ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಮತ್ತೆ ಅಧಿಕಾರ ಸಂಘರ್ಷ

ಸದಸ್ಯ ಕಾರ್ಯದರ್ಶಿ ಹೊರಡಸಿದ್ದ ಸುತ್ತೋಲೆ ರದ್ದುಗೊಳಿಸಿದ ಅಧ್ಯಕ್ಷ
Published 2 ನವೆಂಬರ್ 2023, 19:54 IST
Last Updated 2 ನವೆಂಬರ್ 2023, 19:54 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಅಧ್ಯಕ್ಷ ಮತ್ತು ಸದಸ್ಯ ಕಾರ್ಯದರ್ಶಿ ನಡುವೆ ಮತ್ತೆ ಅಧಿಕಾರ ಸಂಘರ್ಷ ಉಂಟಾಗಿದೆ.

ಹೈಕೋರ್ಟ್‌ ಆದೇಶದಂತೆ ಅಧ್ಯಕ್ಷರಾಗಿ ಮುಂದುವರಿದಿರುವ ಅಧ್ಯಕ್ಷ ಶಾಂತ್‌ ಎ. ತಿಮ್ಮಯ್ಯ ಅವರು, ಸದಸ್ಯ ಕಾರ್ಯದರ್ಶಿ ಪಿ.ಸಿ. ರೇ ಅ.27ರಂದು ಹೊರಡಿಸಿದ್ದ 242ನೇ ಸಭೆಯ ಸುತ್ತೋಲೆಯನ್ನು ಅ.30ರಂದು ರದ್ದು ಮಾಡಿದ್ದಾರೆ.

‘ಮಂಡಳಿ ಮುಂದೆ 400ಕ್ಕೂ ಹೆಚ್ಚು ಅರ್ಜಿಗಳು ಸಮ್ಮತಿಗಾಗಿ ಬಾಕಿ ಉಳಿದಿವೆ. ಅರಣ್ಯ ಸಚಿವರ ನೇತೃತ್ವದಲ್ಲಿ ಈ ವಿಚಾರವನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಸದಸ್ಯ ಕಾರ್ಯದರ್ಶಿಯವರು ಪರಾಮರ್ಶಿಸಿದರು. ಈ ಎಲ್ಲ ಅರ್ಜಿಗಳನ್ನು ಮಂಡಳಿ ಮೂಲಕ ಶೀಘ್ರವೇ ವಿಲೇವಾರಿ ಮಾಡಲು ನಿರ್ಧರಿಸಲಾಯಿತು. ಇದನ್ನು ಸುತ್ತೋಲೆ ಮೂಲಕ ಸಮ್ಮತಿ ನೀಡಬೇಕು’ ಎಂದು ಅ.27ರಂದು ಸದಸ್ಯ ಕಾರ್ಯದರ್ಶಿಯವರು ರಾಜ್ಯಮಟ್ಟದ ಜಾರಿ ಸಮಿತಿಯ ಸದಸ್ಯರಿಗೆ ‘242ನೇ ಮಂಡಳಿ ಸಭೆ ಕಾರ್ಯಸೂಚಿಯ ಪ್ರಸರಣ’ವನ್ನು ಕಳುಹಿಸಿದ್ದಾರೆ.

‘ಸದಸ್ಯ ಕಾರ್ಯದರ್ಶಿಯವರಿಗೆ ಮಂಡಳಿಯ ರಾಜ್ಯಮಟ್ಟದ ಜಾರಿ ಸಮಿತಿ ಸದಸ್ಯರ ಸಭೆ ಕರೆಯುವ ಅಧಿಕಾರ ಇಲ್ಲ. ಹೀಗಿದ್ದರೂ, ಅಧ್ಯಕ್ಷರ ಸಮ್ಮತಿ ಇಲ್ಲದೆ ಅ.13ರಂದು ಸಭೆ ನಡೆಸಿದ್ದಾರೆ. ಅಧ್ಯಕ್ಷರ ಸೂಚನೆಯ ನಂತರವೂ ಸದಸ್ಯ ಕಾರ್ಯದರ್ಶಿಯವರು ಸೆ.16, ಅ.5, ಅ.6, ಅ.7 ಮತ್ತು ಅ.10ರಂದು ಸಭೆ ನಡೆಸುವ ವೇಳಾಪಟ್ಟಿ ಹೊರಡಿಸಿದ್ದರು. ಇದೆಲ್ಲವೂ ಕಾನೂನು ಬಾಹಿರ’ ಎಂದು ಅಧ್ಯಕ್ಷ ಶಾಂತ್‌ ತಮ್ಮಯ್ಯ ಅವರು ರಾಜ್ಯಮಟ್ಟದ ಜಾರಿ ಸಮಿತಿಯ ಸದಸ್ಯರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

‘ಮಂಡಳಿ ಮುಂದೆ ಬಾಕಿ ಉಳಿದಿರುವ ಕಡತಗಳಿಗೆ ಸಮ್ಮತಿ ನೀಡಿ ವಿಲೇವಾರಿ ಮಾಡಲು ಸದಸ್ಯ ಕಾರ್ಯದರ್ಶಿಯವರು ಅ.27ರಂದು ಸುತ್ತೋಲೆ ಹೊರಡಿಸಿರು ವುದು ಕೂಡ ಜಲ ಕಾಯ್ದೆ ಹಾಗೂ ಜಲ ಮಾಲಿನ್ಯ ನಿಷೇಧ ಮತ್ತು ನಿಯಂತ್ರಣ ನಿಯಮಗಳಿಗೆ ವಿರುದ್ಧವಾಗಿದೆ. ಅಧ್ಯಕ್ಷರ ಸಮ್ಮತಿ ಇಲ್ಲದೆ ಇಂತಹ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ 242ನೇ ಮಂಡಳಿ ಸಭೆಯ ವಿಷಯಗಳಿಗೆ ಸಮ್ಮತಿ ನೀಡಬೇಕೆಂದು ಹೊರಡಿಸಿರುವ ಸುತ್ತೋಲೆಯನ್ನು ರದ್ದು‌ಪಡಿಸಲಾಗಿದೆ. ಹೈಕೋರ್ಟ್‌ ಸಮ್ಮತಿ ಪಡೆದುಕೊಂಡು ಮುಂದಿನ ಸಭೆಯ ದಿನಾಂಕವನ್ನು ತಿಳಿಸಲಾಗುತ್ತದೆ’ ಎಂದು ಶಾಂತ್‌ ತಮ್ಮಯ್ಯ  ಹೇಳಿದ್ದಾರೆ.

‘ಸಮಸ್ಯೆಗಳು ಸೃಷ್ಟಿಯಾಗಿವೆ, ಈ ಬಗ್ಗೆ ನಾವು ಹೋರಾಟ ನಡೆಸುತ್ತೇವೆ’ ಎಂದು ಸದಸ್ಯ ಕಾರ್ಯದರ್ಶಿ ಪಿ.ಸಿ. ರೇ ಪ್ರತಿಕ್ರಿಯಿಸಿದರು.

ಮುಖ್ಯ ಕಾರ್ಯದರ್ಶಿಗೆ ಪತ್ರ

‘ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಬಿ.ಪಿ ರವಿ ಅವರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಲಯ ಪರಿಸರ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಮಂಡಳಿಯ ಅಧಿಕಾರಿಗಳೊಂದಿಗೆ ಕುಂಬಳಗೋಡು, ಕೆಂಗೇರಿ, ಶಿವಮೊಗ್ಗ, ಚಿತ್ರದುರ್ಗಗಳಲ್ಲಿ ಕಂಪನಿಗಳ ಪರಿಶೀಲನೆ ನಡೆಸಿದ್ದಾರೆ. ಇದು ಕಾನೂನುಬಾಹಿರವಾಗಿದ್ದು, ಮಂಡಳಿಯ ಆಡಳಿತದಲ್ಲಿ ಅವರು ಮಧ್ಯಪ್ರವೇಶಿಸದಂತೆ ಆದೇಶಿಸಬೇಕು’ ಎಂದು ಮುಖ್ಯ ಕಾರ್ಯದರ್ಶಿ ಅವರಿಗೆ ಶಾಂತ್‌ ತಮ್ಮಯ್ಯ ಪತ್ರ ಬರೆದಿದ್ದಾರೆ.

‘ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಬಿ.ಪಿ. ರವಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT