ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಹೇಳನಕಾರಿ ಪೋಸ್ಟ್: ಆರೋಪಿ ನವೀನ್‌ ಬಂಧನ

Last Updated 12 ಆಗಸ್ಟ್ 2020, 6:41 IST
ಅಕ್ಷರ ಗಾತ್ರ

ಬೆಂಗಳೂರು: ಇಸ್ಲಾಂ ಧರ್ಮದ ಸ್ಥಾಪಕರಾದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ್ದಾನೆ ಎನ್ನಲಾದ ಆರೋಪಿ ನವೀನ್‌ನನ್ನು ಪೊಲೀಸರು ಮಂಗಳವಾರ ತಡರಾತ್ರಿಯೇ ಬಂಧಿಸಿದ್ದಾರೆ.

ಬಂಧಿತ ಆರೋಪಿ ನವೀನ್, ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸಹೋದರಿಯ ಮಗನೆಂದು ಗೊತ್ತಾಗಿದೆ. ಆತನನ್ನು ಸದ್ಯದಲ್ಲೇ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಮಂಗಳವಾರ ಬೆಳಿಗ್ಗೆಯೇ ಆರೋಪಿ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕಟಿಸಿದ್ದ. ಅದನ್ನು ನೋಡಿದ್ದ ಜನ, ಠಾಣೆಗೆ ದೂರು ನೀಡಲು ಹೋಗಿದ್ದರು. ಕೆಲವರು, ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೂ ತೆರಳಿದ್ದರು. ಎರಡು ಕಡೆಯೂ ಕೆಲ ಕಿಡಿಗೇಡಿಗಳು, ಮನೆ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ್ದರು‌. ಆ ಹಿನ್ನೆಲೆಯಲ್ಲಿ ಗಲಭೆ ಸೃಷ್ಟಿಯಾಗಿತ್ತು.

ಇದರ ನಡುವೆಯೇ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ನಸುಕಿನಲ್ಲಿ ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಕೊರೊನಾ ಪರೀಕ್ಷೆಯನ್ನೂ ಮಾಡಿಸಿದ್ದಾರೆ.

ಗಲಭೆ: ಬಂಧಿತರ ಸಂಖ್ಯೆ 110ಕ್ಕೆ ಏರಿಕೆ

ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಕಾವಲ್ ಭೈರಸಂದ್ರದಲ್ಲಿ ನಡೆದ ಗಲಭೆ ಸಂಬಂಧ ರಾತ್ರಿಯಿಡಿ ಕಾರ್ಯಾಚರಣೆ ನಡೆಸಿದ ಪೊಲೀಸರು, 110 ಮಂದಿಯನ್ನು ಬಂಧಿಸಿದ್ದಾರೆ.

ಗಲಭೆ ಸೃಷ್ಟಿಸಿ ವಾಹನಗಳಿಗೆ ಬೆಂಕಿ ಹಚ್ಚಿ, ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳ ಪತ್ತೆಗೆ ಸಿಸಿಬಿ ಹಾಗೂ ಸ್ಥಳೀಯ ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು.

ತಂಡದಲ್ಲಿದ್ದ ಪೊಲೀಸರು, ಬೆಳಿಗ್ಗೆ 10 ಗಂಟೆಯವರಗೆ ಒಟ್ಟು 110 ಆರೋಪಿಗಳನ್ನು ಬಂಧಿಸಿದ್ದಾರೆ.

'ಗಲಭೆ ಸಂಬಂಧ 110 ಮಂದಿಯನ್ನು ಬಂಧಿಸಲಾಗಿದೆ. ಇನ್ನು ಹಲವರು ತಲೆಮರೆಸಿಕೊಂಡಿದ್ದು, ಅವರ ಪತ್ತೆಗೂ ಶೋಧ ಮುಂದುವರಿದಿದೆ' ಎಂದು ಸಿಸಿಬಿ ಜಂಟಿ‌ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT