ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರದ ಮೇಲೆ ಒತ್ತಡ: ಮಠಾಧೀಶರ ನಡೆ ಮೂಲ ಅನುಭವ ಮಂಟಪ ಕಡೆ

ಹೇರಲು ನಾಳೆ ಬಸವಕಲ್ಯಾಣದಲ್ಲಿ ಕಾರ್ಯಕ್ರಮ
Last Updated 10 ಜೂನ್ 2022, 19:45 IST
ಅಕ್ಷರ ಗಾತ್ರ

ಕಲಬುರಗಿ: ಬೀದರ್ ಜಿಲ್ಲೆಯ ಬಸವಕಲ್ಯಾಣದ ತ್ರಿಪುರಾಂತ ಕೆರೆ ದಡದಲ್ಲಿ ನೂತನ ಅನುಭವ ಮಂಟಪದ ನಿರ್ಮಾಣ ಕಾಮಗಾರಿ ಆರಂಭಗೊಂಡ ಬೆನ್ನಲ್ಲೇ, ಮೂಲ ಅನುಭವ ಮಂಟಪದ ವಿಷಯ ಮುನ್ನೆಲೆಗೆ ಬಂದಿದೆ.

‘ಬಸವಕಲ್ಯಾಣದ ಪೀರಪಾಷಾ ಬಂಗ್ಲಾದಲ್ಲಿ (ದರ್ಗಾ) ಮೂಲ ಅನು ಭವ ಮಂಟಪವಿದೆ. ಅದನ್ನು ವಶಪಡಿಸಿಕೊಳ್ಳಬೇಕು’ ಎಂದು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಒತ್ತಾಯಿಸಿರುವ ಮಠಾಧೀಶರ ನಿಯೋಗವು ಈಗ ವಿವಿಧ ಹಂತದ ಹೋರಾಟಕ್ಕೆ ಸಿದ್ಧತೆ ನಡೆಸಿದೆ.

ಬಸವಕಲ್ಯಾಣದಲ್ಲಿ ಭಾನುವಾರ (ಜೂನ್ 12) ‘ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ’ ಕಾರ್ಯಕ್ರಮ ಹಮ್ಮಿಕೊಂಡಿರುವ ಮಠಾಧೀಶರು, ಸರ್ಕಾರದ ಮೇಲೆ ಒತ್ತಡ ಹೇರಲು ಪ್ರಯತ್ನ ನಡೆಸಿದ್ದಾರೆ.

‘ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧೆಡೆಯಿಂದ ಭಾಗವಹಿಸುವ 400ಕ್ಕೂ ಹೆಚ್ಚು ಮಠಾಧೀಶರು ಮೂಲ ಅನುಭವ ಮಂಟಪದ ರಕ್ಷಣೆಗೆ ಒತ್ತಾಯಿಸುವರು. ಪೀರಪಾಷಾ ಬಂಗ್ಲಾದಲ್ಲಿ ಅನುಭವ ಮಂಟಪದ ಕುರುಹುಗಳು ಪತ್ತೆಯಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರವು ಸಂಶೋಧನೆ ನಡೆಸಲು ಕೋರಲಾಗುವುದು‌’ ಎಂದು ತಡೋಳಾ ರಾಜೇಶ್ವರ ಶಿವಾಚಾರ್ಯರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪೀರಪಾಷಾ ಬಂಗ್ಲಾದ ಇತಿಹಾಸ 1650 ರಿಂದ 1730ರವರೆಗೆ ಇದೆ. ಅದಕ್ಕೂ ಮುನ್ನ ಅಲ್ಲಿ ಕಟ್ಟಡವಿತ್ತು ಎಂದು ಇತಿಹಾಸ ಹೇಳುತ್ತದೆ. ಶಾಸ್ತ್ರೀಯವಾಗಿ ಅದು ಬಸವಣ್ಣನವರ ಭವನ. ಅದರ ಪ್ರಸ್ತಾಪ ಶಿವಪುರಾಣ, ಪ್ರಭುಲಿಂಗ ಲೀಲೆ, ಶರಣರ ಕಾಲಜ್ಞಾನದಲ್ಲಿ ಬರುತ್ತದೆ. ಸದ್ಯಕ್ಕೆ ಅದು ವೈಯಕ್ತಿಕ ಆಸ್ತಿಯಾಗಿದೆ. ಅದನ್ನು ಕಾನೂನಾತ್ಮಕವಾಗಿ ಸರ್ಕಾರದ ವಶಕ್ಕೆ ತೆಗೆದುಕೊಳ್ಳುವುದು ಅಥವಾ ಬಿಡುವುದು ಸರ್ಕಾರಕ್ಕೆ ಬಿಟ್ಟದ್ದು. ಈ ಸ್ಥಳವುಮೂಲ ಅನುಭವ ಮಂಟಪ ಎಂಬುದನ್ನು ನಾವು ಸರ್ಕಾರಕ್ಕೆ ಮನಗಾಣಿಸುತ್ತಿದ್ದೇವೆ. ಜನರ ಬೇಡಿಕೆಯಂತೆ ಸತ್ಯಾನ್ವೇಷಣೆಗೆ ಆಗ್ರಹಿಸುತ್ತಿದ್ದೇವೆ’ ಎಂದರು.

‘ನೂತನವಾಗಿ ನಿರ್ಮಿಸಲಾಗುತ್ತಿರುವ ಅನುಭವ ಮಂಟಪಕ್ಕೆ ಹಿನ್ನಡೆ ಆಗಬಹುದು ಎಂಬ ಕಾರಣ ಕ್ಕೆ ಬಸವಲಿಂಗ ಪಟ್ಟದ್ದೇವರು ಪೀರಪಾಷಾ ದಲ್ಲಿ ಮಂಟಪದ ಸಾಕ್ಷ್ಯ ಇಲ್ಲ ಎಂದು ಹೇಳುತ್ತಿರಬಹುದು. ಆದರೆ, ಅವರೂ ಸಂಶೋಧನೆಗೆ ಒತ್ತು ನೀಡಿದ್ದಾರೆ. ಹಿರಿಯರಾದ ಅವರನ್ನು ಈ ವಿವಾದಕ್ಕೆ ಎಳೆದು ತರುವುದು ಬೇಡ’ ಎಂದರು.

‘ಅನುಭವ ಮಂಟಪದ ಸಾಕ್ಷ್ಯಗಳಿಲ್ಲ‌’
‘ಪೀರ್ ಪಾಶಾ ದರ್ಗಾದಲ್ಲಿ ಅನುಭವ ಮಂಟಪವಿದ್ದ ಬಗ್ಗೆ ಸಾಕ್ಷ್ಯಗಳಿಲ್ಲ. ಬಸವಣ್ಣನವರ ಬಗ್ಗೆ ಇರುವ ಹತ್ತಾರು ಗ್ರಂಥಗಳಲ್ಲೂ ಇದರ ಉಲ್ಲೇಖವಿಲ್ಲ. ಆದರೆ, ಇತಿಹಾಸಕಾರರು ಸೂಕ್ತ ಸಂಶೋಧನೆ ಮಾಡಿದಲ್ಲಿ ಸತ್ಯಾಂಶ ಬೆಳಕಿಗೆ ಬರಬಹುದು’ ಎಂದು ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ತಿಳಿಸಿದ್ದಾರೆ.

‘ಬಸವಣ್ಣನವರು ಸ್ಥಾವರಕ್ಕೆ ಮಹತ್ವ ಕೊಟ್ಟಿರಲಿಲ್ಲ. ಆದ್ದರಿಂದ ಅವರ ಅನುಭವ ಮಂಟಪ ಬಹುತೇಕ ಸಾಧಾರಣ ಕಟ್ಟಡ ಅಥವಾ ಹೆಂಚಿನ ಮನೆ ಇದ್ದಿರಬಹುದು. ನಂತರದಲ್ಲಿ ಅದು ನಶಿಸಿರಲೂಬಹುದು’ ಎಂದು ತಿಳಿಸಿದ್ದಾರೆ.

‘ದೇಗುಲದ ಕುರುಹು ಅನುಭವ ಮಂಟಪ ಅಲ್ಲ’
‘ಪೀರಪಾಷಾ ಬಂ‌ಗ್ಲಾ ಹಿಂದೆ ಹಿಂದೂ ದೇವಾಲಯದ ಸಂಕೀರ್ಣವಾಗಿತ್ತು. ಈಗಲೂ ಅಲ್ಲಲ್ಲಿ ದೇವಾಲಯದ ಭಾಗಗಳನ್ನು ಕಾಣಬಹುದು. ಆದರೆ, ಇದನ್ನೇ ಆಧಾರವಾಗಿ ಇಟ್ಟುಕೊಂಡು ಇಲ್ಲಿ ಅನುಭವ ಮಂಟಪ ಇತ್ತು ಎಂಬು ದನ್ನು ಹೇಳಲಾಗದು’ ಎಂದು ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ವಿಶೇಷ ಅಧಿಕಾರಿಯಾಗಿದ್ದ ಎಸ್.ಎಂ.ಜಾಮದಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಂಗ್ಲಾ ಸ್ಥಳವನ್ನು ಖಬರಸ್ತಾನ್‌ ಮಾಡಿದವರು ನವಾಬ್ ಮನೆತನದವರು. ಅಲ್ಲಿ ಅವರ ಕುಟುಂಬಸ್ಥರ 100 ಸಮಾಧಿಗಳಿವೆ. ಎಂಟು ವರ್ಷ ವಿಶೇಷ ಅಧಿಕಾರಿಯಾಗಿ ಅಲ್ಲಿ ಸಾಕಷ್ಟು ಅಧ್ಯಯನ ಮಾಡಿದ್ದೇನೆ’ ಎಂದರು. ‘ಅನುಭವ ಮಂಟಪದ ವಿಷಯವನ್ನೇ ಪ್ರಧಾನ ವಾಗಿ ಇಟ್ಟುಕೊಂಡು ಅನಗತ್ಯ ವಿವಾದ ಮಾಡುವುದು ಸರಿಯಲ್ಲ. ಒಟ್ಟಾರೆ ಅವರ ಉದ್ದೇಶವೇನು ಎಂಬುದು ಸ್ಪಷ್ಟವಾಗಿ ಅರ್ಥವಾಗುತ್ತಿಲ್ಲ. ಎಲ್ಲರ ಹಿತದೃಷ್ಟಿಯಿಂದ ಇದು ಒಳ್ಳೆಯದಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT