ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ ಬೈಲಾ ತಿದ್ದುಪಡಿಗೆ ಅನುಮೋದನೆ

ವಿಶೇಷ ಸಭೆಯಲ್ಲಿ ಅಧ್ಯಕ್ಷ ಮಹೇಶ ಜೋಶಿ ವಿರುದ್ಧ ಧಿಕ್ಕಾರ ಕೂಗಿದ ಕೆಲ ಸದಸ್ಯರು
Last Updated 1 ಮೇ 2022, 18:05 IST
ಅಕ್ಷರ ಗಾತ್ರ

ಹಾವೇರಿ: ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆಯಲ್ಲಿ ಭಾನುವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸರ್ವ ಸದಸ್ಯರ ವಿಶೇಷ ಸಭೆಯಲ್ಲಿ ಪರಿಷತ್ತಿನ ನಿಯಮ–ನಿಬಂಧನೆಗಳ (ಬೈಲಾ) ಉದ್ದೇಶಿತ ತಿದ್ದುಪಡಿಗೆ ಕೆಲವು ಸದಸ್ಯರ ವಿರೋಧದ ನಡುವೆಯೂ ಅನುಮೋದನೆ ದೊರೆಯಿತು.

ವಾರ್ಷಿಕ ಸಭೆಯಲ್ಲಿ ಮೊದಲು ಲೆಕ್ಕಪತ್ರಗಳ ಮಂಡನೆಯಾಯಿತು. ಮಧ್ಯಾಹ್ನದ ವಿಶೇಷ ಸಭೆಯಲ್ಲಿ ಕಸಾಪ ಅಧ್ಯಕ್ಷ ಮಹೇಶ ಜೋಶಿ ಭಾಷಣ ಮಾಡಲು ನಿಂತಾಗ ಕೆಲವು ಸದಸ್ಯರು ‘ಜೋಶಿಯವರ ಉದ್ದುದ್ದ ಭಾಷಣ ಕೇಳಲು ಬಂದಿಲ್ಲ, ಮೊದಲು ತಿದ್ದುಪಡಿ ಪ್ರಸ್ತಾವ ಮಂಡಿಸಿ’ ಆಕ್ಷೇಪ ವ್ಯಕ್ತಪಡಿಸಿದರು.

‘ಕೇಳಲು ಇಷ್ಟವಿಲ್ಲದಿದ್ದರೆ ಸಭೆಯಿಂದ ಹೊರಹೋಗಿ’ ಎಂದು ಜೋಶಿ ಖಾರವಾಗಿ ಹೇಳಿದರು. ಇದರಿಂದ ಕೆಂಡಾಮಂಡಲರಾದ ಸಾಹಿತ್ಯಾಸಕ್ತರ ಒಂದು ಗುಂಪು ವೇದಿಕೆಯ ಮುಂಭಾಗಕ್ಕೆ ಧಾವಿಸಿ ‘ಸರ್ವಾಧಿಕಾರತ್ವದ ಧೋರಣೆಗೆ ಧಿಕ್ಕಾರ’ ಎಂದು ಘೋಷಣೆ ಕೂಗಿತು. ಸಭೆಯಲ್ಲಿ ಕೆಲಕಾಲ ಗೊಂದಲ ಉಂಟಾಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಜೋಶಿಯವರು ಭಾಷಣ ಮೊಟಕುಗೊಳಿಸಬೇಕಾಯಿತು.

ತಿದ್ದುಪಡಿ ಸಮಿತಿಯ ಅಧ್ಯಕ್ಷ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಅವರು ತಿದ್ದುಪಡಿ ವಿಚಾರ ಮಂಡಿಸಿ, ಸಭೆಯ ಒಪ್ಪಿಗೆ ಪಡೆದರು.

ಕನ್ನಡ ಸಾಹಿತ್ಯ ಪರಿಷತ್‌ ಸರ್ವ ಸದಸ್ಯರ ಸಭೆಗೆ 800 ಸದಸ್ಯರಿಗೆ ಮಾತ್ರ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಮೂರು ಸಾವಿರಕ್ಕೂ ಹೆಚ್ಚು ಜನ ಸೇರಿದ್ದರಿಂದ, ಊಟದ ಕೊರತೆ ಉಂಟಾಯಿತು.

ಅವಸರದಲ್ಲಿ ತಿದ್ದುಪಡಿ ಮಾಡಿಲ್ಲ: ಹಾವೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಹೇಶ ಜೋಶಿ, ‘ಸಭೆಯಲ್ಲಿ ಚರ್ಚೆಗಳು ಸಹಜ. ಆದರೆ, ಕಸಾಪ ಘನತೆ, ಗೌರವಕ್ಕೆ ಧಕ್ಕೆಯಾಗದಂತೆ ಸದಸ್ಯರು ನಡೆದುಕೊಳ್ಳಬೇಕು. ನಾವು ದುರುದ್ದೇಶದಿಂದಾಗಲೀ, ಅವಸರದಿಂದಾಗಲೀ ತಿದ್ದುಪಡಿ ತಂದಿಲ್ಲ. ಸಮಿತಿ ರಚಿಸಿ ಆರು ಸಭೆಗಳಲ್ಲಿ ಚರ್ಚಿಸಲಾಗಿದೆ. ತಿದ್ದುಪಡಿ ಬಗ್ಗೆ ಚುನಾವಣೆ ಪ್ರಣಾಳಿಕೆಯಲ್ಲೇ ತಿಳಿಸಿದ್ದೆ’ ಎಂದು ಸಮರ್ಥಿಸಿಕೊಂಡರು.

‘ಸರ್ವಾಧಿಕಾರಿ ಧೋರಣೆ ಎಂಬುದು ನಿಮ್ಮ ಚಿಂತನೆಯನು ಅವಲಂಬಿಸಿದೆ. ಕಸಾಪ ಅಧ್ಯಕ್ಷನಾಗಿ ನಾನು ಮಾಡುವ ಕೆಲಸ ಕಾರ್ಯಗಳಿಗೆ ಅಡೆ–ತಡೆ ಮಾಡಬಾರದು. ತಿದ್ದುಪಡಿಯ ಅವಶ್ಯಬಗ್ಗೆ ಸಭೆಯಲ್ಲಿ ಮಾತನಾಡುವಾಗ ಪದೇ ಪದೇ ಕೆಲವರುತಡೆಯಲು ಯತ್ನಿಸಿದರು. ಅವರ ಉದ್ದೇಶ ಸರಿಯಿಲ್ಲ ಎದು ಸ್ಪಷ್ಟವಾಗುತ್ತದೆ’ ಎಂದು ತಿರುಗೇಟು ನೀಡಿದರು.

‘ತೀರ್ಪಿಗೆ ಬದ್ಧ’

ಎನ್‌.ಹನುಮೇಗೌಡ ಅವರು ಕಸಾಪ ಸರ್ವ ಸದಸ್ಯರ ವಿಶೇಷ ಸಭೆಗೆ ತಡೆಯಾಜ್ಞೆ ತರಲು ಮೊದಲಿಗೆ ಕೋ– ಆಪರೇಟಿವ್‌ ರಿಜಿಸ್ಟ್ರಾರ್‌, ನಂತರಬೆಂಗಳೂರಿನ ಸಿಟಿ ಸಿವಿಲ್‌ ಕೋರ್ಟ್‌ಗೆ ಹೋದರು. ಆದರೆ, ರಿಜಿಸ್ಟ್ರಾರ್‌ ಬಳಿ ಹೋದದ್ದನ್ನು ಕೋರ್ಟ್‌ ಗಮನಕ್ಕೆ ತರಲಿಲ್ಲ. ಆ ವಿಷಯವನ್ನು ನಮ್ಮ ವಕೀಲರು ಕೋರ್ಟ್‌ಗಮನಕ್ಕೆ ತಂದಿದ್ದಾರೆ. ನ್ಯಾಯಾಲಯ ನೀಡುವ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಮಹೇಶ ಜೋಶಿ ಹೇಳಿದರು.

‘ಕೋರ್ಟ್‌ ಅಂಕುಶ ಹಾಕಿಲ್ಲ’

‘70 ವರ್ಷಗಳ ಇತಿಹಾಸವಿರುವ ಸಂವಿಧಾನಕ್ಕೆ ನೂರು ಬಾರಿ ತಿದ್ದುಪಡಿ ತರಲಾಗಿದೆ. ಆದರೆ 100 ವರ್ಷ ಇತಿಹಾಸ ಇರುವ ಕಸಾಪ ನಿಬಂಧನೆಗಳಿಗೆ 6 ಬಾರಿ ಮಾತ್ರ ತಿದ್ದುಪಡಿ ಮಾಡಲಾಗಿದೆ. ಕಸಾಪ ಚಾರಿತ್ರ್ಯಕ್ಕೆ ಚ್ಯುತಿ ಬಾರದ ರೀತಿಯಲ್ಲಿ ತಿದ್ದುಪಡಿ ಮಾಡಲಾಗಿದೆ’ ಎಂದುತಿದ್ದುಪಡಿ ಸಮಿತಿಯ ಅಧ್ಯಕ್ಷರಾದ ಅರಳಿ ನಾಗರಾಜ ತಿಳಿಸಿದರು.

‘ಸಭೆ ಜರುಗಲಿ, ನಿರ್ಣಯಗಳನ್ನು ತೆಗೆದುಕೊಳ್ಳಲಿ. ಆದರೆ ನ್ಯಾಯಾಲಯದ ತೀರ್ಪಿಗೆ ಒಳಪಟ್ಟಿರಬೇಕು’ ಎಂದು ನ್ಯಾಯಾಲಯ ಹೇಳಿದೆ. ವಿಶೇಷ ಸಭೆ ನಡೆಸಬಾರದು ಎಂದು ಹೇಳಿಲ್ಲ. ಹೀಗಾಗಿ ಅಂಕುಶ, ಹಿನ್ನಡೆ, ಮುಖಭಂಗ ಎಂದು ಮಾಧ್ಯಮಗಳಲ್ಲಿ ತಪ್ಪಾಗಿ ಪದ ಬಳಕೆ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT