ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಂದೂರು ಕೆರೆ ನೊರೆಗೆ ಮೂರು ಕಾರಣ

Published 8 ಜೂನ್ 2023, 3:09 IST
Last Updated 8 ಜೂನ್ 2023, 3:09 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಬೆಳ್ಳಂದೂರು ಕೆರೆಯಲ್ಲಿ ಪ್ರತಿ ವರ್ಷ ಸೃಷ್ಟಿಯಾಗುವ ನೊರೆಗೆ ಭಾರತೀಯ ವಿಜ್ಞಾನ ಸಂಸ್ಥೆಯ ಸುಸ್ಥಿರ ತಂತ್ರಜ್ಞಾನ ಕೇಂದ್ರದ ವಿಜ್ಞಾನಿಗಳು ಮೂರು ಪ್ರಮುಖ ಕಾರಣಗಳನ್ನು ಪತ್ತೆ ಮಾಡಿದ್ದಾರೆ.

ಈವರೆಗೆ ಹಲವು ತಜ್ಞರು ಈ ಸಂಬಂಧ ಅನೇಕ ಸಿದ್ಧಾಂತಗಳನ್ನು ಮುಂದಿಟ್ಟಿದ್ದರು. ಅದಕ್ಕೆ ಪೂರಕವಾಗಿ ನಿಯಂತ್ರಣ ಕ್ರಮಗಳನ್ನು ತೆಗೆದುಕೊಂಡಿದ್ದರೂ ನೊರೆ ಸೃಷ್ಟಿಯಾಗುವುದನ್ನು ತಡೆಯುವುದಕ್ಕೆ ಸಾಧ್ಯವಾಗಿರಲಿಲ್ಲ. ಇದರ ಹಿಂದಿನ ರಹಸ್ಯವನ್ನು ಅರಿತುಕೊಳ್ಳುವ ಉದ್ದೇಶದಿಂದ ಸುಸ್ಥಿರ ತಂತ್ರಜ್ಞಾನ ಕೇಂದ್ರದ ವಿಜ್ಞಾನಿಗಳು ನಾಲ್ಕು ವರ್ಷಗಳ ಕಾಲ ಅಧ್ಯಯನ ನಡೆಸಿದ್ದು, ಅದರ ವರದಿ ಪ್ರಕಟವಾಗಿದೆ.

ಮುಖ್ಯವಾಗಿ ನಗರದಲ್ಲಿ ಧಾರಾಕಾರವಾಗಿ ಮಳೆ ಸುರಿದ ಬಳಿಕ,  ಮಳೆ ನೀರು ಕೆರೆಗೆ ಸೇರಿ ಅದರಲ್ಲಿನ ಮಾಲಿನ್ಯಕಾರಕ ಅಂಶಗಳು ಕದಡಿ ಹೋಗಿ ನೊರೆ ಸೃಷ್ಟಿಯಾಗುತ್ತಿತ್ತು ಎಂದು ತರ್ಕಿಸಲಾಗಿತ್ತು. ಆದರೆ, ಅದಷ್ಟೇ ಕಾರಣವಲ್ಲ ಎಂಬುದು ಹೊಸ ಅಧ್ಯಯನದಿಂದ ಗೊತ್ತಾಗಿದೆ.

ವಿಜ್ಞಾನಿಗಳು ನೀಡಿದ ಮೂರು ಕಾರಣಗಳು:

  • ಒಂದು ಬಕೆಟ್‌ಗೆ ಒಂದು ಹಿಡಿ ಡಿಟರ್ಜೆಂಟ್‌ ಪುಡಿಯನ್ನು ಹಾಕಿ ಚೆನ್ನಾಗಿ ಕಲಕಿದರೆ ಹೇಗೆ ನೊರೆ ಸೃಷ್ಟಿಯಾಗುತ್ತದೆಯೊ ಅದೇ ರೀತಿ ಬೆಳ್ಳಂದೂರು ಕೆರೆಯಲ್ಲಿ ನೊರೆ ಸೃಷ್ಟಿ ಆಗುತ್ತದೆ. ಅದು ಹೇಗೆಂದರೆ, ಸಂಸ್ಕರಿಸದ ಮಾಲಿನ್ಯಯುಕ್ತ ನೀರು ಕೆರೆಗೆ ಬರುತ್ತದೆ. ಹೀಗೆ ಬಂದು ಸೇರಿದ ಮಾಲಿನ್ಯಯುಕ್ತ ನೀರು ಕೆರೆಯಿಂದ ಹೊರ ಹೋಗಲು ಕನಿಷ್ಠ 10–15 ದಿನಗಳು ಬೇಕಾಗುತ್ತದೆ. ಈ ಅವಧಿಯಲ್ಲಿ ಸಾವಯವ ವಸ್ತುಗಳು ಕೆರೆಯ ನೀರಿನಲ್ಲಿ ಆಮ್ಲಜನಕವಿಲ್ಲದೇ, ತಳ ಸೇರುತ್ತವೆ. ಕೆಸರಿನ ರೂಪ ಪಡೆಯುತ್ತದೆ. ಅಲ್ಲದೇ ಡಿಟರ್ಜೆಂಟ್‌, ಬಟ್ಟೆಗಳಿಗೆ ಬಳಸುವ ಬಣ್ಣಗಳು ಮಾಲಿನ್ಯದ ನೀರಿನ ಮೇಲ್ಪದರದಲ್ಲೇ ಉಳಿಯುತ್ತದೆ ಇವು ಕರಗುವುದಿಲ್ಲ. ಹಾಗೆಯೇ ಕೆರೆಯನ್ನು ಸೇರುತ್ತದೆ.

  • ಭಾರಿ ಮಳೆ  ಆದ ಸಂದರ್ಭದಲ್ಲಿ ಅಪಾರ ಪ್ರಮಾಣದ ನೀರು ಹರಿದು ಬರುತ್ತದೆ. ಈ ರೀತಿ ವೇಗವಾಗಿ ಬರುವ ನೀರಿನಿಂದ ಕೆರೆಯ ನೀರು ಬಗ್ಗಡಗೊಳ್ಳುತ್ತದೆ. ರಾತ್ರಿ ಇಡೀ ಒಳ ಹರಿವಿನ ಪ್ರಮಾಣ ಹೆಚ್ಚಿದಂತೆ ಕೆರೆಯ ಅಡಿಯಲ್ಲಿ ಕೆಸರು ಮತ್ತು ಮಾಲಿನ್ಯದ ನೀರಿನ ಮಂಥನ ಆರಂಭವಾಗುತ್ತದೆ. ಇದು ನೊರೆ ಸೃಷ್ಟಿಯಾಗಲು ವೇದಿಕೆಯನ್ನು ಹದ ಮಾಡುತ್ತದೆ. ಕೆರೆಯ ಆಳದಲ್ಲಿ ಅಲ್ಪ ಪ್ರಮಾಣದ ನೊರೆ ಇರುತ್ತದೆ. ಮಳೆಯಿಂದಾಗಿ ಕೆರೆಯಲ್ಲಿ ಯಾವಾಗ ನೀರಿನ ಪ್ರಮಾಣ ಹೆಚ್ಚುತ್ತಾ ಹೋಗುತ್ತದೆಯೋ ಆಗ 25 ಅಡಿ ಎತ್ತರದಷ್ಟು ಗಾಳಿ ಗುಳ್ಳೆಗಳು ಹಾರುತ್ತವೆ. ಈ ಗಾಳಿಗುಳ್ಳೆಗಳು ನೊರೆಯನ್ನು ಸೃಷ್ಟಿಸುತ್ತದೆ.

  • ಕೆಲವು ವಿಸರ್ಜಿತ ಘನವಸ್ತುಗಳಲ್ಲಿ ಬ್ಯಾಕ್ಟೀರಿಯಾಗಳೂ ಇರುತ್ತವೆ. ಇವು ಕೂಡ ನೊರೆ ಸೃಷ್ಟಿಯಾಲು ಕಾರಣವಾಗುತ್ತವೆ. ಈ ಅಂಶವನ್ನು ದೃಢಪಡಿಸಲು ಇನ್ನಷ್ಟು ಪ್ರಯೋಗಗಳು ನಡೆಯಬೇಕಾಗಿವೆ.

ಸುಸ್ಥಿರ ತಂತ್ರಜ್ಞಾನ ಕೇಂದ್ರದ ವಿಜ್ಞಾನಿಗಳಾದ ಚಾಣಕ್ಯ ಎಚ್‌.ಎನ್‌, ಲಕ್ಷ್ಮಿನಾರಾಯಣ ರಾವ್‌ ಮತ್ತು ಪಿಎಚ್‌ಡಿ ವಿದ್ಯಾರ್ಥಿನಿ  ರೇಷ್ಮಿ ದಾಸ್‌ ಈ ಅಧ್ಯಯನ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT