ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ್ಣು ಕೃಷಿ ಹರಿಕಾರ ಡಾ. ಎಲ್‌.ಸಿ ಸೋನ್ಸ್ ನಿಧನ

Last Updated 5 ಏಪ್ರಿಲ್ 2023, 5:51 IST
ಅಕ್ಷರ ಗಾತ್ರ

ಮಂಗಳೂರು: ಮೂಡುಬಿದಿರೆ ಸಮೀಪ ಬೆಳುವಾಯಿಯ ಸೋನ್ಸ್ ಫಾರ್ಮ್ ನಲ್ಲಿ ನೀರವ ಮೌನ. ತಂಗಾಳಿ ಬೀಸುತ್ತಿದ್ದ ಗಿಡ–ಮರಗಳೂ ಸ್ಥಬ್ಧಗೊಂಡ ಭಾವ.

ಬಗೆ ಬಗೆಯ ಹಣ್ಣು ಹಂಪಲುಗಳ ಗಿಡ–ಮರಗಳಿಗೆ ಆಶ್ರಯದಾತರಾಗಿದ್ದ ಡಾ.ಎಲ್.ಸಿ.ಸೋನ್ಸ್ ಬುಧವಾರ ಕೊನೆಯುಸಿರೆಳೆದರು.

ಅವರಿಗೆ ತಮ್ಮ ಪತ್ನಿ, ಇಬ್ಬರು ಪುತ್ರರು, ಪುತ್ರಿ , ಸಹೋದರ ಐ.ವಿ. ಸೋನ್ಸ್ ಇದ್ದಾರೆ. ಡಾ ಸೋನ್ಸ್ ಅವರು 1966ರಲ್ಲಿ ಮೊಂಟಾನಾ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದವರು. ಡಾ ಸೋನ್ಸ್ ಅವರ ತಂದೆ, ಡಾ ಆಲ್ಫ್ರೆಡ್ ಜಿ. ಸೋನ್ಸ್ ಅವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರವರ್ತಕ ತೋಟಗಾರಿಕಾ ತಜ್ಞರು.

ರಂಬುಟಾನ್, ಡುರಿಯನ್, ಲ್ಯಾಂಗ್‌ಸಾಟ್, ಎಗ್ ಫ್ರೂಟ್ (ದಕ್ಷಿಣ ಅಮೆರಿಕ), ಡೀಸೆಲ್ ಟ್ರೀ (ಅಮೆಜಾನ್ ಕಾಡುಗಳು) ಸೇರಿದಂತೆ ಅನೇಕ ವಿದೇಶಿ ಹಣ್ಣುಗಳನ್ನು ಸುಮಾರು ನಾಲ್ಕೈದು ದಶಕಗಳ ಹಿಂದೆ ಈ ಪ್ರದೇಶಕ್ಕೆ ಪರಿಚಯಿಸಿದ ಕೀರ್ತಿ ಎಲ್ ಸಿ ಸೋನ್ಸ್ ಅವರದು. ಸೋನ್ಸ್ ಫಾರ್ಮ್ ಅನಾನಸ್, ಮಾವು ಮತ್ತು ವಿವಿಧ ಬಿದಿರುಗಳಿಗೆ ಹೆಸರುವಾಸಿಯಾಗಿದೆ.

ಅವರು ಅಮೆರಿಕನ್ ಸೊಸೈಟಿ ಆಫ್ ಡೌಸರ್ಸ್ ಮತ್ತು ಬ್ರಿಟಿಷ್ ಸೊಸೈಟಿ ಆಫ್ ಡೌಸರ್ಸ್ ಸದಸ್ಯರಾಗಿದ್ದರು.

ಮೂಡುಬಿದಿರೆಯ ಕಡಲಕೆರೆ ನಿಸರ್ಗಧಾಮದ ಸಲಹೆಗಾರರಾಗಿ, ಮಹಾವೀರ ವಿದ್ಯಾವರ್ಧಕ ಸಂಘ, ಮಹಾವೀರ ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾಗಿ, ರೋಟರಿ ಎಜುಕೇಷನ್ ಸೊಸೈಟಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಕೃಷಿ ಬಗ್ಗೆ ಅರಿವು ಮೂಡಿಸಲು ಆಲ್ಫ್ರೆಡ್ ಸೋನ್ಸ್ ಫೌಂಡೇಷನ್ ಆರಂಭಿಸಿದ್ದರು.

ಡಾ ಸೋನ್ಸ್ ಅವರಿಗೆ ಕರ್ನಾಟಕ ಸರ್ಕಾರವು ಅತ್ಯುತ್ತಮ ತೋಟಗಾರಿಕಾ ತಜ್ಞ ಪ್ರಶಸ್ತಿ ನೀಡಿ ಗೌರವಿಸಿದೆ. ಅವರು ಅಮೆರಿಕದ ಮೊಂಟಾನಾ ವಿಶ್ವವಿದ್ಯಾಲಯ ನೀಡುವ 2000 ವರ್ಷದ ಅಲುಮ್ನಸ್ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಹೊರಿಯಡ್ಕ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದಿಂದ ಉತ್ತಮ ರೈತ ಪ್ರಶಸ್ತಿ ಮತ್ತಿತರ ಪ್ರಶಸ್ತಿಗಳು ಅವರಿಗೆ ಸಂದಿವೆ.

ಸೋನ್ಸ್ ಅವರು ಕೃಷಿ ಮ್ಯೂಸಿಯಂವೊಂದನ್ನು ಕಟ್ಟಿ, ತಮ್ಮ ತಂದೆಯ ಕಾಲದಿಂದ ಬಳಕೆಯಲ್ಲಿದ್ದ ಕೃಷಿ ಉಪಕರಣಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಅನೇಕರು ಅದಕ್ಕೆ ಮೀನು ಹಿಡಿಯುವ ಉಪಕರಣ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ನೀಡಿದ್ದರು. ಆದರೆ ಇದು ಅಷ್ಟಾಗಿ ಸಾರ್ವಜನಿಕವಾಗಿ ತೆರೆದಿಟ್ಟಿರಲಿಲ್ಲ. ಆದರೆ ಅದನ್ನು ವ್ಯವಸ್ಥಿತವಾಗಿ ಮಾಡಬೇಕು ಎಂಬ ಕನಸು ಅವರಿಗಿತ್ತು ಎನ್ನುತ್ತಾರೆ ಅವರ ಆಪ್ತರು.

ಮೂಡುಬಿದಿರೆ ಸಮೀಪ ಮದಕದ ಕಡಲಕೆರೆ ಜೀರ್ಣೋದ್ಧಾರಕ್ಕೆ ಚಾಲನೆ ನೀಡಿ, ಜನರಿಗೆ ನೀರಿನ ಬಗ್ಗೆ ಪ್ರೀತಿ ಹುಟ್ಟುವ ಹಾಗೆ ಮಾಡಿದವರು. ಈ ಒಂದು ಸಾಮೂಹಿಕ ಕಾರ್ಯಕ್ಕೆ ಚಾಲನೆ ಕೊಟ್ಟವರು ಅವರು. ಕಡಲಕೆರೆ ಇಂದು ಅವರು ಪ್ರೀತಿಯ ಕುರುಹಾಗಿ, ಸುಂದರವಾಗಿ ಪುನರುಜ್ಜೀವನಗೊಂಡಿದೆ ಎನ್ನುತ್ತಾರೆ ಜಲತಜ್ಞ ಶ್ರೀಪಡ್ರೆ ಅವರು.

‘ಹಿಂದೆಯೇ ಅವರು ನೀರಿಗಾಗಿ ಕಷ್ಟಪಟ್ಟಿದ್ದರು. ಭೂಗರ್ಭ ಶಾಸ್ತ್ರಜ್ಞರನ್ನು ಕರೆಸಿ ವಾಟರ್ ಡಿವೈನಿಂಗ್ ಮಾಡಿ ಫಲ ಕಾಣದೆ, ಅವರೇ ವಾಟರ್ ಡಿವೈನಿಂಗ್ ಅನ್ನು ಕಲಿತರು. ತಂತಿ ಹಿಡಿದು ಮಾಡುವ ಈ ಊಹಾಶೋಧದಲ್ಲಿ ಅವರು ಪರಿಣಿತಿ ಸಾಧಿಸಿದರು. ಈ ಭಾಗದ ಅನೇಕರಿಗೆ ನೀರಿನ ಸೆಲೆ ಗುರುತಿಸಿಕೊಟ್ಟಿದ್ದಾರೆ. ನಾವಾದರೂ ಒಂದು ಖಾಸಗಿ ಕಾಡು ಉಳಿಸಿಕೊಳ್ಳಬೇಕು ಎನ್ನುತ್ತಿದ್ದ ಅವರು ಜಮೀನಿನ ಒಂದು ಭಾಗದಲ್ಲಿ ಕಾಡನ್ನು ಉಳಿಸಿಕೊಂಡಿದ್ದರು. ಊಹಾಶೋಧದ ಫಲವಾಗಿ ಅವರ ಜಮೀನಿನಲ್ಲಿ ನೀರಿನ ಸುಧಾರಣೆ ಅಗಿತ್ತು. ಊಹಾಶೋಧದ ಬಗ್ಗೆ ತರಬೇತಿಗಳನ್ನು ಮಾಡಿದ್ದಾರೆ. ನಾನೂ ಕೂಡ ಭಾಗವಹಿಸಿದ್ದೆ’ ಎಂದು ಶ್ರೀಪಡ್ರೆ ನೆನಪಿಸಿಕೊಂಡರು.

ಕಾಡು– ನೀರಿನ ಸಂಬಂಧದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ಜಿಲ್ಲೆಯಲ್ಲಿ ಜಲಮರುಪೂರಣದ ಆರಂಭ ರೂವಾರಿ ಅವರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಣ್ಣಿನ ಹುಚ್ಚು ಹಬ್ಬಿದ್ದರೆ ಅದರ ದೊಡ್ಡ ಪಾಲು ಸೋನ್ಸ್ ಅವರದು. ಹಣ್ಣು ಕೃಷಿಯಲ್ಲಿ ಆಸಕ್ತರಾಗಿರುವ ಈಗಿನ ಉತ್ಸಾಹಿಗಳ ಎಲ್ಲರ ಮೇಲೆ ಸೋನ್ಸರ ಛಾಪು ಗಾಢವಾಗಿದೆ. ಅವರು ಹಣ್ಣು ಕೃಷಿಯ ಹರಿಕಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT