ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಡಿಯೊ ಸ್ಟೋರಿ: ಆಂಧ್ರ ಪ್ರದೇಶಕ್ಕೆ ಮತ್ತೊಬ್ಬ ‘ನಾಯ್ಡು’ ಆಗುವರೇ ನಾರಾ ಲೋಕೇಶ್‌?

ಕಣದಲ್ಲಿ ಕುಡಿಗಳು
Last Updated 4 ಜೂನ್ 2019, 9:07 IST
ಅಕ್ಷರ ಗಾತ್ರ

ಕುಟುಂಬ ರಾಜಕಾರಣವಾಗಲಿ, ಅಪ್ಪನ ಭದ್ರಕೋಟೆಯಿಂದ ಮಕ್ಕಳು ಕಣಕ್ಕಿಳಿಯುವ ವಿದ್ಯಮಾನವಾಗಲಿ ಕೇವಲ ಕರ್ನಾಟಕಕ್ಕೆ ಸೀಮಿತವಾಗಿಲ್ಲ. ಇದು ದೇಶವ್ಯಾಪಿ ಕಂಡು ಬರುತ್ತಿರುವ ಈ ಬೆಳವಣಿಗೆ. ಈ ಬಾರಿಯ ಲೋಕಸಭೆ ಚುನಾವಣೆಗೆ ವಿವಿಧ ರಾಜ್ಯಗಳಿಂದ ಕಣಕ್ಕಿಳಿದಿರುವ, ರಾಜಕೀಯವನ್ನೇ ಉಸಿರಾಡುತ್ತಿರುವ ಕುಟುಂಬದ ಕುಡಿಗಳನ್ನು ಪರಿಚಯಿಸುವ ವಿಡಿಯೊ ಸರಣಿಯ 2ನೇ ಭಾಗದಲ್ಲಿ ಆಂಧ್ರದ ಮಾಹಿತಿ ತಂತ್ರಜ್ಞಾನ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ನಾರಾ ಲೋಕೇಶ್‌ ಅವರನ್ನು ಪರಿಚಯಿಸಲಾಗಿದೆ.

ಕೃಷ್ಣಾ ನದಿ ದಡದಲ್ಲಿರುವ ಅಮರಾವತಿಗೆ ಸಮೀಪದಲ್ಲಿನ ಉಂಡವಳ್ಳಿ ಪ್ರದೇಶದಲ್ಲಿ ಅತಿಥಿ ಗೃಹವೊಂದಿದೆ. ಸುತ್ತಲೂ ಹಸಿರು ಹೊದಿಕೆ ಹೊದ್ದು ನಡುವೆ ನಿಂತಿರುವ ಭವ್ಯ ಬಂಗಲೆಯನ್ನು ಕಂಡವರು ಐಷಾರಾಮಿ ರೆಸಾರ್ಟ್‌ ಎಂದು ಭಾವಿಸುವುದು ಸಾಮಾನ್ಯ. ಅದು ರೆಸಾರ್ಟ್‌ ಅಲ್ಲ.

ಸರಿಯಾಗಿ ಒಂದು ವರ್ಷದ ಹಿಂದೆ ಟಿಡಿಪಿಯು 35ನೇ ವಾರ್ಷಿಕ ‘ಮಹಾನಾಡು’ ಅಧಿವೇಶನವನ್ನು ಆಯೋಜಿಸಿತ್ತು. ಅದೇ ಮೊದಲ ಸಲ ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಅಮೆರಿಕ ಮೂರೂ ಕಡೆ ಏಕಕಾಲದಲ್ಲಿ ನಡೆದ‘ಮಹಾನಾಡು’ ಸಮ್ಮೇಳನದಲ್ಲಿ ಮಾತನಾಡಿದ್ದ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ‘2014ರಲ್ಲಿ ರಾಜ್ಯ ವಿಭಜನೆಯಾದಾಗ ಆರಂಭದ ದಿನಗಳಲ್ಲಿ ಶಾಸನಸಭೆ, ಸಚಿವಾಲಯಗಳಿಲ್ಲದೆ ಬಸ್‌ ಅನ್ನೇ ಕಚೇರಿಯಾಗಿಸಿಕೊಂಡು 43 ದಿನಗಳ ಕಾಲ ಆಡಳಿತ ನಡೆಸಿದ್ದೆ’ ಎಂದು ನೋವು ತೋಡಿಕೊಂಡಿದ್ದರು. ಅದೇ ನಾಯ್ಡು ಇದೀಗ ಬಾಡಿಗೆಗೆ ಉಳಿದಿರುವುದುರೆಸಾರ್ಟ್‌ನಂತೆ ಕಾಣುವ ಆ ನಿವಾಸದಲ್ಲಿಯೇ.

ವಾರದ ಉಳಿದ ಐದು ದಿನಗಳಿಗೆ ಹೋಲಿಸಿದರೆ ಅಂತ್ಯದ (ವಾರಾಂತ್ಯದ) ಎರಡು ದಿನಗಳು ಇಲ್ಲಿ ಪಕ್ಷದ ರಾಜಕೀಯ ಚಟುವಟಿಕೆಗಳು ಬಿರುಸು ಪಡೆದುಕೊಂಡಿರುತ್ತವೆ. ನಾಯ್ಡು ಹಾಗೂ ರಾಜ್ಯ ಸಚಿವ ನಾರಾ ಲೋಕೇಶ್‌ ಅವರ ಪಾಲಿಗೆಆ ಎರಡು ದಿನಗಳ ಚಟುವಟಿಕೆಗಳು ಆರಂಭವಾಗುವುದೂ ಸಭೆಗಳೊಂದಿಗೆಯೇ.

ದೇಶದೆಲ್ಲೆಡೆ ಲೋಕಸಭೆ ಚುನಾವಣೆ ನಡೆಯುತ್ತಿರುವುದರಿಂದ ಹಾಗೂ ಈಗಷ್ಟೇ ರಾಜ್ಯ ವಿಧಾನಸಭೆ ಚುನಾವಣೆ ಮುಗಿದಿರುವುದರಿಂದ ಸಭೆ, ಕಾರ್ಯಕ್ರಮಗಳು, ಕಾರ್ಯಕರ್ತರೊಂದಿಗಿನ ಸಂವಾದಗಳು ಜೋರಾಗಿಯೇ ಇವೆ. ಪಕ್ಷದ ಪ್ರದಾನ ಕಾರ್ಯದರ್ಶಿಯಾಗಿರುವ ನಾಯ್ಡು ಪುತ್ರ ನಾರಾ ಲೋಕೇಶ್‌ ಈ ಎಲ್ಲ ಸಭೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇದನ್ನೆಲ್ಲ ಗಮನಿಸಿದರೆ ‘ಆಡಳಿತ ಪಕ್ಷ ಟಿಡಿಪಿಯನ್ನು ಮುಖ್ಯಮಂತ್ರಿ ನಾಯ್ಡು ಅವರ ಬಳಿಕ ಲೋಕೇಶ್‌ ಮುನ್ನಡೆಸಲಿದ್ದಾರೆ’ ಎಂಬ ಸ್ಪಷ್ಟ ಚಿತ್ರಣ ಸಿಕ್ಕಿಬಿಡುತ್ತದೆ.

ಲೋಕೇಶ್‌ ಚಿಕ್ಕ ವಯಸ್ಸಿನಲ್ಲಿಯೇ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು.

‘1990ರ ವೇಳೆ ನಾನು ತೃತೀಯ ರಂಗದ ಸಂಚಾಲಕನಾಗಿದ್ದ ವೇಳೆ ಪ್ರಧಾನಿಯಾಗುವ ಅವಕಾಶ ಒದಗಿಬಂದಿತ್ತು. ಆಗ ಲೋಕೇಶ್‌ ಸಲಹೆಯ ಮೇರೆಗೆ ಹಿಂದೆ ಸರಿದಿದ್ದೆ’ ಎಂದುನಾಯ್ಡು ಅವರು ಹಲವು ಸಂದರ್ಭಗಳಲ್ಲಿ ಮಾತನಾಡಿದ್ದಾರೆ. ಆ ಸಲಹೆ ನೀಡಿದಾಗ ‘ನಾನು ಒಂಬತ್ತು ಅಥವಾ ಹತ್ತನೇಯ ತರಗತಿಯಲ್ಲಿ ಓದುತ್ತಿದ್ದೆ’ ಎಂದು ದಿ ವೀಕ್‌ಗೆ ನೀಡಿದ ಸಂದರ್ಶನದಲ್ಲಿ ಲೋಕೇಶ್‌ ಹೇಳಿಕೊಂಡಿದ್ದಾರೆ. ಜೊತೆಗೆ ಅದಕ್ಕೆ ಕಾರಣವನ್ನೂ ವಿವರಿಸಿದ್ದಾರೆ. ‘ಆ ವೇಳೆಗಾಗಲೇ ಆಂಧ್ರ ವಿಭಜನೆಯ ಕೂಗು ಎದ್ದಿತ್ತು. ಒಂದು ರಾಜ್ಯವಾಗಿ ನಾವು ನಮ್ಮದೇ(ಆಂತರಿಕ) ಸವಾಲುಗಳನ್ನು ಎದುರಿಸುತ್ತಿದ್ದೆವು. ಆ ವೇಳೆ ಹೈದರಾಬಾದ್‌ ಅನ್ನು ರಾಜ್ಯದಿಂದ ಕೈಬಿಡುವ ಆಲೋಚನೆಗಳೂ ಕೇಳಿಬಂದಿದ್ದವು. ಆ ವೇಳೆ ಪರ್ಯಾಯವಾಗಿ ಚಿಂತಿಸುವ ಅನಿವಾರ್ಯತೆ ಎದುರಾಗಿತ್ತು. ಹಾಗಾಗಿಆಂಧ್ರಪ್ರದೇಶದಲ್ಲಿ ಅವರು(ಚಂದ್ರಬಾಬು ನಾಯ್ಡು) ಇರಲೇಬೇಕು ಎಂದು ಭಾವಿಸಿ ಆ ಸಲಹೆ ನೀಡಿದ್ದೆ’ ಎಂದಿದ್ದರು.

ರಾಜಕೀಯ ಪ್ರವೇಶಿಸುವ ಮೊದಲು ಲೋಕೇಶ್‌ ಅವರು ಕುಟುಂಬದ ವ್ಯವಹಾರ,ನಾಯ್ಡು ಒಡೆತನದ ಹೆರಿಟೇಜ್‌ ಫುಡ್ಸ್‌ನ ಉಸ್ತುವಾರಿಕೆ ಮಾಡುತ್ತಿದ್ದರು. 2012ರ ನಂತರವಷ್ಟೇ ತಂದೆಯೊಂದಿಗೆ ಕೂಡಿ ಸಕ್ರಿಯ ರಾಜಕೀಯಕ್ಕೆ ಕುದುರಿಕೊಂಡದ್ದು. 2017ರಲ್ಲಿ ಮೊದಲ ಸಲ ವಿಧಾನ ಪರಿಷತ್‌ ಸದಸ್ಯನಾಗಿ(ಎಂಎಲ್‌ಸಿ) ಆಯ್ಕೆಯಾದಾಗ, ಮಾಹಿತಿ ತಂತ್ರಜ್ಞಾನ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಖಾತೆಗಳನ್ನು ನೀಡಲಾಗಿತ್ತು. ಆದರೆ, ಅದನ್ನು ನಯವಾಗಿ ತಿರಸ್ಕರಿಸಿದ್ದ ಲೋಕೇಶ್‌, 2019ರವರೆಗೆ ಸಚಿವ ಸ್ಥಾನ ಬೇಡವೆಂದು ದೃಢವಾಗಿ ಹೇಳಿದ್ದರು.ಮಾತ್ರವಲ್ಲದೆ ನಿಯಮಿತವಾಗಿ ಆರ್ಥಿಕ ಶೃಂಗಸಭೆಗಳಲ್ಲಿ ಭಾಗವಹಿಸುವ ಮೂಲಕ ಆಂಧ್ರಪ್ರದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಹರಿದು ಬರುವಂತೆ ಮಾಡಲು ಪ್ರಯತ್ನಿಸಿದರು.

ಶಾಸಕನಾಗುವ ಬದಲು ಪರಿಷತ್‌ ಸದಸ್ಯನಾಗಿ ಆಯ್ಕೆ ಬಯಸಿದ್ದು ಏಕೆ? ಎಂಬ ಪ್ರಶ್ನೆ ಎದುರಾದಾಗ, ‘ಶಾಸಕನಾಗುವ ಸಲುವಾಗಿ ಮತ್ತೊಬ್ಬ ನಾಯಕನ ಕ್ಷೇತ್ರವನ್ನು ಕಸಿದುಕೊಳ್ಳಲು ನನಗೆ ಇಷ್ಟವಿರಲಿಲ್ಲ. ಹಾಗಾಗಿಯೇ ಎಂಎಲ್‌ಸಿಯಾಗಲು ನಿರ್ಧರಿಸಿದೆ’ ಎಂದು ಸಮಾಧಾನವಾಗಿ ಉತ್ತರಿಸಿದ್ದರು. ಇದೀಗ ರಾಷ್ಟ್ರದ ಗಮನ ಸೆಳೆದಿರುವ ರಾಜ್ಯ ವಿಧಾನಸಭೆ ಚುನಾವಣೆ ಮೂಲಕ ಚುನಾವಣಾ ರಾಜಕೀಯಕ್ಕೆ ಧುಮುಕಿರುವ ಅವರು ಮಂಗಲಗಿರಿ ವಿಧಾನಸಭೆ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿದ್ದಾರೆ.

ತಂತ್ರಗಾರಿಕೆಯಲ್ಲಿ ಪಳಗಿದ್ದರೂ ಮಾತುಗಾರಿಕೆಯಲ್ಲಿ ಅಷ್ಟೇನೂ ನಿಪುಣರಲ್ಲದ ಲೋಕೇಶ್‌ ಸಾಮಾಜಿಕ ಜಾಲತಾಣಗಳಲ್ಲಿ ಮಿಮ್‌ಗಳಿಗೆ ಆಹಾರವಾಗಿದ್ದೂ ಇದೆ. ಪಕ್ಷ ಅಥವಾ ಸರ್ಕಾರದ ವಿಚಾರದಲ್ಲಿ ಮೂಗು ತೂರಿಸಿದಾಗ ವಿರೋಧ ಪಕ್ಷಗಳು ಮುಗಿಬಿದ್ದು ವಾಗ್ದಾಳಿ ನಡೆಸಿದ ಪ್ರಸಂಗಗಳೂ ಸಾಕಷ್ಟಿವೆ. ಆದರೆ ಅದಕ್ಕೆಲ್ಲ ಕುಗ್ಗದ ಲೋಕೇಶ್‌, ‘ಹುಟ್ಟಿರುವುದೇ ರಾಜಕೀಯ ಹಿನ್ನಲೆಯ ಕುಟುಂಬದಲ್ಲಿ. ವೈಯಕ್ತಿಕ ಆಪಾದನೆಗಳನ್ನು ಪರಿಹರಿಸಿಕೊಳ್ಳುವುದು ಅಥವಾ ಟೀಕೆಗಳೊಂದಿಗೆ ವ್ಯವಹರಿಸುವುದು ಹೇಗೆ ಎನ್ನುವುದರ ಬಗ್ಗೆ ಪ್ರಜ್ಞಾಪೂರ್ವಕವಾಗಿಯೇ ತರಬೇತಿ ಲಭಿಸಿದೆ. ಎಲ್ಲಿಗೆ ಹೋದರೂ ರಾಜಕೀಯ ಇರುವುದೇ ಹೀಗೆ. ಅದನ್ನು ಎದುರಿಸಬೇಕು ಮತ್ತು ಅದರೊಟ್ಟಿಗೆ ಸೆಣಸಬೇಕು’ ಎಂದು ವಿಶ್ವಾಸದಿಂದಲೇ ಹೇಳುತ್ತಾರೆ.

ಬಿಡುವಿನ ವೇಳೆಯಲ್ಲಿ ಮಗನೊಂದಿಗೆ ಕಾಲಕಳೆಯುವ ಅವರು ತಮ್ಮನ್ನು ತಾವು ‘ವಾರಾಂತ್ಯದ ತಂದೆ’ ಎಂದು ಕರೆದುಕೊಳ್ಳುತ್ತಾರೆ. ಫೇಸ್‌ಬುಕ್‌ ಹಾಗೂ ಟ್ವಿಟರ್‌ಗಳಲ್ಲಿ ಸಕ್ರಿಯವಾಗಿರುವ ಲೋಕೇಶ್‌ ಇನ್‌ಸ್ಟಾಗ್ರಾಂನಿಂದ ಅಂತರ ಕಾಯ್ದುಕೊಂಡಿದ್ದಾರೆ. ಕೇಳಿದರೆ ಅದು ‘ಮುಂದಿನ ತಲೆಮಾರಿನ ಮಾಧ್ಯಮ’ ಎಂದು ಥಟ್‌ ಅಂತ ಉತ್ತರಿಸುತ್ತಾರೆ.

ಸದ್ಯ ಪ್ರಯೋಗಕ್ಕೆಂದುಪ್ರಯೋಗಾಲಯಕ್ಕೆ ತಂದಿರುವ ಆ್ಯಸಿಡ್‌ನಂತೆ ಫಲಿತಾಂಶ ನಿರೀಕ್ಷೆಯ ಕಾವೇರಿಸಿಕೊಂಡಿರುವ ಲೋಕೇಶ್‌ ಗೆಲುವು–ಸೋಲಿನ ಶ್ರೇಯವನ್ನೂ ಅಳೆದು ತೂಗುತ್ತಿದ್ದಾರೆ. ‘ಒಂದು ವೇಳೆ ನಾವು ಗೆದ್ದರೆ ಅದರ ಶ್ರೇಯ ಚಂದ್ರಬಾಬು ನಾಯ್ಡು ಅವರಿಗೆ ಸಲ್ಲುತ್ತದೆ. ಅದರ ಬದಲು ಸೋತೆವೆಂದರೆ ಖಂಡಿತ ಲೋಕೇಶ್‌ ಅದರ ಹೊಣೆ ಹೊರಬೇಕಾಗುತ್ತದೆ’ ಎಂದು ಸ್ಪಷ್ಟವಾಗಿ ಹೇಳುವ ಅವರುರಾಜಕೀಯದ ಲೆಕ್ಕಾಚಾರಗಳನ್ನು ಕರಗತ ಮಾಡಿಕೊಂಡಿದ್ದಾರೆ. ಎದುರಾಳಿಗಳನ್ನು ಮಣಿಸುವ ರಾಜಕೀಯದ ಪಟ್ಟುಗಳನ್ನು ಕಲಿತು ಪಳಗಿದರೆ ತಂದೆಯಂತೆಯೇ ಚತುರ ರಾಜಕಾರಣಿಯಾಗುವುದರಲ್ಲಿ ಅನುಮಾನವಿಲ್ಲ.

(ಮಾಹಿತಿ: ಅಭಿಲಾಷ್ ಎಸ್‌.ಡಿ, ವಿಡಿಯೊ: ಅಬ್ದುಲ್ ಬಾಸಿತ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT