ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಭಾಧ್ಯಕ್ಷ ಕಾಗೇರಿ ಭಾಷಣಕ್ಕೆ ಕಾಂಗ್ರೆಸ್‌ ಕಿಡಿ

ಪರಿಷತ್‌ಗೆ ಅವಮಾನ, ಅಗೌರವ: ಬಿ.ಕೆ. ಹರಿಪ್ರಸಾದ್‌
Last Updated 30 ಮಾರ್ಚ್ 2022, 17:38 IST
ಅಕ್ಷರ ಗಾತ್ರ

ಬೆಂಗಳೂರು: ‘ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ ಕುರಿತು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಡಿರುವ ಭಾಷಣವು, ವಿಧಾನ ಪರಿಷತ್‌ಗೆ ಅವಮಾನ ಮತ್ತು ಅಗೌರವ ತಂದಿದೆ’ ಎಂದು ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ನಲ್ಲಿ ಬುಧವಾರ ಸರ್ಕಾರದ ಮುಖ್ಯ ಸಚೇತಕ ವೈ.ಎ. ನಾರಾಯಣಸ್ವಾಮಿ ಅವರು ಭಾಷಣದ ಪ್ರತಿಗಳನ್ನು ವಿತರಿಸಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ‘ನಿಯಮ ಮೀರಿ ವಿಧಾನಸಭಾ ಅಧ್ಯಕ್ಷರು ಈ ಭಾಷಣದ ಪ್ರತಿಗಳನ್ನು ಈ ಸದನಕ್ಕೆ ಕಳುಹಿಸಿದ್ದಾರೆ’ ಎಂದು ಕಿಡಿಕಾರಿದರು.

‘ಕಳೆದ ವರ್ಷ ಡಿಸೆಂಬರ್‌ನಲ್ಲಿ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಈ ಚುನಾವಣೆಗೆ ಮಾಡಿರುವ ವೆಚ್ಚದಲ್ಲಿ ಒಂದು ಚಿಕ್ಕ ರಾಜ್ಯವನ್ನು ಅಭಿವೃದ್ಧಿಪಡಿಸಬಹುದು ಎಂದು ಸ್ಪೀಕರ್‌ ಅವರು ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ, ಪುರಸಭೆ ಮತ್ತು ಪಾಲಿಕೆ ಚುನಾಯಿತ ಪ್ರತಿನಿಧಿಗಳೇ ಇಲ್ಲಿ ಮತದಾರರಾಗಿದ್ದರು. ಸ್ಪೀಕರ್‌ ಅವರು ವಿಧಾನ ಪರಿಷತ್‌ ಸದಸ್ಯರಿಗೂ ಮತ್ತು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೂ ಅವಮಾನ ಮಾಡಿದ್ದಾರೆ’ ಎಂದು
ದೂರಿದರು.

‘ಸ್ಪೀಕರ್‌ ಅವರ ಭಾಷಣದಲ್ಲಿ ಅಂಶಗಳನ್ನು ಗಮನಿಸಿದರೆ ನಾವೆಲ್ಲರೂ ಭ್ರಷ್ಟಾಚಾರದಲ್ಲಿ ಮುಳುಗಿದ್ದೆವೆಯೇ? ಭಾಷಣದ ಪ್ರತಿಗಳ ಮುಖಪುಟದಲ್ಲಿರುವ ರಾಷ್ಟ್ರಧ್ವಜದ ಮೇಲೆಯೇ ವಿದ್ಯುನ್ಮಾನ ಯಂತ್ರದ ಚಿತ್ರ ಪ್ರಕಟಿಸಿ ಅವಮಾನ ಮಾಡಲಾಗಿದೆ.
ಈ ಮೂಲಕ ಧ್ವಜ ಸಂಹಿತೆಯನ್ನು ಉಲ್ಲಂಘಿಸಲಾಗಿದೆ. ಸದನಕ್ಕೆ ಅಗೌರವ ತಂದಿರುವ ಈ ಪ್ರತಿಗಳನ್ನು ವಾಪಸ್‌ ಪಡೆದುಕೊಳ್ಳಿ’ ಎಂದು ಅವರು ಒತ್ತಾಯಿಸಿದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ, ‘ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಗಳಾಗಬೇಕು ಎನ್ನುವ ಉದ್ದೇಶದಿಂದ ಸ್ಪೀಕರ್‌ ಅವರು ತಮ್ಮ ಭಾಷಣದ ಸಂದೇಶಗಳನ್ನು ಮುಖ್ಯ ಸಚೇತಕರ ಮೂಲಕ ಕಳುಹಿಸಿದ್ದಾರೆ ಅಷ್ಟೇ. ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ’ ಎಂದರು.

ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ‘ಸದನದ ಕಾರ್ಯಸೂಚಿಯಲ್ಲಿ ಈ ವಿಷಯ ಇಲ್ಲ. ಹೀಗಾಗಿ, ಸದನದಲ್ಲಿ ಈ ಬಗ್ಗೆ ವಿಷಯ ಪ್ರಸ್ತಾಪಿಸುವ ಅಗತ್ಯ ಇಲ್ಲ’ ಎಂದು ಚರ್ಚೆಗೆ ತೆರೆ ಎಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT