ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಲಬ್ರೂಯಿ ಇನ್ನು ‘ಕಾನ್ಸ್ಟಿಟ್ಯೂಷನ್ ಕ್ಲಬ್’

ಪಾರಂಪರಿಕ ಕಟ್ಟಡ ‘ಕರ್ನಾಟಕ ವಿಧಾನ ಮಂಡಲ ಸಂಸ್ಥೆ’ಗೆ ಹಸ್ತಾಂತರ
Published : 4 ಜುಲೈ 2023, 22:21 IST
Last Updated : 4 ಜುಲೈ 2023, 22:21 IST
ಫಾಲೋ ಮಾಡಿ
Comments

ಬೆಂಗಳೂರು: ರಾಜ್ಯ ಸರ್ಕಾರ ತನ್ನ ಸುಪರ್ದಿಯಲ್ಲಿರುವ ಬಾಲಬ್ರೂಯಿ ಅತಿಥಿ ಗೃಹವನ್ನು ’ಕಾನ್ಸ್ಟಿಟ್ಯೂಷನ್ ಕ್ಲಬ್’ ಆಗಿ ಪರಿವರ್ತಿಸಲು ಕರ್ನಾಟಕ ವಿಧಾನ ಮಂಡಲ ಸಂಸ್ಥೆಗೆ ನೀಡಿದೆ. ನಗರದ ಹೃದಯಭಾಗದಲ್ಲಿರುವ ಈ ಪಾರಂಪರಿಕ ಕಟ್ಟಡ ಇನ್ನು ಮುಂದೆ ಶಾಸಕರ, ಮಾಜಿ ಶಾಸಕರ ‘ಮನೋರಂಜನಾ’ ಕೇಂದ್ರ ಆಗಲಿದೆ!

ಬಾಲಬ್ರೂಯಿ ಅತಿಥಿ ಗೃಹವನ್ನು ’ಕಾನ್ಸ್ಟಿಟ್ಯೂಷನ್ ಕ್ಲಬ್’ ಆಗಿ ಪರಿವರ್ತಿಸುವ ಸಂಬಂಧ ಲೋಕೋಪಯೋಗಿ ಇಲಾಖೆಯ ವಶಕ್ಕೆ ನೀಡಿ, ಇಲಾಖೆಯ ಮುಖ್ಯ ಎಂಜಿನಿಯರ್‌ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ (ಡಿಪಿಎಆರ್‌) ಕಾರ್ಯದರ್ಶಿ ಸೋಮವಾರ (ಜುಲೈ 3) ಪತ್ರ ಬರೆದಿದ್ದಾರೆ. ಈ ಪತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ.

ಈ ಪತ್ರದ ಬೆನ್ನಲ್ಲೇ ಮತ್ತೊಂದು ಪತ್ರವನ್ನು ಬರೆದಿರುವ ಡಿಪಿಎಆರ್‌ ಕಾರ್ಯದರ್ಶಿ, ‘ಅತಿಥಿ ಗೃಹವನ್ನು ’ಕಾನ್ಸ್ಟಿಟ್ಯೂಷನ್ ಕ್ಲಬ್’ ಆಗಿ ಪರಿವರ್ತಿಸುವ ಸಂಬಂಧ ಹೈಕೋರ್ಟ್‌ ಆದೇಶದ ಅನ್ವಯ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಮುಂಬರುವ ಆದೇಶವನ್ನು ಪಾಲಿಸುವ ಆದೇಶಕ್ಕೆ ಒಳಪಟ್ಟು ಮುಂದಿನ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದೂ ಸೂಚಿಸಿದ್ದಾರೆ.

ಬಾಲಬ್ರೂಯಿ ಅತಿಥಿ ಗೃಹವನ್ನು ಕಾನ್ಸ್ಟಿಟ್ಯೂಷನ್ ಕ್ಲಬ್ ಆಗಿ ಪರಿವರ್ತಿಸುವ ರಾಜ್ಯ ಸರ್ಕಾರದ ಪ್ರಸ್ತಾವಕ್ಕೆ ಆಕ್ಷೇಪ ವ್ಯಕ್ತಪಡಿಸಿ ಈ ಹಿಂದೆ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಆಗಿತ್ತು.

‘ಬಾಲಬ್ರೂಯಿ ಅತಿಥಿಗೃಹವನ್ನು ಕಾನ್‌ಸ್ಟಿಟ್ಯೂಷನ್ ಕ್ಲಬ್ ಆಗಿ ಪರಿವರ್ತಿಸುವ ನಿಟ್ಟಿನಲ್ಲಿ, ಆವರಣದಲ್ಲಿನ ಹಳೆಯ ಮರಗಳನ್ನು ತೆರವುಗೊಳಿಸದಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು' ಎಂದು ಕೋರಿ ದತ್ತಾತ್ರೇಯ ಟಿ. ದೇವರೆ ಹಾಗೂ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಇದೇ ಜ. 17ರಂದು ಹಸಿರು ನಿಶಾನೆ ತೋರಿಸಿತ್ತು.

ತನ್ನ ತೀರ್ಪಿನಲ್ಲಿ ‘ಯಾವುದೇ ರಚನಾತ್ಮಕ ಮಾರ್ಪಾಡುಗಳನ್ನು ಮಾಡದೆ ಅತಿಥಿಗೃಹದ ಒಳಾಂಗಣದ ಸೌಂದರ್ಯವನ್ನು ಸುಧಾರಿಸುವ ಮೂಲಕ ನಿರ್ವಹಿಸಬೇಕು. ಅಲ್ಲದೆ, ಅತಿಥಿಗೃಹದ ಸುತ್ತಮುತ್ತಲಿನ ಮರಗಳಿಗೆ ಹಾನಿ ಆಗಬಾರದು. ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಪಡೆದು ಕ್ಲಬ್‌ ಆಗಿ ಪರಿವರ್ತಿಸಬಹುದು’ ಎಂದು ಹೈಕೋರ್ಟ್‌ ಹೇಳಿತ್ತು.

‘ಬಾಲಬ್ರೂಯಿಯ ಪಾರಂಪರಿಕ ಕಟ್ಟಡದ ಸ್ವರೂಪಕ್ಕೆ ಯಾವುದೇ ಧಕ್ಕೆ ಆಗದಂತೆ ನೋಡಿಕೊಳ್ಳಲಾಗುವುದು. ಕಟ್ಟಡಕ್ಕೆ ಧಕ್ಕೆಯಾಗುವ ಯಾವುದೇ ಕಾಮಗಾರಿ ನಡೆಸುವುದಿಲ್ಲ ಮತ್ತು ಅತಿಥಿ ಗೃಹದ ಆವರಣದಲ್ಲಿರುವ 159 ಮರಗಳನ್ನು ಕಡಿಯುವುದಿಲ್ಲ’ ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಕೂಡಾ ತಿಳಿಸಿತ್ತು.

ಈ ಬಳಿಕ ವಕೀಲ ಬ್ರಿಜೇಶ್‌ ಕಾಳಪ್ಪ ಅವರು, ‘ಅತಿಥಿ ಗೃಹದಲ್ಲಿ ಕಾನ್‌ಸ್ಟಿಟ್ಯೂಷನ್‌ ಕ್ಲಬ್‌ ನಿರ್ಮಾಣ ಮಾಡಿದರೆ ಮರಗಳನ್ನು ಕಡಿಯಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ದೂರು ನೀಡಿದ್ದರು. ಎನ್‌ಜಿಟಿ ಚೆನ್ನೈ ಪೀಠವು ಕರ್ನಾಟಕ ಸರ್ಕಾರ ಹಾಗೂ ಇತರ ಪ್ರತಿವಾದಿಗಳಿಗೆ ನೋಟಿಸ್‌ ನೀಡಿದ್ದು, ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT