ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಾಪಕ ಬದಲಾವಣೆಗೆ ಸಿಗದ ಅವಕಾಶ

ತಜ್ಞರ ವಿಶ್ಲೇಷಣೆ
Last Updated 10 ಜುಲೈ 2014, 19:30 IST
ಅಕ್ಷರ ಗಾತ್ರ

ಅತಿ ಕಾತರದಿಂದ ಕಾಯುತ್ತಿದ್ದ ಎನ್‌ಡಿಎ ಸರ್ಕಾರದ ಚೊಚ್ಚಲ ಬಜೆಟ್‌ ಮಿಶ್ರ ಫಲ ತಂದಿದೆ. ಹೊಸ ಹಣಕಾಸು ಸಚಿವರ ಮುಂದಿದ್ದ ತೊಡಕುಗಳನ್ನು ಗಮನದಲ್ಲಿ ಇರಿಸಿಕೊಂಡೇ ಬಜೆಟ್‌ನ ಮೌಲ್ಯಮಾಪನ ನಡೆಸುವ ಅಗತ್ಯ ಇದೆ. ಕುಂಠಿತ ಪ್ರಗತಿಯ ಕಷ್ಟಕರ ಅರ್ಥ ವ್ಯವಸ್ಥೆಯನ್ನು ಬಳುವಳಿಯಾಗಿ ಪಡೆದಿದ್ದ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರಿಗೆ ವ್ಯಾಪಕ ಬದಲಾವಣೆ ತರಲು ಹೆಚ್ಚಿನ ಅವಕಾಶವೇ ಇರಲಿಲ್ಲ.

ಎನ್‌ಡಿಎ ಅಧಿಕಾರಕ್ಕೆ ಬರಲು ಮತ ಚಲಾಯಿಸಿ­ದವರ ನಿರೀಕ್ಷೆಗಳು ಅಪಾರವಾಗಿದ್ದವು, ದೀರ್ಘ ಕಾಲದಿಂದ  ಇರುವ ಗರಿಷ್ಠ ಹಣದುಬ್ಬರ ಇನ್ನೊಂದು ತೊಡಕಾಗಿತ್ತು. ಇವೆಲ್ಲಕ್ಕಿಂತ ಮುಖ್ಯವಾಗಿ ಹಣಕಾಸು ಸಚಿವರಿಗೆ ಇದ್ದದ್ದು ಆರರಿಂದ ಏಳು ವಾರಗಳ ಸಮಯ ಮಾತ್ರ. ಸಾಮಾನ್ಯವಾಗಿ ಬಜೆಟ್‌ ಸಿದ್ಧತೆಗೆ ನಾಲ್ಕರಿಂದ ಐದು ತಿಂಗಳು ತೆಗೆದುಕೊಳ್ಳಲಾಗುತ್ತದೆ.

ಒಟ್ಟಾರೆ ಅರ್ಥ ವ್ಯವಸ್ಥೆಯ ವಿದ್ಯ­ಮಾನ­ಗಳಾದ ಹಣದುಬ್ಬರ, ಉದ್ಯೋಗ, ಪ್ರಗತಿ, ಆಡಳಿತ, ಆರ್ಥಿಕ ಶಿಸ್ತು ಮುಂತಾದ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಜೇಟ್ಲಿ ಅವರು ತಮ್ಮ ಭಾಷಣ ಆರಂಭಿಸಿದರು. ಆದರೆ, ಈ ಬಗ್ಗೆ ವಿವರವಾಗಿ ಅವರು ಏನನ್ನೂ ಹೇಳಲಿಲ್ಲ.

ಒಟ್ಟಾರೆ ಅರ್ಥ ವ್ಯವಸ್ಥೆಯ ಅಪೇಕ್ಷಿತ ಗುರಿಗಳನ್ನು ಸಾಧಿಸುವುದಕ್ಕೆ ಸಂಬಂಧಿಸಿದಂತೆ ಕೂಡ ಅವರು ನಿರ್ದಿಷ್ಟವಾಗಿ  ಏನನ್ನೂ ಹೇಳಲಿಲ್ಲ. ಜೇಟ್ಲಿ ಅವರು ಇನ್ನಷ್ಟು ಮಹತ್ವಾಕಾಂಕ್ಷಿ­ಯಾಗಿ ಆರ್ಥಿಕ ವೃದ್ಧಿ ದರವನ್ನು ಶೇ 9ಕ್ಕೆ ಏರಿಸುವ ಗುರಿ ಇರಿಸಿಕೊಳ್ಳಬಹು­ದಾಗಿತ್ತು. ಆದರೆ, ಮುಂದಿನ ಒಂದೆರಡು ವರ್ಷಗಳಲ್ಲಿ  ಬೆಳವಣಿಗೆ ದರವನ್ನು ಶೇ 7ರಿಂದ -8ರ ಮಟ್ಟಕ್ಕೆ ಏರಿಸುವುದು ತಮ್ಮ ಉದ್ದೇಶ ಎಂದಷ್ಟೇ  ಹೇಳಿದ್ದಾರೆ.

ಹಿಂದಿನ ಹಣಕಾಸು ಸಚಿವರು ಮಧ್ಯಾಂತರ ಬಜೆಟ್‌ನಲ್ಲಿ ಘೋಷಿಸಿ­ದಂತೆ ವಿತ್ತೀಯ ಕೊರತೆಯನ್ನು ಒಟ್ಟು ದೇಶಿ ಉತ್ಪನ್ನದ ಶೇ 4.1ರೊಳಗೆ ಉಳಿಸಿಕೊಳ್ಳುವ ಭರವಸೆಯನ್ನು ದೇಶದ ಜನರಿಗೆ ಅವರು ನೀಡಿದ್ದಾರೆ. ಆದರೆ, ಇನ್ನಷ್ಟು ದಿಟ್ಟವಾಗಿ ತಮ್ಮ ಮಿತಿಯನ್ನು ಸ್ವಲ್ಪ ಏರಿಸಿಕೊಳ್ಳಬಹುದಿತ್ತು.

ಬಹಳ ಕಾಲದಿಂದ ಬಾಕಿ ಉಳಿದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬಜೆಟ್‌ ಸ್ವಲ್ಪ ಗೊಂದಲಮಯವಾಗಿದೆ ಎಂದೇ ಹೇಳಬಹುದು. ಕಾಲಮಿತಿಗೆ ಸಂಬಂಧಿಸಿ ಯಾವುದೇ ನಿರ್ದಿಷ್ಟತೆ ಇಲ್ಲ. ಜಿಎಸ್‌ಟಿ ಅನುಷ್ಠಾನ ಮಾಡುವುದರಿಂದಲೇ ಒಟ್ಟು ಆಂತರಿಕ ಉತ್ಪನ್ನ ಶೇ 0.7ರಿಂದ ಶೇ 1ರಷ್ಟು ಏರಿಕೆಯಾಗಬಹುದು.

ಬಿಜೆಪಿಗೆ ಭಾರಿ ಬಹುಮತ ತಂದು ಕೊಟ್ಟ ಎರಡು ಪ್ರಮುಖ ಅಂಶಗಳೆಂದರೆ ಆಹಾರ ಬೆಲೆ ಹಣದುಬ್ಬರ ನಿಯಂತ್ರಣ ಮತ್ತು ವಿಕಾಸದ ನಿರೀಕ್ಷೆ. ಹಣದುಬ್ಬರ ಭೂತದ ನಿಯಂತ್ರಣಕ್ಕೆ ನಿಖರವಾದ ಕ್ರಮಗಳು ಅಥವಾ ನೀಲನಕ್ಷೆಯನ್ನು ಸಾಮಾನ್ಯ ಜನರು ನಿರೀಕ್ಷೆ ಮಾಡಿದ್ದರು. ಕಾಳಸಂತೆಯ ಪ್ರಸ್ತಾಪ ಮತ್ತು ಮುಂಗಾರು ಮಳೆಯ ಅನಿಶ್ಚಿತತೆ­ಯಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ಆಹಾರ ಧಾನ್ಯ ದಾಸ್ತಾನು ಮಾಡಲಾಗುವುದು ಎಂಬುದನ್ನು ಬಿಟ್ಟರೆ, ಹಣದುಬ್ಬರ ವಿಚಾರದಲ್ಲಿ ಜನರ ನಿರೀಕ್ಷೆಗಳಿಗೆ ಸ್ಪಂದಿಸುವಂತಹ ಯಾವ ಅಂಶವೂ ಇಲ್ಲ.

ಪ್ರವಾಸೋದ್ಯಮಕ್ಕೆ ಉತ್ತೇಜನ: ಹಿಂದಿನ ಯುಪಿಎ ಸರ್ಕಾರದ ಹಲವು ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮ­ಗಳನ್ನು ಮತ್ತು ಅಭಿವೃದ್ಧಿಗಾಗಿ ಕೈಗಾರಿಕಾ ಕಾರಿಡಾರ್‌ ಯೋಜನೆ­ಯನ್ನು ಹಣಕಾಸು ಸಚಿವರು ಉಳಿಸಿಕೊಂಡಿದ್ದಾರೆ. ಭಾರತಕ್ಕೆ ಬರುವ ವಿದೇಶಿ ಪ್ರವಾಸಿಗರಿಗೆ ವಿದ್ಯುನ್ಮಾನ ವೀಸಾ ವ್ಯವಸ್ಥೆ ಮತ್ತು ಗೋವಾದಲ್ಲಿ ಅಂತರರಾಷ್ಟ್ರೀಯ ಸಭಾ ಭವನ ನಿರ್ಮಾಣ ಯೋಜನೆಗಳಿಗೆ  ಕಾಲಮಿತಿ ಹಾಕಿಕೊಂಡಿದ್ದಾರೆ. ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಇನ್ನಷ್ಟು ವಿಮಾನ ನಿಲ್ದಾಣಗಳಿಗೆ ಪ್ರೋತ್ಸಾಹ ನೀಡುವ ಮೂಲಕ ವಿಮಾನ ಯಾನವನ್ನು ಜನಪ್ರಿಯಗೊಳಿಸುವ ಯೋಜನೆಯನ್ನೂ ಜೇಟ್ಲಿ ಹೊಂದಿದ್ದಾರೆ. ಇಂತಹ ಕ್ರಮಗಳು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತವೆ. ಜೊತೆಗೆ ಇತರ ಕ್ಷೇತ್ರಗಳ ಅಭಿವೃದ್ಧಿಗೂ ಇದು ನೆರವಾಗುತ್ತದೆ.

ರಕ್ಷಣೆ ಮತ್ತು ವಿಮೆ ಕ್ಷೇತ್ರಗಳಲ್ಲಿ ವಿದೇಶಿ ನೇರ ಹೂಡಿಕೆಯ ಮಿತಿ ಸಡಿಲಿಕೆ ಸ್ವಾಗತಾರ್ಹ ಕ್ರಮ. 20 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ಎಲ್ಲ ನಗರಗಳಿಗೂ ಮೆಟ್ರೊ ಯೋಜನೆಗಳು, ಇನ್ನಷ್ಟು ಐಐಟಿ, ಐಐಎಂ ಮತ್ತು ಎಐಎಂಐಎಸ್‌ಗಳು, ನಿರ್ಮಾಣ ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆ ನಿಯಮಗಳ ಸಡಿಲಿಕೆ, ಸ್ಮಾರ್ಟ್‌ ನಗರ ಸ್ಥಾಪನೆಗೆ ಒತ್ತು ಜೇಟ್ಲಿ ಪ್ರಕಟಿಸಿರುವ ಇತರ ಕೆಲವು ಕ್ರಮಗಳು.
ಕೃಷಿ ಕ್ಷೇತ್ರಕ್ಕೆ ನೀಡುತ್ತಿದ್ದ ಒತ್ತು ಮುಂದುವರಿದಿದೆ. ಈಗ ಘೋಷಿಸಿರುವ ಉಪಕ್ರಮಗಳು ಕೂಡ ಗಮನಾರ್ಹ­ವಾಗಿವೆ. ಗ್ರಾಮೀಣ ಬಳಕೆಯ ವಿದ್ಯುತ್‌ ಜಾಲವನ್ನು ಪ್ರತ್ಯೇಕಿಸುವ ಕೆಲಸ ಆರಂಭವಾಗಿದೆ. ಇದು ಗುಜರಾತ್‌ ಮಾದರಿಯ ಅನುಕರಣೆಯಾಗಿದೆ.

ಯುವ ಉದ್ಯಮಿಗಳಿಗೆ ನೆರವು ನೀಡುವುದಕ್ಕಾಗಿ ರೂ. 10 ಸಾವಿರ ಕೋಟಿ ನಿಧಿ ಮತ್ತು ರೂ. 100 ಕೋಟಿಯ ನಾಯಕತ್ವ ನಿಧಿ ಅತ್ಯುತ್ತಮ ಕ್ರಮಗಳು. ಪ್ರಧಾನಿ ನರೇಂದ್ರ ಮೋದಿ ಅವರ ನೆಚ್ಚಿನ ನದಿ ಪುನಶ್ಚೇತನ ಯೋಜನೆಗೆ ರೂ. 2,000 ಕೋಟಿ ನೀಡಲಾಗಿದೆ. ಈ ವರ್ಷದಲ್ಲಿ ಇನ್ನು 9 ತಿಂಗಳಷ್ಟೇ ಉಳಿದಿರುವುದರಿಂದ ಈ ಅನುದಾನಗಳು ಬಳಕೆಯಾಗುವ ಸಾಧ್ಯತೆ ಕಡಿಮೆ. ಹೆಣ್ಣು ಮಕ್ಕಳ ಎಲ್ಲ ಶಾಲೆಗಳಲ್ಲಿ ಶೌಚಾಲಯ, ಹಣಕಾಸು ಮತ್ತು ಬ್ಯಾಂಕಿಂಗ್‌ ಕ್ಷೇತ್ರದಲ್ಲಿನ ಬದಲಾವಣೆಗಳೂ ಸ್ವಾಗತಾರ್ಹ

ನೇರ ತೆರಿಗೆ ವಿಷಯಕ್ಕೆ ಬಂದರೆ, ಆದಾಯ ತೆರಿಗೆ ವಿನಾಯಿತಿಯ ಮಿತಿ­ಯನ್ನು ರೂ. 50 ಸಾವಿರದಷ್ಟು ಹೆಚ್ಚಿಸ­ಲಾಗಿದೆ. 80ಸಿ ಅಡಿಯಲ್ಲಿನ ಪ್ರಯೋಜನ­ಗ­ಳನ್ನೂ ಇದೇ ಪ್ರಮಾಣ­ದಲ್ಲಿ ಏರಿಸಲಾಗಿದೆ. ಪೂರ್ವಾನ್ವಯ ತೆರಿಗೆ ಸ್ಥಗಿತ, ವರ್ಗಾವಣೆ ಬೆಲೆ ಮುಂತಾದ ವಿಷಯಗಳ ಬಗೆಗೂ ಗಮನ ಹರಿಸಲಾಗಿದೆ. ನೇರ ತೆರಿಗೆ ಸಂಹಿತೆಗೆ ಮತ್ತೂ ತ್ರಿಶಂಕು ಸ್ಥಿತಿಯೇ. ಪರೋಕ್ಷ ತೆರಿಗೆಗಳಲ್ಲಿ ತೇಪೆ ಹಾಕುವ ತೆರಿಗೆ ದರಗಳ ಅನಪೇಕ್ಷಿತ ಪ್ರವೃತ್ತಿಗೆ ಮತ್ತೆ ಚಾಲನೆ ನೀಡಲಾಗಿದೆ. ಸೇವಾ ತೆರಿಗೆಯಲ್ಲೂ ಗಮನಾರ್ಹವಾದ ಹೆಚ್ಚಿನ ಅಂಶಗಳೇನೂ ಇಲ್ಲ.

ಸ್ವತಂತ್ರ ಧೋರಣೆ  ಪ್ರದರ್ಶಿ­ಸುವ ಹಲವು ನೂತನ ಪ್ರಸ್ತಾಪಗಳೂ ಬಜೆಟ್‌ನಲ್ಲಿ ಇವೆ. ಹಿಂದಿನ ಸರ್ಕಾರದ ಹಲವು ಯೋಜನೆಗಳನ್ನು ಮುಂದುವ­ರಿಸುವ ಮೂಲಕ ವಾಸ್ತವಿಕ ನೆಲೆಗಟ್ಟಿನ­ಲ್ಲಿಯೇ ಬಜೆಟ್‌ ಸಾಗಿದೆ. ಅತ್ಯಲ್ಪ ಅವಧಿಯಲ್ಲಿ ವರಮಾನ ಮತ್ತು ವೆಚ್ಚದ ಅಂಕಿ ಅಂಶಗಳಿಗೆ ಬದ್ಧರಾಗಿ ಬಜೆಟ್‌ ಮಂಡಿಸಿದ ಜೇಟ್ಲಿ ಅವರಿಗೆ ಅಭಿನಂದನೆ ಸಲ್ಲಿಸಲೇಬೇಕು. ಹಲವು ಲೋಪಗಳನ್ನು ಕಾಣಬಹುದಾದರೂ ಮುಂದಿನ ಉತ್ತಮ ಕ್ರಮಗಳಿಗೆ ಇದು ತಾಲೀಮಂತೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT