ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಿತ್‌ ಶಾ ದಾರಿ ಸುಗಮ: ದಟ್ಟಣೆಯಲ್ಲಿ ಸಿಲುಕಿದ ಆಂಬುಲೆನ್ಸ್, ನಿಂತು ಹೈರಾಣಾದ ಜನ

Last Updated 18 ಜನವರಿ 2020, 11:31 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ನಗರದಲ್ಲಿ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ದಾರಿ ಸುಗಮಗೊಳಿಸುವುದಕ್ಕೆ ಬಳ್ಳಾರಿ ರಸ್ತೆ ಹಾಗೂ ಸುತ್ತಮುತ್ತಲ ರಸ್ತೆಗಳಲ್ಲಿ ಖಾಸಗಿ ವಾಹನಗಳ ಸಂಚಾರ ಬಂದ್ ಮಾಡಲಾಗಿದೆ. ಇದರಿಂದ ವಾಹನಗಳು ರಸ್ತೆಯಲ್ಲೇ ಸಾಲುಗಟ್ಟಿದ್ದು, ಜನರೆಲ್ಲರೂ ಕಾದು ಕಾದು ಹೈರಾಣಾಗುತ್ತಿದ್ದಾರೆ.

ನಗರದ ಅರಮನೆ ಮೈದಾನದಲ್ಲಿನ ಕಾರ್ಯಕ್ರಮದ ನಂತರ ಹುಬ್ಬಳ್ಳಿಯಲ್ಲಿನ ಸಮಾವೇಶದಲ್ಲಿ ಪಾಲ್ಗೊಳ್ಳಬೇಕೆಂದು ಅಮಿತ್‌ ಶಾ ಅವರ ಕಾರ್ಯಕ್ರಮಗಳ ಪಟ್ಟಿ ನಿಗದಿಯಾಗಿತ್ತು. ಆದರೆ, ಅವರಕಾರ್ಯಕ್ರಮದಲ್ಲಿ ದಿಢೀರ್‌ ಬದಲಾವಣೆಯಾಗಿ, ನಗರದಲ್ಲಿವಿವಿಧ ಕಡೆಗಳಿಗೆ ಅವರು ತೆರಳಿದರು.ಇದರಿಂದ ನಗರದ ಬಹುತೇಕ ಕಡೆ ಜನ ವಿವಿಐಪಿ ಸಂಚಾರದ ಎಫೆಕ್ಟ್‌ ಅನುಭವಿಸಿದರು.

ಜೀರೊ ಟ್ರಾಫಿಕ್‌ ಪರಿಣಾಮ ಅಮಿತ್ ಶಾ ಅವರಿದ್ದ ವಾಹನ ಹಾಗೂ ಬೆಂಗಾವಲು ವಾಹನಗಳು ರಸ್ತೆ ದಾಟಿ ಹೋಗುವವರೆಗೂ ಖಾಸಗಿ ವಾಹನಗಳ ಓಡಾಟ ಸ್ಥಗಿತಗೊಂಡಿತ್ತು. ಇದರಿಂದ ಆ ಭಾಗಗಳಲ್ಲಿ ವಾಹನಗಳು ಗಂಟೆಗಟ್ಟಲೇ ಸಾಲುಗಟ್ಟಿ ನಿಲ್ಲಬೇಕಾಯಿತು. ಶನಿವಾರ ಮಧ್ಯಾಹ್ನವೇ ಶಾಲೆ ಮುಗಿಸಿ ಮನೆಗೆ ಹೊರಟಿದ್ದ ಮಕ್ಕಳು ಹಾಗೂ ಶಿಕ್ಷಕರು ರಸ್ತೆಯಲ್ಲೇ ಕಾಯುವಂತಾಯಿತು.ಬಳ್ಳಾರಿ ರಸ್ತೆಯಲ್ಲಿ ರೋಗಿಯನ್ನು ಸಾಗಿಸುತ್ತಿದ್ದ ಆಂಬುಲೆನ್ಸ್‌ ಸಹ ದಟ್ಟಣೆಯಲ್ಲಿ ಸಿಲುಕಿಕೊಂಡಿತ್ತು.

1 ಗಂಟೆಯಿಂದ 100 ಮೀಟರ್‌ ದಾಟಲು ಆಗುತ್ತಿಲ್ಲ: ರಸ್ತೆಯಲ್ಲೇ ಕಾದು ಸುಸ್ತಾದ ಹಲವರು, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

‘ಅಮಿತ್‌ ಶಾ ಅವರ ಬೆಂಗಳೂರು ಭೇಟಿಗೆ ಧನ್ಯವಾದಗಳು. ಎಚ್‌ಎಎಲ್‌ನಿಂದ ಎಂ.ಜಿ ರಸ್ತೆಗೆ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಬಂದ್‌ ಮಾಡಲಾಗಿದೆ. 15 ನಿಮಿಷದ ಸಂಚಾರ ನಿಮ್ಮಿಂದ 45 ನಿಮಿಷ ತೆಗೆದುಕೊಂಡಿತು. ಬೆಳಿಗ್ಗೆ 11 ರಿಂದ ಸಂಜೆ 4ರವರೆಗೆ ದಟ್ಟಣೆ ಕೊಂಚವೂ ಕಡಿಮೆಯಾಗಿಲ್ಲ. ನಾನು ಬರುವ ದಾರಿಯಲ್ಲಿ ಸುಮಾರು 500 ಮಂದಿ ಪೊಲೀಸರು ಇದ್ದರು. ಇನ್ನು ನಿಮ್ಮ ಸಮಯವೂ ಅಷ್ಟು ಅಮೂಲ್ಯವಾದ್ದದ್ದಲ್ಲ’ಎಂದು ಧೀರಜ್‌ ಗೌಡ ಎನ್ನುವವರು ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಿಐಪಿ ಸಂಚಾರದಿಂದ ಉತ್ತರ ಬೆಂಗಳೂರು ಭಾಗದಲ್ಲಿ ಭಾರಿ ಟ್ರಾಫಿಕ್‌ ಸಮಸ್ಯೆ ಉಂಟಾಗಿದೆ. ಅಮಿತ್‌ ಶಾ ಅವರೇ ನಿಮ್ಮ ಸುರಕ್ಷತೆ ಬಗ್ಗೆ ನಮಗೂ ಕಾಳಜಿ ಇದೆ. ಆದರೆ, ದಯವಿಟ್ಟು ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಿ. ಅಲ್ಲದೆ, ಬೆಂಗಳೂರು ಟ್ರಾಫಿಕ್‌ ಪೊಲೀಸರು ಈ ಬಗ್ಗೆ ಪೂರ್ವ ಮಾಹಿತಿಯನ್ನೂ ನೀಡಿಲ್ಲ. ಇದಕ್ಕೆ ಏನಾದರೂ ಪರ್ಯಾಯ ಆಗಲೇಬೇಕು ಎಂದು ದೀಪಿಕಾ ಟ್ವೀಟ್‌ನಲ್ಲಿ ಮನವಿ ಮಾಡಿದ್ದಾರೆ.

ರಾಜ್ ಭವನ ರಸ್ತೆಯಲ್ಲಿ 45 ನಿಮಿಷಗಳಿಂದಒಂದು ಇಂಚು ಮುಂದಕ್ಕೆ ಹೋಗಲು ಆಗದಂತೆ ನಿಂತಿದ್ದೇನೆ. ಎಲ್ಲಿದ್ದೀರಿ ಮುಖ್ಯಮಂತ್ರಿ ಅವರೇ? ಸಂವೇದನ ರಹಿತಮತ್ತು ನಿಷ್ಪ್ರಯೋಜಕ ಸಂಚಾರ ನಿರ್ವಹಣೆ ಇದಾಗಿದೆ ಎಂದು ಜೇಮ್ಸ್‌ ಟ್ವೀಟ್‌ ಮಾಡಿದ್ದಾರೆ.

‘ಹೆಬ್ಬಾಳದಿಂದ ಅರಮನೆ ರಸ್ತೆಯವರೆಗೂ ಸಿಕ್ಕಾಪಟ್ಟೆ ವಾಹನಗಳ ದಟ್ಟಣೆ ಇದೆ. 1 ಗಂಟೆಯಿಂದ ನಿಂತಲೇ ನಿಂತಿದ್ದು, 100 ಮೀಟರ್ ಸಹ ಮುಂದಕ್ಕೆ ಹೋಗಲು ಆಗುತ್ತಿಲ್ಲ. ಆಂಬುಲೆನ್ಸ್‌ ಸಹ ದಟ್ಟಣೆಯಲ್ಲಿ ಸಿಲುಕಿದೆ’ ಎಂದು ಖಾಸಗಿ ಕಂಪನಿ ಉದ್ಯೋಗಿ ಡಿಸೋಜಾ ಟ್ವೀಟ್ ಮಾಡಿದ್ದಾರೆ.

ವಾಹನ ದಟ್ಟಣೆ: ವಿಮಾನದ ಸಮಯ ಬದಲು

ಅಮಿತ್‌ ಶಾ ಭೇಟಿಯಿಂದ ಬಳ್ಳಾರಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿದೆ. ಇದರಿಂದ ಅನೇಕರಿಗೆ ನಿಗದಿತ ಸಮಯದಲ್ಲಿ ವಿಮಾನ ನಿಲ್ದಾಣಕ್ಕೆ ತೆರಳಲು ಸಾಧ್ಯವಾಗಿಲ್ಲ. ಪ್ರಯಾಣಿಕರ ಅನುಕೂಲಕ್ಕಾಗಿ 12.55ರ ಇಂಡಿಗೊ6ಇ ವಿಮಾನವನ್ನು 3.25ಕ್ಕೆ ಸಮಯ ಬದಲಿಸಲಾಗಿದೆ ಎಂದು ಬೆಂಗಳೂರು ಏವಿಯೇಷನ್‌ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT