ನವದೆಹಲಿ (ಐಎಎನ್ಎಸ್): ನಿಯೋಜಿತ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸುವಂತೆ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಹಾಗೂ ಆಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜೈ ಸೇರಿದಂತೆ ಸಾರ್ಕ್ ರಾಷ್ಟ್ರಗಳ ಮುಖ್ಯಸ್ಥರಿಗೆ ಆಹ್ವಾನ ನೀಡಲಾಗಿದೆ.
ಇದೇ 26ರಂದು (ಸೋಮವಾರ) ನಿಗದಿಯಾಗಿರುವ ಐತಿಹಾಸಿಕ ಘಟನೆಗೆ ಸಾಕ್ಷಿಯಾಗುವಂತೆ ಈಗಾಗಲೇ ಆಹ್ವಾನ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಭಾರತದ ಪ್ರಧಾನಿ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸುವಂತೆ ಸಾರ್ಕ್ ರಾಷ್ಟ್ರಗಳ ಮುಖ್ಯಸ್ಥರಿಗೆ ಆಹ್ವಾನ ನಿಡಿರುವುದು ಇದೇ ಮೊದಲ ಬಾರಿ ಎನ್ನಲಾಗಿದೆ.
ಆಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಜೈ ಹಾಗೂ ಪಾಕಿಸ್ತಾನದ ಪ್ರಧಾನಿ ಷರೀಫ್ ಅವರಿಗೆ ಈಗಾಗಲೇ ದೂರವಾಣಿ ಮೂಲಕ ಆಹ್ವಾನ ನೀಡಲಾಗಿದೆ. ಕರ್ಜೈ ಆಹ್ವಾನ ಒಪ್ಪಿಕೊಂಡಿದ್ದು ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸುವುದಾಗಿ ಖಚಿತ ಪಡಿಸಿದ್ದಾರೆ.
ಷರೀಫ್ಗೆ ಬಿರಿಯಾನಿ ನೀಡುವರೇ?:
ನವದೆಹಲಿ (ಪಿಟಿಐ): ‘ಒಂದು ವೇಳೆ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್, ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲು ಬಂದರೆ ಅವರಿಗೆ ಮೋದಿ ಚಿಕನ್ ಬಿರಿಯಾನಿಯ ಆತಿಥ್ಯ ನೀಡುತ್ತಾರೆಯೇ?’ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಲೇವಡಿ ಮಾಡಿದ್ದಾರೆ.