ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಗಣತಿ ವರದಿಗೆ ’ಅಹಿಂದ‘ ಪಟ್ಟು

ಡಿಕೆಶಿ ರಾಜೀನಾಮೆಗೆ ಹಿಂದುಳಿದ ಜಾತಿಗಳ ಒಕ್ಕೂಟ ಆಗ್ರಹ
Published 25 ನವೆಂಬರ್ 2023, 15:51 IST
Last Updated 25 ನವೆಂಬರ್ 2023, 15:51 IST
ಅಕ್ಷರ ಗಾತ್ರ

ಬೆಂಗಳೂರು: ಎಚ್‌. ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ (ಜಾತಿ ಜನಗಣತಿ) ವರದಿಯನ್ನು ಸ್ವೀಕರಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಮತ್ತು ಹಿಂದುಳಿದ ಜಾತಿಗಳ ಒಕ್ಕೂಟ ಒಕ್ಕೊರಲಿನ ನಿರ್ಣಯ ಕೈಗೊಂಡಿದೆ.

ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ. ರಾಮಚಂದ್ರಪ್ಪ ನೇತೃತ್ವದಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ವರ್ಗ (ಎಸ್‌ಟಿ), ಹಿಂದುಳಿದ, ಅಲ್ಪಸಂಖ್ಯಾತರ ಸಮುದಾಯದ ಸಂಘಟನೆಗಳ ಮುಖಂಡರ ಸಭೆ ಶಾಸಕರ ಭವನದಲ್ಲಿ ಶನಿವಾರ ನಡೆಯಿತು.

ದಾವಣಗೆರೆ ಅಥವಾ ಚಿತ್ರದುರ್ಗದಲ್ಲಿ ಡಿ. 30ರಂದು ಸುಮಾರು 10 ಲಕ್ಷ ಜನರನ್ನು ಸೇರಿಸಿ ‘ಅಹಿಂದ’ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ಸಮಾವೇಶ ಹಮ್ಮಿಕೊಂಡು, ಶಕ್ತಿ ಪ್ರದರ್ಶನ ಮಾಡಲು ಕೂಡಾ ತೀರ್ಮಾನಿಸಲಾಗಿದೆ.

ಸಭೆಯಲ್ಲಿ ಮಾತನಾಡಿದ ಕೆ. ರಾಮಚಂದ್ರಪ್ಪ, ‘ಪ್ರಬಲ ಜಾತಿಗಳು ನೂರಾರು ವರ್ಷದಿಂದ ನಮ್ಮ ಮೇಲೆ ಸವಾರಿ ಮಾಡುತ್ತಾ ಬರುತ್ತಿವೆ. ಅಧಿಕಾರದಲ್ಲಿ ಇರುವವರಿಗೆ ಈಗಲೂ ಸಂವಿಧಾನಬದ್ಧ ಸವಲತ್ತುಗಳನ್ನು ಕೊಡಲು ಸಾಧ್ಯವಾಗುತ್ತಿಲ್ಲ. ಪ್ರಬಲ ಸಮುದಾಯದವರಿಗೆ ನಾವು (ಹಿಂದುಳಿದವರು) ಸರಿಸಮಾನವಾಗಿ ಬಂದರೆ ನಮ್ಮ ಸೇವೆ ಮಾಡಲು ಯಾರು ಇರುವುದಿಲ್ಲ ಎಂಬ ಆತಂಕ ಎದುರಾಗಿದೆ. ನಮ್ಮಲ್ಲಿ ಒಗ್ಗಟ್ಟು ಇಲ್ಲ.‌ ಪ್ರಬಲ‌ ಜಾತಿಯವರು ನಮ್ಮನ್ನು ತುಳಿಯುತ್ತಿದ್ದಾರೆ. ಅದನ್ನು ತಡೆಯಬೇಕಾದರೆ ಜಾಗೃತಿ ಮೂಡಿಸಬೇಕು’ ಎಂದರು.

‘ಜಾತಿ ಜನಗಣತಿಯ ಮೂಲ‌ ಪ್ರತಿ ಕಳೆದು ಹೋಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೇಳುತ್ತಿದ್ದಾರೆ. ಕಳವು ಆಗಿದ್ದರೆ ಅವರ ಅವಧಿಯಲ್ಲೇ ಕಳವು ಆಗಿರಬೇಕು. ಮಾಜಿ ಮುಖ್ಯಮಂತ್ರಿ ವಿರುದ್ಧ ಇತ್ತೀಚೆಗೆ ವಿದ್ಯುತ್ ಕಳವು ಆರೋಪ ಬಂದಿತ್ತು. ಹೀಗಾಗಿ ಅವರೇ ಜಾತಿ ಜನಗಣತಿ ವರದಿಯ ಮೂಲ ಪ್ರತಿಯನ್ನೂ ಕಳವು ಮಾಡಿರಬೇಕು’ ಎಂದರು.

‘ವರದಿ ಸ್ವೀಕರಿಸುವುದಕ್ಕೆ ಉಪ ಮುಖ್ಯಮಂತ್ರಿ ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಅವರು ರಾಜ್ಯದ ಉಪಮುಖ್ಯಮಂತ್ರಿಯೇ ಅಥವಾ ಒಂದು ಸಮುದಾಯದ ಉಪಮುಖ್ಯಮಂತ್ರಿಯೇ? ಒಬ್ಬ ಸಚಿವರೂ ಕೂಡ ವರದಿ ವಿರೋಧಿಸಿ ಸಹಿ ಹಾಕಿದ್ದಾರೆ. ಸಂವಿಧಾನದ ಮೇಲೆ ಪ್ರಮಾಣ ಮಾಡಿದವರು ಸ್ವಜನ ಪಕ್ಷಪಾತ ಮಾಡಬಾರದು. ಅವರಿಗೆ (ಡಿ.ಕೆ. ಶಿವಕುಮಾರ್‌) ಉಪಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಲು ಯಾವ ನೈತಿಕತೆ ಇದೆ. ಅವರು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘ಮುಸ್ಲಿಮರಿಗೆ ವೀರಪ್ಪ ಮೊಯಿಲಿಯವರು ಶೇ 4 ಮೀಸಲಾತಿ ನೀಡಿದ್ದಾರೆ. ದೇವೇಗೌಡರು ಮುಸ್ಲಿಂ ಮೀಸಲಾತಿ ನೀಡಿಲ್ಲ, ಅವರು ಅಧಿಸೂಚನೆ ಮಾತ್ರ ಹೊರಡಿಸಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಶೇ 7ರಷ್ಟು ಮೀಸಲಾತಿ ನೀಡಬೇಕು’ ಎಂದು ಮುಸ್ಲಿಂ ಮುಖಂಡ ಮೆಹಬೂಬ್‌ ಪಾಷಾ ಆಗ್ರಹಿಸಿದರು.

ಸಭೆಯಲ್ಲಿ ಮಾತನಾಡಿದ ‘ಅಹಿಂದ’‌ ನಾಯಕರು, ‘ನಮಗೆ ಪ್ರಥಮ ಶತ್ರುಗಳು ನಮ್ಮ ಪಕ್ಷದವರೇ. ನಮ್ಮಿಂದ ಗೆದ್ದವರೇ ಜಾತಿ ಜನಗಣತಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಯಾರಿಂದ ಗೆದ್ದಿದ್ದೀರಿ ಎಂಬುದನ್ನು ಅವರಿಗೆ ಮನವರಿಕೆ ಮಾಡಬೇಕು. ಈ ಸಂಬಂಧ ನಿರಂತರ ಹೋರಾಟ ಮಾಡಬೇಕು’ ಎಂದು ಆಗ್ರಹಿಸಿದರು.

‘ಮೊದಲೇ ವಿರೋಧಿಸುವುದು ಸಮಂಜಸವಲ್ಲ’

‘ಎಲ್ಲರೂ ನೋಡಿದ ಬಳಿಕ ಸರಿ ಇಲ್ಲ ಎಂದಾದರೆ ಜಾತಿ ಜನಗಣತಿ ವರದಿ ತಿರಸ್ಕಾರ ಆಗುತ್ತದೆ. ವರದಿಯಲ್ಲಿ ಏನಿದೆ ಎಂದು ನೋಡುವ ಮೊದಲೇ ವಿರೋಧಿಸುವುದು ಸಮಂಜಸವಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಗೊಳಿ ಹೇಳಿದರು. ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಜಾತಿ, ಧರ್ಮ, ಭಾಷೆ ವಿಷಯ ಬಂದಾಗ ಹಲವು ವರದಿಗಳು ಮೂಲೆ ಸೇರಿವೆ.  ಸುಮಾರು 40 ವರದಿಗಳು ಹಾಗೇ ಇವೆ. ಕಾಂತರಾಜ ಅವರ ವರದಿ 41ನೇಯದ್ದು ಆಗಿರಬಹುದು. ದೇವರಾಜ ಅರಸು ಕಾಲದಿಂದಲೂ ಕೆಲವು ವರದಿಗಳು ಹಾಗೇ ಇವೆ’ ಎಂದರು.

ವರದಿಗೆ ವೀರಶೈವ–ಲಿಂಗಾಯತರ ವಿರೋಧ

‘ಕಾಂತರಾಜ ವರದಿ ವಿರುದ್ಧ ಒಕ್ಕಲಿಗರಂತೆ ನಾವು ಕೂಡಾ ಸಹಿ ಮಾಡಿ, ಮುಖ್ಯಮಂತ್ರಿಗೆ ಮನವಿ ಸಲ್ಲಿಸುತ್ತೇವೆ.  ಬಿಜೆಪಿ, ಜೆಡಿಎಸ್​​​ನವರೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವರದಿ ಕುರಿತು ಈಗಾಗಲೇ ಮೌಖಿಕವಾಗಿ ಮುಖ್ಯಮಂತ್ರಿ ಬಳಿ ಚರ್ಚೆ ನಡೆಸಿದ್ದೇವೆ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಜಾತಿ ಜನಗಣತಿ ವರದಿಯಲ್ಲಿ ಏನಿದೆ ಎನ್ನುವುದೆಲ್ಲ ಸೋರಿಕೆ ಆಗಿದೆ. ಹೀಗಾಗಿ, ನಾವು ವಿರೋಧ ಮಾಡುತ್ತಿದ್ದೇವೆ. ಅದರಲ್ಲಿ ಲಿಂಗಾಯತ ವೀರಶೈವ ಎಂದು ಬರೆದುಕೊಂಡೇ ಇಲ್ಲ. ಅನೇಕ ಲೋಪದೋಷಗಳಿವೆ. ಹೀಗಾಗಿ, ಈ ಸಮೀಕ್ಷಾ ವರದಿಗೆ ನಾವೂ ಸೇರಿದಂತೆ ಅನೇಕರ ವಿರೋಧವಿದೆ’ ಎಂದರು.

‘ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಬೇಕು. ಎಲ್ಲೊ ಕುಳಿತು ಸಮೀಕ್ಷೆ ಮಾಡುವುದಲ್ಲ. ಪ್ರತ್ಯೇಕ ಲಿಂಗಾಯತ ಧರ್ಮ ಎಂದು ಹೋದವರೆಲ್ಲ ಸೋತರು. ಲಿಂಗಾಯತ ಎಂದು ಹೋದವರೆಲ್ಲ ನೆಲ ಕಚ್ಚಿದರು. ಮೂಲ ವರದಿ ಕೊಟ್ಟಿದ್ದೇವೆಂದು ಆಯೋಗದ ಹಿಂದಿನ ಅಧ್ಯಕ್ಷ ಎಚ್‌. ಕಾಂತರಾಜ ಹೇಳುತ್ತಿದ್ದಾರೆ. ಆದರೆ, ಆ ವರದಿ ನಾಪತ್ತೆಯಾಗಿದೆ’ ಎಂದರು.

‘ಲೋಕಸಭಾ ಚುನಾವಣೆಗೆ ಜಾತಿ ಜನಗಣತಿ ಹಿನ್ನಡೆ ಆಗಬಹುದೇ’ ಎಂಬ ಪ್ರಶ್ನೆಗೆ ‘ಈ ಹಿಂದೆ ಪ್ರತ್ಯೇಕ ಧರ್ಮ ವಿಚಾರದಲ್ಲಿ ಆದಂತೆಯೇ ಶೇ 100ರಷ್ಟು ತೊಂದರೆ ಆಗಲಿದೆ’ ಎಂದು ಅಭಿಪ್ರಾಯಪಟ್ಟರು.

ಬಸವರಾಜ ರಾಯರಡ್ಡಿ ತಿರುಗೇಟು: ಜಾತಿ‌ ವಿಚಾರ ಮಾತನಾಡಿದ್ದು ತಪ್ಪು ಎಂದಿದ್ದ ಬಸವರಾಜ ರಾಯರಡ್ಡಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಶಾಮನೂರು ಶಿವಶಂಕರಪ್ಪ, ‍‘ಅವನು ಹಿಂದೆಯೂ ಹೀಗೆ ಏನೇನೊ ಮಾತನಾಡಿದ್ದ. ಸಚಿವ ಸಂಪುಟದಿಂದ ಹೊರಗೆ ಇರುವುದಕ್ಕೆ ಏನೇನೊ ಮಾತನಾಡುತ್ತಿದ್ದಾನೆ. ಬರೀ ಲಿಂಗಾಯತ ಎಂದು ಹೋದವರೆಲ್ಲ ನೆಲ ಕಚ್ಚಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT