ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ತಳಿಗಳ ಬೀಜ ತ್ವರಿತ ವಿತರಣೆ: ಒಪ್ಪಂದ

Published 30 ಅಕ್ಟೋಬರ್ 2023, 15:35 IST
Last Updated 30 ಅಕ್ಟೋಬರ್ 2023, 15:35 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಾಜ್ಯ ಬೀಜ ನಿಗಮ ಹಾಗೂ ಹೈದರಾಬಾದ್‌ನ ಅಂತರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆಯ ಅಧಿಕಾರಿಗಳು (ಇಕ್ರಿಸ್ಯಾಟ್) ಹೊಸ ತಳಿಗಳ ಬೀಜಗಳನ್ನು ರಾಜ್ಯದ ರೈತರಿಗೆ ತ್ವರಿತವಾಗಿ ವಿತರಿಸುವ ಒಪ್ಪಂದಕ್ಕೆ ಸೋಮವಾರ ಸಹಿ ಹಾಕಿದರು.

ರಾಜ್ಯ ಬೀಜ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಎಚ್.ಎಸ್. ದೇವರಾಜ, ಐಸಿಆರ್‌ಐಎಸ್‌ಎಟಿ ಉಪ ಮಹಾ ನಿರ್ದೇಶಕ ಅರವಿಂದ ಕುಮಾರ್‌ ಅವರು ಕೃಷಿ ಸಚಿವ ಚಲುವರಾಯಸ್ವಾಮಿ ಸಮ್ಮುಖದಲ್ಲಿ ಒಪ್ಪಂದ ಮಾಡಿಕೊಂಡರು.

ರಾಜ್ಯ ಸರ್ಕಾರದ ಅಂಗಸಂಸ್ಥೆಯಾದ ಕರ್ನಾಟಕ ರಾಜ್ಯ ಬೀಜ ನಿಗಮವು ಪ್ರತಿ ವರ್ಷ ಸರಾಸರಿ 3.5 ಲಕ್ಷ ಕ್ವಿಂಟಲ್‌ ಬೀಜ ಸರಬರಾಜು ಮಾಡುತ್ತಿದೆ. ಅಂತರಾಷ್ಟ್ರೀಯ ಬೆಳೆ ತಳಿ ಸಂಶೋಧನಾ ಕೇಂದ್ರವಾದ ಐಸಿಆರ್‌ಐಎಸ್‌ಎಟಿ ಹೊಸ ತಂತ್ರಜ್ಞಾನದ ಮೂಲಕ ಅರೆ ಶುಷ್ಕ ವಾತಾವರಣಕ್ಕೆ ಹೊಂದಿಕೊಳ್ಳುವ ಹೊಸ ತಳಿಗಳನ್ನು ಅಭಿವೃದ್ಧಿಪಡಿಸುತ್ತಿದೆ. ಸಂಸ್ಥೆ ಅಭಿವೃದ್ಧಿಪಡಿಸಿದ ಶೇಂಗಾ, ತೊಗರಿ, ಜೋಳ, ಕಡಲೆ, ಸಜ್ಜೆ ತಳಿಗಳಿಗೆ ದೇಶದ ಎಲ್ಲೆಡೆ ಬೇಡಿಕೆ ಇದೆ. ಇನ್ನು ಮುಂದೆ ಸಂಸ್ಥೆಯ ತಳಿಗಳು ರಾಜ್ಯ ಬೀಜ ನಿಗಮಕ್ಕೆ ಲಭ್ಯವಾಗಲಿವೆ ಎಂದು ಚಲುವರಾಯಸ್ವಾಮಿ ಹೇಳಿದರು.

ಮೂರು ವರ್ಷಗಳ ಒಪ್ಪಂದದಿಂದಾಗಿ ರೈತರಿಗೆ ತೊಗರಿ, ಕಡಲೆ, ಜೋಳ, ಸಜ್ಜೆ, ಸಿರಿಧಾನ್ಯಗಳಲ್ಲಿ ಹೊಸ ಶಕ್ತಿವರ್ಧಕ ತಳಿಗಳನ್ನು ಪರಿಚಯಿಸಲು ಅನುಕೂಲವಾಗುತ್ತದೆ. ಹೊಸ ತಳಿಗಳನ್ನು ಧಾರವಾಡದ ತಳಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಹಾಗೂ ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಮೌಲ್ಯವರ್ಧನೆ ಮಾಡಲಾಗುವುದು. ವಿವಿಧ ಬೆಳೆಗಳಲ್ಲಿ ಹೊಸ ತಳಿ ಪರಿಚಯಿಸಲಾಗುವುದು. ಬರ ಮತ್ತು ರೋಗ ನಿರೋಧಕ ತಳಿಗಳನ್ನು ರಾಜ್ಯದ ರೈತರಿಗೆ ಪರಿಚಯಿಸಲಾಗುವುದು. ಆ ಮೂಲಕ ರಾಜ್ಯದ ಸರಾಸರಿ ಉತ್ಪಾದಕತೆಯಲ್ಲೂ ಹೆಚ್ಚಳವಾಗಲಿದೆ ಎಂದರು. 

ಕೃಷಿ ಇಲಾಖೆ ಕಾರ್ಯದರ್ಶಿ ವಿ.ಅನ್ಬುಕುಮಾರ್, ಕೃಷಿ ಇಲಾಖೆ ಆಯುಕ್ತ ವೈ.ಎಸ್.ಪಾಟೀಲ, ಕೃಷಿ‌ ನಿರ್ದೇಶಕ ಜಿ.ಟಿ.ಪುತ್ರ, ವಿಆರ್‌ಡಿಸಿ ಮುಖಸ್ಥ ವಿ.ಎಸ್.ಸಂಗಮ, ಮುಖ್ಯ ಸಂಶೋಧಕರಾದ ಪ್ರಕಾಶ ಗಂಗಶೆಟ್ಟಿ, ಅಶೋಕ ಕುಮಾರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT