ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿಪಥ್ ಸೇವೆ; ಉದ್ಯೋಗದಲ್ಲಿ ಆದ್ಯತೆ: ಆರಗ ಜ್ಞಾನೇಂದ್ರ

ತರಬೇತಿ ಕಾರ್ಯಕ್ರಮ ಉದ್ಘಾಟಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ
Last Updated 28 ಆಗಸ್ಟ್ 2022, 4:17 IST
ಅಕ್ಷರ ಗಾತ್ರ

ಆನಂದಪುರ: ‘ಅಗ್ನಿಪಥ್ ಸೇವೆ ಸಲ್ಲಿಸಿದವರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಭರವಸೆ ನೀಡಿದೆ. ಈ ವಿಷಯವಾಗಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗಿದ್ದು, ಅಗ್ನಿಪಥ್ ಸೇವೆ ಸಲ್ಲಿಸಿದವರಿಗೆ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳದಲ್ಲಿ ಆದ್ಯತೆ ನೀಡುವ ಕುರಿತು ನಿಶ್ಚಯ ಮಾಡಲಾಗಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಸಮೀಪದ ಮುರುಘಾಮಠದಲ್ಲಿ ಮುರುಘರಾಜೇಂದ್ರ ಮಹಾಸಂಸ್ಥಾನ ಮಠ, ಮಲೆನಾಡು ಸೋಲ್ಜರ್ ಕೋಚಿಂಗ್ ಸೆಂಟರ್, ಆರ್ಮಿ ಕ್ಲಬ್, ಹಾಲಿ ಹಾಗೂ ಮಾಜಿ ಸೈನಿಕರ ಆಶ್ರಯದಲ್ಲಿ ನಡೆದ ಅಗ್ನಿಪಥ್ ಸೇನಾ ನೇಮಕಾತಿಗೆ ಉಚಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಸದ್ಯದಲ್ಲೇ 5,000 ಪೊಲೀಸ್‌ ಕಾನ್‌ಸ್ಟೆಬಲ್ ಹಾಗೂ 545 ಪೊಲೀಸ್‌ ಸಬ್ಇನ್‌ಸ್ಪೆಕ್ಟರ್ ನೇಮಕಕ್ಕೆ ಆದೇಶ ಹೊರಡಿಸಲಾಗುವುದು. ಅಗ್ನಿಪಥ್ ಉತ್ತಮ ಯೋಜನೆಯಾಗಿದ್ದು,
ಕೆಲವು ರಾಜಕಾರಣಿಗಳಿಂದ ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡಿದರು. ನಮ್ಮ ವಿರುದ್ಧ ಎತ್ತಿಕಟ್ಟಿದರು’ ಎಂದು ಆರೋಪ ಮಾಡಿದರು.

‘ಆನಂದಪುರದಲ್ಲಿ ಪೂರ್ಣ ಪ್ರಮಾಣದ ಪೊಲೀಸ್‌ ಠಾಣೆಗೆ ಆದೇಶ ಹೊರಡಿಸಲಾಗಿದೆ. ಕೆಲವೇ ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ. ಆನಂದಪುರ ದೊಡ್ಡ ಹೋಬಳಿಯಾಗಿದ್ದು, ಇದರ ವ್ಯಾಪ್ತಿ ದೊಡ್ಡದಾಗಿದೆ. ಶಾಸಕರು ಈ ಕುರಿತು ಬೇಡಿಕೆ ಇಟ್ಟಿದ್ದರು, ಈಡೇರಿಸಲಾಗಿದೆ’ ಎಂದು ಹೇಳಿದರು.

ಕಸ್ತೂರಿ ರಂಗನ್ ವರದಿ ಮಲೆನಾಡು ಭಾಗಕ್ಕೆ ಶಾಪವಾಗಿತ್ತು. ಮೊದಲಿನಿಂದಲೂ ಈ ಭಾಗದ ಶಾಸಕರ ಜೊತೆಗೂಡಿ ಅಧಿವೇಶನದಲ್ಲಿ ಹೋರಾಟ ಮಾಡುತ್ತಾ ಬರಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ದೆಹಲಿಗೆ ಕರೆದುಕೊಂಡು ಹೋಗಿ ಅಲ್ಲಿ ಸಭೆ ಮಾಡಿ ಸದ್ಯಕ್ಕೆ ಕಸ್ತೂರಿ ರಂಗನ್ ವರದಿ ಜಾರಿಯಾಗದಂತೆ ಮಾಡಲಾಗಿದೆ. ಜೊತೆಗೆ ಶರಾವತಿ ಸಂತ್ರಸ್ಥರ ಸಮಸ್ಯೆ ಕುರಿತು ಗಮನ ಹರಿಸಲಾಗಿದ್ದು, ಈ ಸಮಸ್ಯೆಯನ್ನೂ ಬಗೆಹರಿಸಲಾಗುವುದು ಎಂದು ಹೇಳಿದರು.

ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಶಾಸಕರಾದ ಎಚ್.ಹಾಲಪ್ಪ ಹರತಾಳು, ಸಿಗಂದೂರು ಧರ್ಮದರ್ಶಿ ರವಿಕುಮಾರ್, ಉದ್ಯಮಿ ಸೈದಪ್ಪ ಗುತ್ತೇದಾರ್, ಮಲೆನಾಡು ಸೋಲ್ಜರ್ ಕೋಚಿಂಗ್ ಸೆಂಟರ್ ಸಂಸ್ಥಾಪಕ ಕಿಶೋರ್ ಬೈರಾಪುರ, ಚೇತನ್ ರಾಜ್ ಕಣ್ಣೂರ್, ಆರ್ಮಿ ಕ್ಲಬ್ ಅಧ್ಯಕ್ಷ ಪ್ರಮೋದ್, ಕಾರ್ಯದರ್ಶಿ ಸುನಿಲ್ ಪ್ರಮುಖರಾದ ಹೇಮರಾಜ್, ಸುಭಾಶ್ ಕೌತಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT