ಪಣಜಿ (ಗೋವಾ): ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನವನ್ನು ಕೊನೆಗೂ ದಕ್ಕಿಸಿಕೊಳ್ಳುವ ಮೂಲಕ ಬಿಜೆಪಿಯ `ಪ್ರಶ್ನಾತೀತ ನಾಯಕ'ರಾಗಿ ಬೆಳೆದು ನಿಂತಿದ್ದಾರೆ. ನಾಯಕತ್ವಕ್ಕಾಗಿ ನಡೆದ ಹೋರಾಟದಲ್ಲಿ ಮೋದಿ ಗೆದ್ದಿದ್ದಾರೆ. `ಶಿಷ್ಯ ಮೋದಿ ನಾಗಾಲೋಟ'ಕ್ಕೆ ಕಡಿವಾಣ ಹಾಕಲು ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಸೋತಿದ್ದಾರೆ.

ಹೆಚ್ಚುಕಡಿಮೆ ಹತ್ತು ವರ್ಷಗಳಿಂದ ಅಧಿಕಾರವಿಲ್ಲದೆ `ಹಸಿದ ಹುಲಿ'ಗಳಂತಾಗಿರುವ ಬಿಜೆಪಿ ನಾಯಕರು ಅಧಿಕಾರ ಹಿಡಿಯಲು ಹಂಬಲಿಸುತ್ತಿದ್ದಾರೆ. ಸದ್ಯ ಪಕ್ಷವನ್ನು ಅಧಿಕಾರಕ್ಕೆ ತರಬಲ್ಲ ಸಾಮರ್ಥ್ಯವೇನಾದರೂ ಇದ್ದರೆ ನರೇಂದ್ರ ಮೋದಿ ಅವರಿಗೆ ಮಾತ್ರ ಎಂದು ಭಾವಿಸಿದ್ದಾರೆ. ಅವರ `ಜನಪ್ರಿಯತೆ' ಮೇಲೆ ಸವಾರಿ ಮಾಡಲು ಹೊರಟಿದ್ದಾರೆ. ಬಿಜೆಪಿ, ಸಂಘ- ಪರಿವಾರ ಮೋದಿ ಅವರ ಹಿಂದೆ ನಿಂತಿದೆ.

`ಮೋದಿ ಬಿಜೆಪಿಗೆ ಅನಿವಾರ್ಯ' ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಪ್ರಚಾರ ಸಮಿತಿ ನೇತೃತ್ವ ಅವರಿಗೆ ಸಿಕ್ಕಿದ್ದರೂ `ಪ್ರಧಾನಿ ಅಭ್ಯರ್ಥಿ' ಎಂದು ಬಿಂಬಿಸುವ ತೀರ್ಮಾನ ಆಗಿಲ್ಲ. ಈ ಬಗ್ಗೆ ಪಕ್ಷ ಇನ್ನೂ ಬಾಯಿ ಬಿಟ್ಟಿಲ್ಲ. ಆದರೆ, ಪಕ್ಷದೊಳಗೆ ಬೀಸುತ್ತಿರುವ ಮೋದಿ ಪರ `ಬಿರುಗಾಳಿ' ಯಾರೂ ವಿರುದ್ಧವಾಗಿ ಹೋಗಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಿಸಿದೆ. ಅಕಸ್ಮಾತ್ ಹೋದರೂ ಉಳಿಯುವುದು ಕಷ್ಟ. ಇದಕ್ಕೆ ಅಡ್ವಾಣಿ ಅವರೇ ತಾಜಾ ಉದಾಹರಣೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ `ಪ್ರಧಾನಿ ಅಭ್ಯರ್ಥಿ' ಎಂದು ಬಿಂಬಿತವಾಗಿದ್ದ ಹಿರಿಯ ನಾಯಕ ಈಗ ಅಪ್ರಸ್ತುತವಾಗಿದ್ದಾರೆ. `ಗೋವಾದ ಕಾರ್ಯಕಾರಿಣಿ ನಿರ್ಧಾರದಿಂದ ಅಡ್ವಾಣಿ ರಾಜಕೀಯ ಅಂತ್ಯವಾದಂತೆ' ಎಂಬ ವ್ಯಾಖ್ಯಾನಗಳು ಬಿಜೆಪಿಯೊಳಗೆ ನಡೆಯುತ್ತಿದೆ. ಅಡ್ವಾಣಿ ಅವರನ್ನು ಬೆಂಬಲಿಸಿ ಕಾರ್ಯಕಾರಿಣಿಗೆ ಗೈರು ಹಾಜರಾದ ಉಮಾ ಭಾರತಿ, ಮೇನಕಾ ಗಾಂಧಿ, ವರುಣ್ ಗಾಂಧಿ, ಯಶವಂತ ಸಿನ್ಹಾ, ಜಸ್ವಂತ್ ಸಿಂಗ್ ಸೇರಿದಂತೆ ಅನೇಕರ ಮುಂದಿನ ದಾರಿ ಏನು? ಇವರೆಲ್ಲ ಅಡ್ವಾಣಿ ಅವರಿಗೆ `ಗುಡ್ಬೈ' ಹೇಳಿ `ಮೋದಿ ಆಶ್ರಯ'ಕ್ಕೆ ಮರಳುವರೆ ಎಂಬ ಚರ್ಚೆ ನಡೆಯುತ್ತಿದೆ.

ಹೋದ ವರ್ಷ ನವೆಂಬರ್ನಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆ ಗೆದ್ದ ಬಳಿಕ ನರೇಂದ್ರ ಮೋದಿ ಬಿಜೆಪಿಯ ಅತ್ಯಂತ ಪ್ರಬಲ ನಾಯಕರಾಗಿ ಬೆಳೆದು ನಿಂತಿದ್ದಾರೆ. ಇದು ಅವರ ಮೂರನೇ ಗೆಲವು. ಮೊನ್ನೆ ಉಪ ಚುನಾವಣೆಯಲ್ಲಿ ಎಲ್ಲ ಸೀಟುಗಳನ್ನು ಬಾಚಿಕೊಂಡ ಮೇಲಂತೂ ಅವರ ಜನಪ್ರಿಯತೆ `ಗ್ರಾಫ್' ಏರಿದೆ. ಕೇಶುಭಾಯ್ ಪಟೇಲ್ 2001ರಲ್ಲಿ ಉಪ ಚುನಾವಣೆ ಸೋತು ಅನಿವಾರ್ಯವಾಗಿ ರಾಜೀನಾಮೆ ಕೊಟ್ಟಾಗ ಅವರ ಉತ್ತರಾಧಿಕಾರಿಯಾಗಿದ್ದು ಮೋದಿ. ಇವರ ಹೆಸರನ್ನು ಸೂಚಿಸಿದವರು ಸ್ವತಃ ಅಡ್ವಾಣಿ. ಗುಜರಾತಿನ ಮುಖ್ಯಮಂತ್ರಿ ಈಗ ಅಡ್ವಾಣಿ ಅವರನ್ನೇ ಮೀರಿಸಿದ್ದಾರೆ.

ಕೈಕೊಟ್ಟ ಅಡ್ವಾಣಿ ತಂತ್ರ: ಮೋದಿ ಅವರನ್ನು ಕಟ್ಟಿಹಾಕಲು ಅಡ್ವಾಣಿ ಬಳಸಿದ ತಂತ್ರಗಳು ಕೈಕೊಟ್ಟಿವೆ. `ನವೆಂಬರ್ ನಂತರ ನಡೆಯುವ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆ ಪ್ರಚಾರದ ಹೊಣೆಯನ್ನು ನಿತಿನ್ ಗಡ್ಕರಿ ಅವರಿಗೆ ವಹಿಸಬೇಕು' ಎಂದು ಹಿರಿಯ ನಾಯಕ ಪ್ರತಿಪಾದಿಸಿದ್ದರು. ಆದರೆ, ಗಡ್ಕರಿ ಎರಡನೆ ಸಲ ಅಧ್ಯಕ್ಷರಾಗುವುದನ್ನು ತಪ್ಪಿಸಲು ಅವರು ಏನೇನು ಮಾಡಿದರೆಂದು ಬಿಜೆಪಿ ನಾಯಕರಿಗೆ ಚೆನ್ನಾಗಿ ಗೊತ್ತಿದೆ.

ಪಾಕಿಸ್ತಾನಕ್ಕೆ ಹೋಗಿದ್ದಾಗ ಮಹಮದ್ ಅಲಿ ಜಿನ್ನಾ ಅವರನ್ನು `ಜಾತ್ಯತೀತ ನಾಯಕ' ಎಂದು ಬಣ್ಣಿಸಿ ಅಡ್ವಾಣಿ ಸಂಘ- ಪರಿವಾರದ ವಿರೋಧ ಕಟ್ಟಿಕೊಂಡರು. ಅಲ್ಲಿಂದಲೇ ಅವರಿಗೆ ಕೆಟ್ಟ ಗಳಿಗೆ ಶುರುವಾಗಿದ್ದು. ಅನಂತರ ಪಕ್ಷದೊಳಗೆ ಒಂದೊಂದೇ ಸ್ಥಾನ ಕೈತಪ್ಪಿತು.

ಅಡ್ವಾಣಿ ಈಗ ಏಕಾಂಗಿ: ಈಚೆಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ಸಿಂಗ್ ಚೌಹಾಣ್ ಅವರನ್ನು ಅಡ್ವಾಣಿ ಹೊಗಳಿದರು. ಚೌಹಾಣ್ ತಮ್ಮ ರಾಜ್ಯದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ.

ಈ ಕೆಲಸದ ಮುಂದೆ `ಗುಜರಾತ್ ಅಭಿವೃದ್ಧಿ ಪೇಲವ' ಎಂದು ವಿಶ್ಲೇಷಿಸಿದರು. ಅಡ್ವಾಣಿ ಅಷ್ಟಕ್ಕೆ ಸುಮ್ಮನಾಗದೆ ವಾಜಪೇಯಿ ವ್ಯಕ್ತಿತ್ವಕ್ಕೆ ಶಿವರಾಜ್ಸಿಂಗ್ ಅವರನ್ನು ಹೋಲಿಸಿದರು. ಅಡ್ವಾಣಿ ಯಾಕೆ ಹೀಗೆಲ್ಲ ಮಾತನಾಡುತ್ತಿದ್ದಾರೆಂದು ಸಂಘ- ಪರಿವಾರದವರಿಗೆ ಅರ್ಥವಾಗಲು ಹೆಚ್ಚು ಕಾಲ ಹಿಡಿಯಲಿಲ್ಲ. ಅಡ್ವಾಣಿ ಬಿಜೆಪಿಯಲ್ಲಿ ಈಗ ಏಕಾಂಗಿ. ಅವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ.

ಮೋದಿ ಅವರಿಗೆ ಬಿಜೆಪಿಯೊಳಗೆ ಮಾತ್ರವಲ್ಲ ಹೊರಗೆ ಎನ್ಡಿಎ ಮಿತ್ರ ಪಕ್ಷಗಳಲ್ಲೂ ಕಡು ವಿರೋಧಿಗಳಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವಕಾಶ ಸಿಕ್ಕಾಗಲೆಲ್ಲ ಮೋದಿ ಅವರನ್ನು ಟೀಕಿಸಿದ್ದಾರೆ. ಶಿವಸೇನೆಯೂ ಗುಜರಾತ್ ಮುಖ್ಯಮಂತ್ರಿ ಪರವಿಲ್ಲ. ಪ್ರಧಾನಿ ಹುದ್ದೆಗೆ ಸುಷ್ಮಾ ಸ್ವರಾಜ್ ಅರ್ಹ ಅಭ್ಯರ್ಥಿ ಎಂದಿದೆ. ಮಿತ್ರ ಪಕ್ಷಗಳ ಅಭಿಪ್ರಾಯಕ್ಕೆ ಬೆಲೆ ಕೊಡದೆ ಬಿಜೆಪಿ ಮೋದಿ ಅವರಿಗೆ ಪ್ರಚಾರ ಸಮಿತಿ ನಾಯಕತ್ವ ಪಟ್ಟ ಕಟ್ಟಿದೆ. ಜೆಡಿಯು ಈಗ ಯಾವ ಹಾದಿ ತುಳಿಯಲಿದೆ ಎನ್ನುವುದು ಕುತೂಹಲದ ಸಂಗತಿ.

ಗುಜರಾತ್ ಮುಖ್ಯಮಂತ್ರಿಗೆ ಬಿಜೆಪಿ ಮಣೆ ಹಾಕಿರುವುದರಿಂದ ಜಯಲಲಿತಾ, ಬಿಜು ಜನತಾದಳ ಎನ್ಡಿಎ ತೆಕ್ಕೆಗೆ ಬರಬಹುದೆನ್ನುವ ನಿರೀಕ್ಷೆ ಹುಟ್ಟಿದೆ. ಕರ್ನಾಟಕದಲ್ಲಿ ಬಿಜೆಪಿ ತೊರೆದು ಹೊರ ಹೋಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುನಃ ಬಿಜೆಪಿಗೆ ಮರಳುವ ಸಾಧ್ಯತೆ ಇದೆ. ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಈ ಬಗ್ಗೆ ಪಕ್ಷ ತೀರ್ಮಾನ ಮಾಡಬೇಕು ಎಂದಿದ್ದಾರೆ.
ಮೋದಿಗೆ ಬಿಜೆಪಿ ನಾಯಕತ್ವ ಸಿಕ್ಕಿರುವುದರಿಂದ ಪರ್ಯಾಯವಾಗಿ ಜಾತ್ಯತೀತ ಶಕ್ತಿಗಳು ಒಗ್ಗೂಡಬಹುದೆಂಬ ಲೆಕ್ಕಾಚಾರವೂ ಇದೆ. ಬಿಜೆಪಿಯ ಬೆಳವಣಿಗೆಗೆ ಪ್ರತಿಯಾಗಿ ಕಾಂಗ್ರೆಸ್ ಯಾವ ತಂತ್ರ ರೂಪಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಆರು ದಶಕಕ್ಕೂ ಹೆಚ್ಚು ಕಾಲ ರಾಜಕಾರಣದಲ್ಲಿ ಸಕ್ರಿಯವಾಗಿದ್ದ 86 ವರ್ಷದ ಹಿರಿಯ ರಾಜಕಾರಣಿ ಅಡ್ವಾಣಿ ಅವರ ಮುಂದಿನ ದಾರಿ ಏನು? 2014ರ ಚುನಾವಣೆಗೆ ಅವರು ಸ್ಪರ್ಧಿಸುವರೆ? ತಮ್ಮನ್ನು ಕಡೆಗಣಿಸಿದ ಬಿಜೆಪಿ ನಾಯಕರ ನಿರ್ಧಾರದಿಂದ ನೊಂದು ರಾಜಕೀಯ ನಿವೃತ್ತಿ ಘೋಷಿಸುವರೇ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಲು ಕೆಲದಿನ ಹಿಡಿಯಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.