ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೈಂಗಿಕ ಕಿರುಕುಳ ದೂರಿಗೆ 6 ವರ್ಷ; ಕ್ರಮಕ್ಕೆ ನಿರ್ಲಕ್ಷ್ಯ; ಹೈಕೋರ್ಟ್‌ ಎಚ್ಚರಿಕೆ

ಸಾರಿಗೆ ಇಲಾಖೆಗೆ ಹೈಕೋರ್ಟ್‌ ಖಡಕ್‌ ಎಚ್ಚರಿಕೆ
Published 21 ಆಗಸ್ಟ್ 2024, 15:43 IST
Last Updated 21 ಆಗಸ್ಟ್ 2024, 15:43 IST
ಅಕ್ಷರ ಗಾತ್ರ

ಬೆಂಗಳೂರು: ‘ಓಲಾ ಕ್ಯಾಬ್‌ನ ಚಾಲಕ ನನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬರು ಆರು ವರ್ಷಗಳ ಹಿಂದೆ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಸರ್ಕಾರ ಈತನಕ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂಬ ಆಕ್ಷೇಪಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಈ ಸಂಬಂಧ 22 ವರ್ಷದ ಯುವತಿಯೊಬ್ಬರು ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್‌.ಕಮಲ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಭವಿಷ್ಯದಲ್ಲಿ ಎದುರಾಗುವ ಎಲ್ಲ ಪರಿಣಾಮಗಳಿಗೂ ಸಿದ್ಧವಾಗಿರಿ’ ಎಂದು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಸಲ್ಲಿಸಿದ ಪ್ರಮಾಣ ಪತ್ರದ ವಿವರಣೆಗೆ ತೀವ್ರ ಅಸಮಾಧಾನ ಹೊರಹಾಕಿದ ನ್ಯಾಯಪೀಠ, ‘ಈ ಅರ್ಜಿಯು ಅರ್ಧ ದಶಕದಿಂದ ಬಾಕಿ ಇದೆ. ನ್ಯಾಯಪೀಠ ಗಂಟಲು ಶೋಷಣೆ ಮಾಡಿ ಕುಟುಕಿದ ಪರಿಣಾಮ ನೀವು ಈಗ ಈ ದಾಖಲೆಗಳ ಜೊತೆ ಬಂದಿದ್ದೀರಿ. ಆದರೆ, ನೀವು ಕೊಟ್ಟಿರುವ ಈ ದಾಖಲೆಗಳು ನಿರಾಶಾದಾಯಕವಾಗಿವೆ. ಇದನ್ನು ಗಮನಿಸಿದರೆ ನಿಮಗೆ ಈ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಳ್ಳುವ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ’ ಎಂದು ನ್ಯಾಯಪೀಠ ಸರ್ಕಾರವನ್ನು ಝಾಡಿಸಿತು.

‘ಯುವತಿಯ ಮೇಲೆ ಓಲಾ ಚಾಲಕ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆಯನ್ನು ನಿಯಮದ ಪ್ರಕಾರ ಓಲಾ ಸಂಸ್ಥೆಯು ಸರ್ಕಾರದ ಗಮನಕ್ಕೆ ಏಕೆ ತಂದಿಲ್ಲ? ನೀವು ಸುಮ್ಮನೇ ಕುಳಿತಿದ್ದೀರಲ್ಲವೇ? ನಾವು ನಿಮ್ಮಿಂದ ಉತ್ತಮ ಉತ್ತರದ ನಿರೀಕ್ಷೆಯಲ್ಲಿದ್ದೆವು. ಆದರೆ, ಪ್ರಮಾಣ ಪತ್ರ ನೋಡಿದರೆ ಇದು ಕೇವಲ ಕಣ್ಣೊರೆಸುವ ತಂತ್ರವಾಗಿ ಗೋಚರಿಸುತ್ತಿದೆ’ ಎಂದು ಚಾಟಿ ಬೀಸಿತು.

‘ಓಲಾಕ್ಕೆ ನೋಟಿಸ್‌ ಜಾರಿ ಮಾಡುವುದಕ್ಕೂ ಮುನ್ನ ಏನಾಗಿದೆ ಎಂಬ ಮಾಹಿತಿಯೇ ನಿಮ್ಮ ಬಳಿ ಇಲ್ಲ. ಇದು ತೀರಾ ದುರದೃಷ್ಟಕರ. ಮುಂದೆ ಏನಾಗುತ್ತದೆ ಎಂಬುದಕ್ಕೆ ನಿಮ್ಮ ಅಧಿಕಾರಿಗಳಿಗೆ ಸಿದ್ಧವಾಗಿರಲು ಹೇಳಿ’ ಎಂದು ಎಚ್ಚರಿಕೆ ನೀಡಿ ಅರ್ಜಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಪೀಠ ಆದೇಶ ಕಾಯ್ದಿರಿಸಿತು.

ಪ್ರಕರಣವೇನು?’ 

‘ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನಿಷೇಧ, ತಡೆ ಮತ್ತು ಪರಿಹಾರ ಕಾಯ್ದೆ–2013ರ ವಿವಿಧ ಕಲಂಗಳ ಅನ್ವಯ ಓಲಾ ಕ್ಯಾಬ್‌ನ ಮಾತೃ ಸಂಸ್ಥೆ ಎಎನ್ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನ ಆಂತರಿಕ ದೂರು ಸಮಿತಿಗೆ 2018ರ ಸೆಪ್ಟೆಂಬರ್ 30ರಂದು ನೀಡಿರುವ ದೂರಿನ ತನಿಖೆ ನಡೆಸಲು ನಿರ್ದೇಶಿಸಬೇಕು’ ಎಂದು ಕೋರಿ ಯುವತಿ ಹೈಕೋರ್ಟ್‌ಗೆ ಈ ಅರ್ಜಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT