ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಹಾನಿ: 4.5 ಲಕ್ಷ ರೈತರಿಗೆ ₹330 ಕೋಟಿ ಪರಿಹಾರ ಒದಗಿಸಿದ ಸರ್ಕಾರ

ತ್ವರಿತಗತಿಯಲ್ಲಿ ಬಾಕಿ ಪರಿಹಾರ ವಿತರಣೆಗೆ ಸರ್ಕಾರದ ಸೂಚನೆ
Last Updated 8 ಡಿಸೆಂಬರ್ 2021, 3:00 IST
ಅಕ್ಷರ ಗಾತ್ರ

ಬೆಂಗಳೂರು: ಇತ್ತೀಚಿನ ಮಳೆ ಮತ್ತು ಪ್ರವಾಹದಿಂದ ಉಂಟಾದ ಬೆಳೆ ನಷ್ಟದ ಪರಿಹಾರವನ್ನು ರೈತರ ಖಾತೆಗಳಿಗೆ ಜಮೆ ಮಾಡುವ ಪ್ರಕ್ರಿಯೆಗೆ ಇನ್ನಷ್ಟು ಚುರುಕು ನೀಡಿದ್ದು, ಕಳೆದ 10 ದಿನಗಳಲ್ಲಿ 4.5 ಲಕ್ಷ ರೈತರ ಖಾತೆಗಳಿಗೆ ಒಟ್ಟು ₹330 ಕೋಟಿ ಜಮೆ ಮಾಡಿದೆ.

ಇದೇ 13ರಿಂದ ವಿಧಾನಮಂಡಲ ಅಧಿವೇಶನ ಬೆಳಗಾವಿಯಲ್ಲಿ ಆರಂಭವಾಗಲಿದ್ದು, ಅದಕ್ಕೆ ಮುನ್ನವೇ ಗರಿಷ್ಠ ಪ್ರಮಾಣದಲ್ಲಿ ಪರಿಹಾರ ವಿತರಿಸಲು ಸರ್ಕಾರ ನಿರ್ಧರಿಸಿದೆ.

ಅಲ್ಲದೆ, ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ವಿರೋಧಪಕ್ಷಗಳು ಬೆಳೆ ನಷ್ಟ ಪರಿಹಾರ ವಿತರಣೆ, ಕೋವಿಡ್‌ನಿಂದ ಮೃತಪಟ್ಟವರಿಗೆ ಪರಿಹಾರ ನೀಡಿಲ್ಲ ಎಂಬ ವಿಷಯವನ್ನೇ ಪ್ರಧಾನವಾಗಿ ಎತ್ತಿಕೊಳ್ಳುವ ಸಾಧ್ಯತೆ ಇರುವುದರಿಂದ, ಪರಿಹಾರ ವಿತರಣೆ ಚುರುಕುಗೊಳಿಸಲಾಗಿದೆ ಎಂದು ಮೂಲಗಳು ಹೇಳಿವೆ.

‘ಹಿಂದೆಲ್ಲ ಪರಿಹಾರ ಪಡೆಯಲು ರೈತರು ತಿಂಗಳುಗಟ್ಟಲೆ ಕಾಯಬೇಕಾಗಿತ್ತು. ಈ ವಿಳಂಬವನ್ನು ತಪ್ಪಿಸಲು ಬೆಳೆ ಹಾನಿಯ ಪರಿಹಾರ ಪಾವತಿಗಾಗಿ ಇದೇ ಮೊದಲ ಬಾರಿಗೆ ಹೊಸ ತಂತ್ರಾಂಶದ ಅಳವಡಿಸಿಕೊಳ್ಳಲಾಗಿದೆ. ಇದರಿಂದಾಗಿ ಹಾನಿಗೆ ಸಂಬಂಧಿಸಿದಂತೆ ಮಾಹಿತಿ ನಮೂದಿಸಿದ ಕೆಲವೇ ದಿನಗಳಲ್ಲಿ ರೈತರ ಖಾತೆಗಳಿಗೇ ನೇರವಾಗಿ ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ’ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್‌ ಗಿರಿನಾಥ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಳೆ ನಷ್ಟದ ವಿವರವನ್ನು ತಂತ್ರಾಂಶಕ್ಕೆ ಭರ್ತಿಮಾಡಲು ಮಂಗಳವಾರ(ಡಿ.7) ಕೊನೆಯ ದಿನವಾಗಿದ್ದು, ಮಧ್ಯರಾತ್ರಿ 12ವರೆಗೆ ಭರ್ತಿ ಮಾಡಬಹುದು. ಮುಂದಿನ ಎರಡರಿಂದ ಮೂರು ದಿನಗಳಲ್ಲಿ ಸುಮಾರು ₹200 ರಿಂದ ₹300 ಕೋಟಿ ಪಾವತಿ ಮಾಡಬೇಕಾ
ಗಬಹುದು. ಎಷ್ಟು ಎಂಬ ನಿಖರ ಮಾಹಿತಿ ಬುಧವಾರ ಗೊತ್ತಾಗುತ್ತದೆ. ಈ ರೀತಿ ತ್ವರಿತಗತಿಯಲ್ಲಿ ರೈತರ ಖಾತೆಗೆ ಹಣ ಜಮೆ ಮಾಡುತ್ತಿರುವುದುದಾಖಲೆ ಮತ್ತು ದೇಶದಲ್ಲೇ ಮೊದಲು’ ಎಂದು ಅವರು ಹೇಳಿದರು.

‘ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್‌ ಕುಟುಂಬಗಳ ಸದಸ್ಯರಿಂದ 18,500 ಅರ್ಜಿಗಳು ಬಂದಿದ್ದು, ಈಗಾಗಲೇ 9,000 ಮಂದಿಗೆ ತಲಾ ₹1ಲಕ್ಷ ಪಾವತಿ ಮಾಡಲಾಗಿದೆ. ಪರಿಹಾರದ ಚೆಕ್‌ಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಿಂದ ಹಸ್ತಾಂತರಿಸಬೇಕಾಗಿದೆ. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಉಳಿದವರಿಗೆ ವಿತರಿಸಿಲ್ಲ. ನೀತಿ ಸಂಹಿತೆ ಮುಗಿದ ತಕ್ಷಣ ವಿತರಿಸಲಾಗುವುದು’ ಎಂದು ಹೇಳಿದರು.

ರೈತರ ಬ್ಯಾಂಕ್‌ ಖಾತೆಗಳಿಗೇ ನೇರವಾಗಿ ಹಣ ಜಮೆ ಮಾಡುವುದರಿಂದ, ಮಧ್ಯವರ್ತಿಗಳ ಆಟ ನಡೆಯುವುದಿಲ್ಲ. ಹಿಂದೆ
ಮೂರು ತಿಂಗಳಿಗೆ ಒಮ್ಮೆ ಮಾತ್ರ ಪರಿಹಾರ ಹಣ ಬಿಡುಗಡೆ ಮಾಡಲಾಗುತ್ತಿತ್ತು. ಈಗ ಎರಡು–ಮೂರು ದಿನಗಳಿಗೊಮ್ಮೆ ತಂತ್ರಾಂಶದಲ್ಲಿ ನಮೂದಿಸಿ ತಕ್ಷಣವೇ ಪರಿಹಾರ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT