ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳ ಹುದ್ದೆ ಭರ್ತಿಗೆ ಅಶ್ವತ್ಥನಾರಾಯಣ ಆಗ್ರಹ

7 ವಿ.ವಿ.ಗಳಲ್ಲಿ ಕುಲಪತಿಗಳಿಲ್ಲ: ಡಾ. ಅಶ್ವತ್ಥನಾರಾಯಣ
Published 30 ಜನವರಿ 2024, 15:59 IST
Last Updated 30 ಜನವರಿ 2024, 15:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಕುಲಪತಿ ಹುದ್ದೆಗಳಿಗೆ ಕೂಡಲೇ ನೇಮಕ ಮಾಡಬೇಕು ಎಂದು ಬಿಜೆಪಿ ಶಾಸಕ ಡಾ.ಸಿ.ಎ‌ನ್‌.ಅಶ್ವತ್ಥನಾರಾಯಣ ಒತ್ತಾಯಿಸಿದರು.

ಇದಕ್ಕೆ ಸಂಬಂಧಿಸಿದ ಕಡತಗಳನ್ನು ತಕ್ಷಣವೇ ರಾಜ್ಯಪಾಲರಿಗೆ ರವಾನಿಸಬೇಕು. ಏಳು ವಿಶ್ವವಿದ್ಯಾಲಯಗಳಿಗೆ ಕೂಡಲೇ ಹಣವನ್ನು ಬಿಡುಗಡೆ ಮಾಡಬೇಕು ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಉನ್ನತ ಶಿಕ್ಷಣ ಕ್ಷೇತ್ರವನ್ನು ಕಡೆಗಣಿಸಿದೆ. ಅನಗತ್ಯ ಗೊಂದಲ ನಿರ್ಮಾಣ ಮಾಡುತ್ತಿದೆ. ಕಾಲಕಾಲಕ್ಕೆ ತೆಗೆದುಕೊಳ್ಳಬೇಕಾದ ನಿರ್ಣಯಗಳನ್ನು ಮರೆತು ರಾಜಕೀಯ ಪ್ರೇರಿತವಾಗಿ ಸಮಯ ವ್ಯರ್ಥ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಕುಲಪತಿಗಳ ಸ್ಥಾನ ತೆರವಾಗಿ ಬಹಳ ತಿಂಗಳುಗಳೇ ಕಳೆದಿವೆ. ಮಂಗಳೂರು ವಿ.ವಿ, ರಾಣಿಚನ್ನಮ್ಮ ವಿ.ವಿ, ವಿಜಯನಗರ ವಿ.ವಿ, ಕುವೆಂಪು ವಿ.ವಿ. ಬಾಗಲಕೋಟೆ ತೋಟಗಾರಿಕಾ ವಿ.ವಿಗಳಲ್ಲಿ ಕುಲಪತಿಗಳ ಹುದ್ದೆಗಳು ತೆರವಾಗಿವೆ. ನೇಮಕಾತಿ ಮಾಡುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಕುಲಪತಿಗಳ ಆಯ್ಕೆಗಾಗಿ ರಚಿಸಿದ್ದ ಶೋಧನಾ ಸಮಿತಿ ವರದಿಯನ್ನೂ ಕೊಟ್ಟಿದೆ. ಅದನ್ನು ನೋಡಲು ಮುಖ್ಯಮಂತ್ರಿಯವರಿಗೆ ಸಮಯವಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಸರ್ಕಾರದ ನಿರ್ಲಕ್ಷ್ಯದಿಂದ ವಿ.ವಿಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ಹಣಕಾಸಿನ ಕೊರತೆ, ಸಿಬ್ಬಂದಿ ಕೊರತೆ, ಕುಲಪತಿಗಳ ಕೊರತೆ ಇದೆ. ಹಂಗಾಮಿ ಕುಲಪತಿ ಇದ್ದರೆ ಅಲ್ಲಿ ಏನೂ ನಿರ್ಣಯ ತೆಗೆದುಕೊಳ್ಳಲು ಆಗುವುದಿಲ್ಲ ಎಂದರು.

‘ಯುಪಿಎ ಸ‌ರ್ಕಾರದ ಶಿಫಾರಸಿನ ಅನ್ವಯವೇ ನಮ್ಮ ಸರ್ಕಾರ ಏಳು ಹೊಸ ವಿಶ್ವವಿದ್ಯಾಲಯಗಳನ್ನು ಜಿಲ್ಲೆಗಳಲ್ಲಿ ಆರಂಭಿಸಿತು. ಆದರೆ, 10 ತಿಂಗಳಿಂದ ಸರ್ಕಾರ ವೇತನ ಪಾವತಿಸಿಲ್ಲ’ ಎಂದು ಅಶ್ವತ್ಥನಾರಾಯಣ ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT