಡಿದ್ದರು. ಇದು ನೀತಿ ಸಂಹಿತೆಯ ಉಲ್ಲಂಘನೆ’ ಎಂದು ಉಪಾಧ್ಯಾಯ ವಾದಿಸಿದ್ದರು.

ಗೋಡ್ಸೆ ಬಗ್ಗೆ ತಾನು ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕಮಲ್‌ ಹಾಸನ್‌, ‘ನಾನು ಚಾರಿತ್ರಿಕ ಸತ್ಯವನ್ನು ನುಡಿದಿದ್ದೇನೆ. ಆದರೆ ಮಾಧ್ಯಮಗಳು ನನ್ನ ಹೇಳಿಕೆಯನ್ನು ತಿರುಚಿವೆ’ ಎಂದಿದ್ದಾರೆ.

ಜಾಮೀನು ಅರ್ಜಿ:ಕಮಲ್‌ ಹಾಸನ್‌ ಬುಧವಾರ ಮದ್ರಾಸ್‌ ಹೈಕೋರ್ಟ್‌ಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು, ‘ನನ್ನ ಹೇಳಿಕೆ ಗೋಡ್ಸೆಗೆ ಮಾತ್ರ ಸೀಮಿತವಾಗಿತ್ತು. ಒಟ್ಟಾರೆ ಹಿಂದೂಗಳನ್ನು ಉದ್ದೇಶಿಸಿದ್ದಾಗಿರಲಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT