ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌. ಅಶೋಕ ಮಗ ಅಪಘಾತ ಮಾಡಿದ್ದಾರೆ ಎನ್ನಲು ಸಾಕ್ಷ್ಯಗಳಿಲ್ಲ: ಎಸ್‌ಪಿ ಬಾಬಾ

ವಾರದೊಳಗೆ ತನಿಖೆ ಪೂರ್ಣಗೊಳಿಸುವುದಾಗಿ ಬಳ್ಳಾರಿ ಎಸ್‌ಪಿ ಹೇಳಿಕೆ
Last Updated 16 ಫೆಬ್ರುವರಿ 2020, 13:45 IST
ಅಕ್ಷರ ಗಾತ್ರ

ಹೊಸಪೇಟೆ: ರಾಜ್ಯದ ಪ್ರಭಾವಿ ಸಚಿವರ ಮಗ ಅತಿ ವೇಗ, ಅಜಾಗರೂಕತೆಯಿಂದ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣವಾಗಿದ್ದಾರೆ ಎನ್ನಲಾದ ಪ್ರಕರಣ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಯಾಗುತ್ತಿರುವ ಮಧ್ಯೆಯೇ ಬಳ್ಳಾರಿ ಜಿಲ್ಲಾ ಪೊಲೀಸರು ಶೀಘ್ರದಲ್ಲಿ ಪ್ರಕರಣದ ತನಿಖೆ ಮುಗಿಸಲು ಮುಂದಾಗಿದ್ದಾರೆ.

‘ಮರಿಯಮ್ಮನಹಳ್ಳಿ ಬಳಿ ಸಂಭವಿಸಿದ ಅಪಘಾತಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ರಾಹುಲ್‌ ಎಂಬಾತನನ್ನು ಈಗಾಗಲೇ ಬಂಧಿಸಲಾಗಿದ್ದು, ಆರೋಪಿಗೆ ಜಾಮೀನು ಕೂಡ ಸಿಕ್ಕಿದೆ. ಇಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಪೊಲೀಸ್‌ ಠಾಣೆಯಿಂದಲೇ ಜಾಮೀನು ಸಿಗುತ್ತದೆ. ವಾರದೊಳಗೆ ಪ್ರಕರಣದ ತನಿಖೆ ಪೂರ್ಣಗೊಳಿಸಲಾಗುವುದು. ಪ್ರಾಥಮಿಕ ಹಂತದ ತನಿಖೆ ಪ್ರಕಾರ, ಕಂದಾಯ ಸಚಿವ ಆರ್‌. ಅಶೋಕ್‌ ಅವರ ಮಗ ಶರತ್‌ ಅವರು ಇದರಲ್ಲಿ ಭಾಗಿಯಾಗಿದ್ದರು ಎನ್ನುವುದಕ್ಕೆ ಸಾಕ್ಷ್ಯಧಾರಗಳಿಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ತಿಳಿಸಿದ್ದಾರೆ.

‘ಮೃತ ರವಿ ನಾಯ್ಕ ಅವರ ಚಿಕ್ಕಪ್ಪ ಲಕ್ಷ್ಮಣ ನಾಯ್ಕ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ರಾಹುಲ್‌ ಎಂಬಾತನೇ ಕಾರು ಓಡಿಸುತ್ತಿದ್ದ ಎಂದು ಎಫ್‌.ಐ.ಆರ್‌.ನಲ್ಲಿ ದಾಖಲಾಗಿದೆ. ಹೀಗಾಗಿ ಸಚಿವರ ಮಗ ಇದರಲ್ಲಿ ಶಾಮಿಲಾಗಿದ್ದ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದಿದ್ದಾರೆ.

‘ಪೊಲೀಸರು ನಡೆಸುತ್ತಿರುವ ತನಿಖೆ ಮೇಲೆ ಯಾರು ಪ್ರಭಾವ ಬೀರುತ್ತಿಲ್ಲ. ಕಾನೂನು ಪ್ರಕಾರ ಕೆಲಸ ನಿರ್ವಹಿಸಲಾಗುತ್ತಿದೆ. ಯಾರನ್ನೂ ಮೆಚ್ಚಿಸುವ ಅಥವಾ ಅವರ ತಾಳಕ್ಕೆ ತಕ್ಕಂತೆ ನಡೆಯುವ ಪ್ರಶ್ನೆಯೇ ಇಲ್ಲ’ ಎಂದು ಹೇಳಿದ್ದಾರೆ.

ಫೆ. 10ರಂದು ಮಧ್ಯಾಹ್ನ 3ಕ್ಕೆ ತಾಲ್ಲೂಕಿನ ಮರಿಯಮ್ಮನಹಳ್ಳಿ ರಾಷ್ಟ್ರೀಯ ಹೆದ್ದಾರಿ 50ರ ಬಳಿ ಮರಿಯಮ್ಮನಹಳ್ಳಿ ತಾಂಡಾದ ರವಿ ನಾಯ್ಕಗೆ (16) ಕಾರು ಡಿಕ್ಕಿ ಹೊಡೆದಿದದ್ದಕ್ಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದ. ಕಾರಿನ ಚಾಲಕ ರಾಹುಲ್‌, ಕಾರಿನಲ್ಲಿದ್ದ ರಾಕೇಶ್‌, ಶಿವಕುಮಾರ ಹಾಗೂ ವರುಣ್‌ ಗಾಯಗೊಂಡಿದ್ದರು. ಸಚಿನ್‌ ಎನ್ನುವವನಿಗೆ ತೀವ್ರ ಗಾಯವಾಗಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದ. ಆದರೆ, ಸಚಿವರ ಮಗನೇ ಕಾರು ಓಡಿಸಿ, ಇಬ್ಬರ ಸಾವಿಗೆ ಕಾರಣವಾಗಿದ್ದಾನೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ. ಪೊಲೀಸರ ಕಾರ್ಯವೈಖರಿ ವಿರುದ್ಧವೇ ಅನೇಕ ಪ್ರಶ್ನೆಗಳು ಎದ್ದಿವೆ.

ಇದೊಂದು ಕೊಲೆ ಪ್ರಕರಣವಲ್ಲ. ಅಜಾಗರೂಕತೆಯಿಂದ ಸಂಭವಿಸಿದ ಅಪಘಾತ. ಇದರಲ್ಲಿ ಸಚಿವರ ಮಗ ಶಾಮಿಲಾಗಿಲ್ಲ.
–ಸಿ.ಕೆ.ಬಾಬಾ, ಬಳ್ಳಾರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT