ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಜಿತ್‌ ಭಾರ್ತಿ ವಿರುದ್ಧದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ ತಡೆ

Published 24 ಜೂನ್ 2024, 20:41 IST
Last Updated 24 ಜೂನ್ 2024, 20:41 IST
ಅಕ್ಷರ ಗಾತ್ರ

ಬೆಂಗಳೂರು: ‘ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ತಮ್ಮ ಭಾಷಣಗಳಲ್ಲಿ ರಾಮ ಮಂದಿರದ ಬದಲಿಗೆ ಬಾಬರಿ ಮಸೀದಿಯನ್ನು ಮರಳಿ ತರಲು ಉದ್ದೇಶಿಸಿದ್ದಾರೆ ಎಂದು ಅಜಿತ್‌ ಭಾರ್ತಿ ತಮ್ಮ ಎಕ್ಸ್‌ ಖಾತೆಯಲ್ಲಿ ಸುಳ್ಳು ಮಾಹಿತಿ ಪ್ರಚಾರ ಮಾಡಿದ್ದಾರೆ’ ಎಂಬ ಆರೋಪದಡಿ ಯೂಟ್ಯೂಬರ್‌ ಅಜಿತ್‌ ಭಾರ್ತಿ ವಿರುದ್ಧ ದಾಖಲಾಗಿದ್ದ ವಿಚಾರಣೆಗೆ ಹೈಕೋರ್ಟ್‌ ತಡೆ ನೀಡಿದೆ.

‘ತಮ್ಮ ವಿರುದ್ಧ ನಗರದ ಎಸಿಎಂಎಂ ಮೊದಲನೇ ನ್ಯಾಯಾಲಯದಲ್ಲಿನ ನ್ಯಾಯಿಕ ಪ್ರಕ್ರಿಯೆ ಹಾಗೂ ಎಫ್‌ಐಆರ್‌ ರದ್ದುಗೊಳಿಸಬೇಕು’ ಎಂದು ಕೋರಿ ಬಿಹಾರದ ಬೆಗುಸರಾಯ್‌ ನಿವಾಸಿಯಾದ ಅಜಿತ್‌ ಭಾರ್ತಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕದಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್‌, ‘ಅಜಿತ್‌ ಭಾರ್ತಿ ಸಂವಿಧಾನ ಕೊಡಮಾಡಿರುವ ತಮ್ಮ ಮೂಲಭೂತ ಹಕ್ಕಿನ ಅನುಸಾರವೇ ನಡೆದುಕೊಂಡಿದ್ದಾರೆ. ಅವರ ವಿವರಣೆಯನ್ನು ಕಾನೂನು ಬಾಹಿರ ಎಂದು ಆಕ್ಷೇಪಿಸಿರುವ ದೂರುದಾರರ ನಡೆಯು, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿಘ್ನ ಒಡ್ಡುವಂತಿದೆ. ಆದ್ದರಿಂದ, ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಬೇಕು’ ಎಂದು ಕೋರಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಟರ್‌ ತಮ್ಮ ಆಕ್ಷೇಪಣೆ ಸಲ್ಲಿಸಲಿ. ಅಲ್ಲಿಯವರೆಗೂ ಅರ್ಜಿದಾರರ ವಿರುದ್ಧ ಯಾವುದೇ ಹೆಚ್ಚಿನ ತನಿಖೆಗೆ ಅನುಮತಿಸಲಾಗುವುದಿಲ್ಲ’ ಎಂದು ಹೇಳಿ ನ್ಯಾಯಪೀಠ  ವಿಚಾರಣೆಯನ್ನು ಜುಲೈ 19ಕ್ಕೆ ಮುಂದೂಡಿದೆ.

ಪ್ರಕರಣವೇನು?: ‘ಅಜಿತ್‌ ಭಾರ್ತಿ ಅವರು ಇದೇ 13ರಂದು ತಮ್ಮ ಎಕ್ಸ್‌ ಖಾತೆಯಲ್ಲಿ ವಿಡಿಯೊ ಒಂದನ್ನು ಪೋಸ್ಟ್‌ ಮಾಡಿದ್ದರು. ಈ ವಿಡಿಯೊದಲ್ಲಿ ರಾಹುಲ್ ಗಾಂಧಿ ರಾಮ ಮಂದಿರದ ಬದಲಿಗೆ ಬಾಬರಿ ಮಸೀದಿಯನ್ನು ಮರಳಿ ತರಲು ಉದ್ದೇಶಿಸಿದ್ದಾರೆ ಎಂಬ ವಿವರಣೆಯನ್ನು ಹರಿಬಿಟ್ಟಿದ್ದರು. ಇದು ಸುಳ್ಳು ಮಾಹಿತಿ. ಈ ಮೂಲಕ ಅವರು ವಿವಿಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಉತ್ತೇಜಿಸಿದ್ದಾರೆ’ ಎಂದು ಆರೋಪಿಸಿ ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ಬಿ.ಕೆ.ಬೋಪಣ್ಣ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಎಫ್‌ಐಆರ್ ದಾಖಲಿಸಿದ್ದ ಪೊಲೀಸರು ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 153-ಎ ಮತ್ತು 502 (2)ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT