ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ವೈ.ದೇವೇಂದ್ರಪ್ಪ ಪುತ್ರನ ವಿರುದ್ಧ ಪ್ರಕರಣ ದಾಖಲು

Published 17 ನವೆಂಬರ್ 2023, 10:03 IST
Last Updated 17 ನವೆಂಬರ್ 2023, 10:03 IST
ಅಕ್ಷರ ಗಾತ್ರ

ಬೆಂಗಳೂರು: ಮದುವೆಯಾಗುವುದಾಗಿ ಹೇಳಿ ದೈಹಿಕ ಸಂಪರ್ಕ ಹೊಂದಿ ಮಹಿಳೆಯೊಬ್ಬರನ್ನು ವಂಚಿಸಿರುವ ಆರೋಪದಡಿ ಬಳ್ಳಾರಿ ಕ್ಷೇತ್ರದ ಬಿಜೆಪಿ ಸಂಸದ ದೇವೇಂದ್ರಪ್ಪ ಅವರ ಪುತ್ರ ವೈ. ರಂಗನಾಥ್ ವಿರುದ್ಧ ಬೆಂಗಳೂರಿನ ಬಸವನಗುಡಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಆರೋಪ ತಳ್ಳಿ ಹಾಕಿರುವ ರಂಗನಾಥ್, ‘ಮಹಿಳೆ ಹಾಗೂ ಸ್ನೇಹಿತರು, ಸುಳ್ಳು ಆರೋಪ ಹೊರಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಜಾತಿನಿಂದನೆ ಸಹ ಮಾಡಿದ್ದಾರೆ’ ಎಂದು ಮೈಸೂರಿನ ವಿಜಯನಗರ ಠಾಣೆಗೆ ದೂರು ನೀಡಿದ್ದಾರೆ. ಸಂತ್ರಸ್ತ ಮಹಿಳೆ ಹಾಗೂ ಇತರರ ವಿರುದ್ಧ ಪ್ರತ್ಯೇಕ ಎಫ್‌ಐಆರ್ ದಾಖಲಾಗಿದೆ.

‘ಮಹಿಳೆ ಹಾಗೂ ರಂಗನಾಥ್ ಇಬ್ಬರೂ ದೂರು ನೀಡಿದ್ದಾರೆ. ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಎರಡೂ ಪ್ರಕರಣಗಳ ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಹೋಟೆಲ್‌ನಲ್ಲಿ ದೈಹಿಕ ಸಂಪರ್ಕ: ‌‘2022ರಲ್ಲಿ ಸ್ನೇಹಿತರ ಮೂಲಕ ರಂಗನಾಥ್ ಪರಿಚಯವಾಗಿದ್ದರು. ಆಗಾಗ ಮೊಬೈಲ್‌ ಕರೆ ಮಾಡಿ ಮಾತನಾಡುತ್ತಿದ್ದರು. ಒಮ್ಮೆ ಕರೆ ಮಾಡಿದ್ದಾಗ, ‘ನಾನು ಮೈಸೂರಿನ ಪಿಯು ಕಾಲೇಜಿನಲ್ಲಿ ಉಪನ್ಯಾಸಕ. ನಿನ್ನನ್ನು ಪ್ರೀತಿಸುತ್ತಿದ್ದೇನೆ. ನೀನು ನನ್ನನ್ನು ಮದುವೆಯಾದರೆ, ಚೆನ್ನಾಗಿ ನೋಡಿಕೊಳ್ಳುತ್ತೇನೆ’ ಎಂಬುದಾಗಿ ಹೇಳಿದ್ದರು’ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

‘2023ರ ಜನವರಿ 24ರಂದು ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿರುವ ಹೋಟೆಲ್‌ಗೆ ರಂಗನಾಥ್‌ ನನ್ನನ್ನು ಕರೆದುಕೊಂಡು ಹೋಗಿದ್ದರು. ಅಲ್ಲಿಂದ, ಮೈಸೂರಿಗೆ ಕರೆದೊಯ್ದು ಲಲಿತ್ ಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ ಇರಿಸಿದ್ದರು. ನನ್ನನ್ನು ಮದುವೆಯಾಗುವುದಾಗಿ ಹೇಳಿ ನಂಬಿಸಿದ್ದರು. ಅಂದು ರಾತ್ರಿ ಮದ್ಯ ಕುಡಿದು, ನನ್ನ ಜೊತೆ ದೈಹಿಕ ಸಂಪರ್ಕ ಮಾಡಿದ್ದರು. ಮರುದಿನ ಬೆಂಗಳೂರಿಗೆ ವಾಪಸು ಕಳುಹಿಸಿದ್ದರು. ಇತ್ತೀಚಿನ ದಿನಗಳಲ್ಲಿ ರಂಗನಾಥ್ ನನ್ನ ಜೊತೆ ಮಾತನಾಡುತ್ತಿಲ್ಲ. ಮದುವೆಯಾಗು ಎಂದರೆ, ಕೊಲೆ ಬೆದರಿಕೆಯೊಡ್ಡುತ್ತಿದ್ದಾರೆ’ ಎಂದು ಮಹಿಳೆ ಆರೋಪಿಸಿದ್ದಾರೆ.

₹ 15 ಲಕ್ಷಕ್ಕೆ ಬ್ಲ್ಯಾಕ್‌ಮೇಲ್:

ವಿಜಯನಗರ ಠಾಣೆಗೆ ನ. 13ರಂದು ದೂರು ನೀಡಿರುವ ರಂಗನಾಥ್, ‘ಸ್ನೇಹಿತರ ಮೂಲಕ ಆರೋಪಿ ಮಹಿಳೆ ಪರಿಚಯವಾಗಿತ್ತು. ನನ್ನನ್ನು ಪ್ರೀತಿಸುವುದಾಗಿ ಅವರು ಹೇಳುತ್ತಿದ್ದರು. ಆದರೆ, ನಾನು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದೆ’ ಎಂದು ಹೇಳಿದ್ದಾರೆ.

‘2023ರ ಅಕ್ಟೋಬರ್‌ನಲ್ಲಿ ಬೆಂಗಳೂರಿನ ಸ್ಯಾಟ್‌ಲೈಟ್ ಬಸ್ ನಿಲ್ದಾಣ ಎದುರು ನನ್ನನ್ನು ಭೇಟಿಯಾಗಿದ್ದ ಮಹಿಳೆ, ಅವಾಚ್ಯ ಪದಗಳಿಂದ ನಿಂದಿಸಿದ್ದರು. ಮದುವೆಯಾಗುವಂತೆ ಒತ್ತಾಯಿಸಿ ಜಾತಿ ನಿಂದನೆ ಮಾಡಿದ್ದರು. ನನ್ನ ಜೊತೆಗೆ ಫೋಟೊ ತೆಗೆಸಿಕೊಂಡಿದ್ದ ಮಹಿಳೆ, ಅದೇ ಫೋಟೊಗಳನ್ನು ಪತ್ನಿಗೆ ಕಳುಹಿಸುವುದಾಗಿ ಬೆದರಿಸಿ ₹32,500 ಪಡೆದಿದ್ದರು.’

‘ಮಹಿಳೆಯ ಸ್ನೇಹಿತನೊಬ್ಬ ₹15 ಲಕ್ಷ ನೀಡುವಂತೆ ಬೇಡಿಕೆ ಇರಿಸಿದ್ದ. ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ್ದ. ಹಣ ಕೊಟ್ಟಿರಲಿಲ್ಲ. ಕನಿಷ್ಠ ₹10 ಲಕ್ಷವನ್ನಾದರೂ ನೀಡುವಂತೆ ಆತ ಒತ್ತಾಯಿಸಿದ್ದ. ಹಣ ನೀಡಲು ಸಾಧ್ಯವಿಲ್ಲವೆಂದು ಹೇಳಿದ್ದೆ’ ಎಂದು ರಂಗನಾಥ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ರಂಗನಾಥ್ ಅವರು ನಂಜನಗೂಡು ತಾಲ್ಲೂಕು ಹದಿನಾರು ಪಿಯು ಕಾಲೇಜಿನ ಉಪನ್ಯಾಸಕರಾಗಿದ್ದು, ಸದ್ಯ ಮಹಾರಾಜ ಪಿಯು ಕಾಲೇಜಿನಲ್ಲಿ ನಿಯೋಜನೆ ಮೇಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT