ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನಂದ ತೇಲ್ತುಂಬ್ಡೆ, ಡಾ. ಮಹದೇವಪ್ಪಗೆ ಬಸವ ರಾಷ್ಟ್ರೀಯ ಪುರಸ್ಕಾರ

Published 25 ಜನವರಿ 2024, 9:40 IST
Last Updated 25 ಜನವರಿ 2024, 12:54 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಬಸವ, ಚೌಡಯ್ಯ, ಪಂಪ ಸೇರಿ 21 ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳನ್ನು ಘೋಷಿಸಿದ್ದು, ಈ ಪ್ರಶಸ್ತಿಗಳಿಗೆ ಲೇಖಕರಾದ ನಾ. ಡಿಸೋಜ, ಆನಂದ ತೇಲ್ತುಂಬ್ಡೆ ಸೇರಿ 44 ಗಣ್ಯರನ್ನು ಆಯ್ಕೆ ಮಾಡಲಾಗಿದೆ.

‍ರಾಷ್ಟ್ರೀಯ ವಿಭಾಗದಲ್ಲಿ ನಾಲ್ಕು ಪ್ರಶಸ್ತಿಗಳಿಗೆ ಜಾನಪದ ವಿದ್ವಾಂಸ ಗೊ.ರು. ಚನ್ನಬಸಪ್ಪ ನೇತೃತ್ವದ ಸಮಿತಿ 2022–23 ಹಾಗೂ 2023–24ನೇ ಸಾಲಿಗೆ ಆಯ್ಕೆ ಮಾಡಿದೆ. ‘ಬಸವ ರಾಷ್ಟ್ರೀಯ ಪುರಸ್ಕಾರ’ಕ್ಕೆ ಮಹಾರಾಷ್ಟ್ರದ ಆನಂದ ತೇಲ್ತುಂಬ್ಡೆ, ಧಾರವಾಡದ ಎನ್.ಜಿ. ಮಹದೇವಪ್ಪ, ‘ಶ್ರೀ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ’ಗೆ ಧಾರವಾಡದ ಜಿನದತ್ತ ದೇಸಾಯಿ, ಗುಜರಾತಿನ ಗಾಂಧಿ ಸೇವಾಶ್ರಮ, ‘ಟಿ. ಚೌಡಯ್ಯ ಪ್ರಶಸ್ತಿ’ಗೆ ಮುಂಬೈನ ಕೊಳಲುವಾದಕ ನಿತ್ಯಾನಂದ ಹಳದಿಪುರ, ಕೋಲಾರದ ನಾದಸ್ವರ ಕಲಾವಿದ ಶ್ರೀರಾಮುಲು ಹಾಗೂ ‘ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿ ಪ್ರಶಸ್ತಿ’ಗೆ ಧಾರವಾಡದ ಹಿಂದೂಸ್ತಾನಿ ಗಾಯಕ ಸೋಮನಾಥ್ ಮರಡೂರ ಮತ್ತು ಮೈಸೂರಿನ ಕರ್ನಾಟಕ ಸಂಗೀತ ಕಲಾವಿದೆ ನಾಗಮಣಿ ಶ್ರೀನಾಥ್ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಗಳು ತಲಾ ₹ 10 ಲಕ್ಷ ನಗದು ಒಳಗೊಂಡಿವೆ.

ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಶಸ್ತಿ ವಿಭಾಗದಲ್ಲಿ ನಾಲ್ಕು ವರ್ಷಗಳಿಗೆ ಬಿ.ಟಿ. ಲಲಿತಾ ನಾಯಕ್ ನೇತೃತ್ವದ ಸಮಿತಿ 10 ಮಂದಿಯನ್ನು ಆಯ್ಕೆ ಮಾಡಿದೆ. ಸಾಹಿತ್ಯ ಹಾಗೂ ನಾಟಕ ಪ್ರಶಸ್ತಿ ವಿಭಾಗದಲ್ಲಿ ಮೂರು ವರ್ಷಗಳಿಗೆ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ 12 ಜನರನ್ನು, ಕಲಾ ಪ್ರಶಸ್ತಿ

ವಿಭಾಗದಲ್ಲಿ 2ವರ್ಷಗಳಿಗೆ ವಿ.ಟಿ. ಕಾಳೆ ನೇತೃತ್ವದ ಸಮಿತಿ 6 ಮಂದಿಯನ್ನು ಹಾಗೂ ಸಂಗೀತ, ನೃತ್ಯ ಪ್ರಶಸ್ತಿ ವಿಭಾಗದಲ್ಲಿ ಎರಡು ವರ್ಷಗಳಿಗೆ ನರಸಿಂಹಲು ವಡವಾಟಿ ನೇತೃತ್ವದ ಸಮಿತಿ 8 ಮಂದಿಯನ್ನು ಆಯ್ಕೆ ಮಾಡಿದೆ. ಈ ಪ್ರಶಸ್ತಿಗಳು ತಲಾ ₹ 5 ಲಕ್ಷ ನಗದು ಒಳಗೊಂಡಿವೆ.

ಇದೇ 31ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. 2018-19, 2020-21, 2021-22 ಹಾಗೂ 2022-23ನೇ ಸಾಲಿಗೆ ಈ ಹಿಂದೆ ಘೋಷಣೆ ಮಾಡಲಾಗಿದ್ದ ವಿವಿಧ ಪ್ರಶಸ್ತಿಗಳನ್ನೂ ಈ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ನಾನಾ ಕಾರಣಗಳಿಂದ ಈ ಪ್ರಶಸ್ತಿಗಳ ವಿತರಣೆ ಸಾಧ್ಯವಾಗಿರಲಿಲ್ಲ. ವಿತರಣೆ ಆಗದೇ ಇರುವ 31 ಪ್ರಶಸ್ತಿಗಳೂ ಸೇರಿ ಒಟ್ಟು 75 ಮಂದಿಗೆ ಆ ದಿನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT