ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಲೀಲಾದಲ್ಲಿ ಹುಸಿ ಬಾಂಬ್ ಕರೆ; ಕಂಗಾಲಾಗಿದ್ದ ಪೊಲೀಸರು

Last Updated 4 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಮಲೀಲಾ ಮೈದಾನದಲ್ಲಿ ಅಣ್ಣಾ ಹಜಾರೆ ನಡೆಸಿದ ನಿರಶನವನ್ನು ಬೆಂಬಲಿಸಿ ಅಲ್ಲಿಗೆ ಹರಿದು ಬಂದ ಜನಸಾಗರವನ್ನು ನಿಯಂತ್ರಿಸಿದ ದೆಹಲಿ ಪೋಲಿಸರಿಗೆ ಕೃಷ್ಣಜನ್ಮಾಷ್ಟಮಿಯಂದು (ಆ. 22) ನಿಜಕ್ಕೂ ಬೆವರಿಳಿದು ಹೋಯಿತು.

ಮೈದಾನದಲ್ಲಿ ಎತ್ತ ನೋಡಿದರು ಜನವೋ ಜನ. ಇದೇ ಸಮಯದಲ್ಲಿ ದೆಹಲಿ ಪೊಲೀಸ್ ಮುಖ್ಯ ಕಚೇರಿಗೆ ಮೈದಾನದಲ್ಲಿ ಬಾಂಬ್ ಇರಿಸಲಾಗಿದೆ ಎಂಬ ಬೆದರಿಕೆ ಕರೆ ಬಂತು. ಪೊಲೀಸರು ಮೈದಾನದ ಮೂಲೆ ಮೂಲೆಯಲ್ಲೂ ತಪಾಸಣೆ ನಡೆಸಿ ಬಾಂಬ್ ಕರೆ ಹುಸಿ ಎಂದು ಖಾತರಿ ಪಡಿಸಿಕೊಂಡು ನಿರುಮ್ಮಳರಾಗಿ ನಿಟ್ಟುಸಿರು ಬಿಟ್ಟರು.

`ಅಂದು (ಆ. 22) ರಜೆಯ ಕಾರಣ ತಂಡೋಪ ತಂಡವಾಗಿ  ಜನರು ಮೈದಾನಕ್ಕೆ ಆಗಮಿಸುತ್ತಿದ್ದರು. ಬಾಂಬ್ ಬೆದರಿಕೆ ಬಂದಾಗ ಬೆಳಿಗ್ಗೆ 10.35ರ ಸಮಯ. ಅಣ್ಣಾ ಹಜಾರೆ ಅವರು ವೇದಿಕೆ ಮೇಲಿದ್ದರು. ಜನರು ಆವೇಶದಿಂದ ಘೋಷಣೆಗಳನ್ನು ಕೂಗುತ್ತಿದ್ದರು. ಬಾಂಬ್ ಕರೆ ವಿಷಯ ಏನಾದರೂ ಬಯಲಾಗಿದ್ದರೆ  ಕಾಲ್ತುಳಿತ ಆಗುವ ಭೀತಿ ಕೂಡ ಇತ್ತು. ಆದರೆ ಇಂತಹ ಒತ್ತಡದ ಸಂದರ್ಭದಲ್ಲೂ ನಾವು ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದೆವು~ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಕರೆ ಬಂದ ಮೊಬೈಲ್‌ಗೆ ಪೊಲೀಸರು ವಾಪಸು ಕರೆ ಮಾಡಿದರಾದರೂ ಮೊಬೈಲ್ ಸ್ವಿಚ್ ಆಫ್ ಆಗಿತ್ತು.  `ಅನಾಮಿಕರಿಂದ ಹುಸಿ ಬಾಂಬ್ ಕರೆ~ ಎಂದು ಪೊಲೀಸರು  ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹುಸಿ ಬಾಂಬ್ ಕರೆ ಮಾತ್ರವಲ್ಲದೆ ರಾಮಲೀಲಾ ಮೈದಾನದಲ್ಲಿ ಕುಡುಕರು, ಕಿಸೆಗಳ್ಳರು, ಹುಡುಗಿಯರನ್ನು ಚುಡಾಯಿಸುವವರು, ಲೈಗಿಂಕ ಕಿರುಕುಳ ನೀಡುವವರು ಪೊಲೀಸರಿಗೆ ತಲೆ ಬೇನೆಯಾಗಿದ್ದರು.    ಅಣ್ಣಾ ತಂಡದ ಪ್ರಮುಖ ವ್ಯಕ್ತಿಯೊಬ್ಬರ ಕಿಸೆಗೆ ಕತ್ತರಿ ಹಾಕಲಾಗಿತ್ತು.

ಮಾಧ್ಯಮದವರ ಕ್ಯಾಮೆರಾ, ಒಂದು ಬೈಕ್ ಸಹ ಕಳುವಾಗಿದೆ ಎಂದು ಮೂಲಗಳು ಹೇಳಿವೆ. `ಯಾವುದೇ ಕಾರಣಕ್ಕೆ ನಿರಶನ ನಡೆಯುವ ಸ್ಥಳದಲ್ಲಿ ಬಲ ಪ್ರಯೋಗ ಮಾಡದಿರಲು ನಿರ್ಧರಿಸಿದ್ದೆವು. ಒಂದು ವೇಳೆ ಲಾಠಿ ಎತ್ತಿದ್ದರೆ ಅದು ಅನಗತ್ಯವಾಗಿ ವಿವಾದಕ್ಕೆ ಕಾರಣವಾಗುತ್ತಿತ್ತು~ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT