ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ: ಆಸ್ತಿ ತೆರಿಗೆ ವಸೂಲಿಗೆ ‘ಖಾತಾ ಮೇಳ’

2021–22ನೇ ಸಾಲಿನಲ್ಲಿ ಇದುವರೆಗೆ ₹ 1,563.78 ಕೋಟಿ ಆಸ್ತಿ ತೆರಿಗೆ ಸಂಗ್ರಹ
Last Updated 28 ಜೂನ್ 2021, 20:57 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯ ಎಲ್ಲ ಎಂಟು ವಲಯಗಳಲ್ಲಿ ‘ಖಾತಾ ಮೇಳ' ಏರ್ಪಡಿಸುವ ಮೂಲಕ ತೆರಿಗೆ ವ್ಯಾಪ್ತಿಗೆ ಇನ್ನಷ್ಟು ಆಸ್ತಿಗಳನ್ನು ಸೇರ್ಪಡೆ ಮಾಡಬೇಕು. ಆಸ್ತಿ ತೆರಿಗೆ ಸಂಗ್ರಹದ ಗುರಿ ಸಾಧಿಸಲು ಕ್ರಮವಹಿಸಬೇಕು’ ಎಂದು ಪಾಲಿಕೆಯ ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಕಂದಾಯ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿಯ ಕಂದಾಯ ವಿಭಾಗದ ಪ್ರಗತಿ ಪರಿಶೀಲನಾ ಸಭೆಯನ್ನು ಸೋಮವಾರ ನಡೆಸಿದ ಮುಖ್ಯ ಆಯುಕ್ತರು, ‘ಬಿಬಿಎಂಪಿಯ ಅಭಿವೃದ್ಧಿಯಲ್ಲಿ ಕಂದಾಯ ವಿಭಾಗದ ಪಾತ್ರ ಬಹುಮುಖ್ಯ. ಕಂದಾಯ ಅಧಿಕಾರಿಗಳು ಆಸ್ತಿ ತೆರಿಗೆ ಬಾಕಿ ವಸೂಲಾತಿಗೆ ಆದ್ಯತೆ ನೀಡಬೇಕು. ತೆರಿಗೆ ಸೋರಿಕೆ ತಡೆಯಲು ಕ್ರಮ ವಹಿಸಬೇಕು. ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಸ್ವತ್ತುಗಳನ್ನು ಪತ್ತೆ ಹಚ್ಚಿ ಅವುಗಳಿಂದಲೂ ತೆರಿಗೆ ಸಂಗ್ರಹಿಸುವತ್ತ ವಿಶೇಷ ಗಮನ ವಹಿಸಬೇಕು’ ಎಂದು ಸಲಹೆ ನೀಡಿದರು.

‘2021–22ನೇ ಆರ್ಥಿಕ ವರ್ಷದಲ್ಲಿ ಬಿಬಿಎಂಪಿಯು ಇದುವರೆಗೆ ₹ 1,563.78 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ. ಕಳೆದ ವರ್ಷದ ಸಾಧನೆಗೆ ಹೋಲಿಸಿದರೆ, ಈ ಬಾರಿಯ ಸಾಧನೆ ತೃಪ್ತಿಕರವಾಗಿಲ್ಲ. ಸದ್ಯ ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ. ಎಲ್ಲ ಕಂದಾಯ ಅಧಿಕಾರಿಗಳು ಆಸ್ತಿ ತೆರಿಗೆ ವಸೂಲಾತಿ ಬಗ್ಗೆ ಹೆಚ್ಚು ಗಮನವರಿಸಬೇಕು’ ಎಂದು ಸೂಚನೆ ನೀಡಿದರು.

‘ಅನೇಕ ಆಸ್ತಿ ಮಾಲೀಕರು ಹಲವು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ಇಂತಹ ಸ್ವತ್ತುಗಳ ತೆರಿಗೆ ವಸೂಲಿ ಮಾಡಲು ಸೂಕ್ತ ಕ್ರಮಕೈಗೊಳ್ಳಬೇಕು. ಈ ಸಂಬಂಧಎಲ್ಲ ಸಹಾಯಕ ಕಂದಾಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅಧಿಕ ತೆರಿಗೆ ಬಾಕಿ ಉಳಿಸಿಕೊಂಡ ಸುಸ್ತಿದಾರರ ಪಟ್ಟಿಯನ್ನು ಸಿದ್ಧಪಡಿಸಬೇಕು. ಅದರ ಅನುಸಾರ ನೋಟೀಸ್ ಜಾರಿಗೊಳಿಸಿ ಬಾಕಿ ವಸೂಲಾತಿಗೆ ಕ್ರಮಕೈಗೊಳ್ಳಬೇಕು. ಹೊಸದಾಗಿ ನಿರ್ಮಾಣ ಮಾಡುತ್ತಿರುವ ಕಟ್ಟಡಗಳನ್ನೂ ತೆರಿಗೆ ವ್ಯಾಪ್ತಿಗೆ ತರುವ ಮೂಲಕ ಸಂಪನ್ಮೂಲ ಕ್ರೋಡೀಕರಿಸಬೇಕು’ ಎಂದು ತಿಳಿಸಿದರು.

ವಿಶೇಷ ಆಯುಕ್ತ (ಕಂದಾಯ) ಎಸ್‌. ಬಸವರಾಜು, ‘ಪಾಲಿಕೆ ವ್ಯಾಪ್ತಿಯಲ್ಲಿ 2021–21ನೇ ಸಾಲಿನ ಆಸ್ತಿ ತೆರಿಗೆ ಪಾವತಿ ಮಾಡದಿರುವವರಿಗೂ ಡಿಮಾಂಡ್ ನೋಟೀಸ್ ನೀಡಿ. ಹಲವು ವರ್ಷಗಳಿಂದ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟೀಸ್ ಜಾರಿಗೊಳಿಸಿ. ಆಗ ಮಾತ್ರ ತ್ವರಿತವಾಗಿ ಆಸ್ತಿ ತೆರಿಗೆ ಸಂಗ್ರಹ ಮಾಡಲು ಸಾಧ್ಯ’ ಎಂದು ಸೂಚನೆ ನೀಡಿದರು.

’ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಸ್ವತ್ತುಗಳನ್ನು ಪತ್ತೆ ಹಚ್ಚುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ. ಇಂತಹ ಸ್ವತ್ತುಗಳನ್ನು ತೆರಿಗೆ ವ್ಯಾಪ್ತಿಯೊಳಗೆ ತರುವುದಕ್ಕೆ ಆದ್ಯತೆ ನೀಡಬೇಕು. ತೆರಿಗೆ ಕಟ್ಟಡದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಹಿಂದೇಟು ಹಾಕುವ ಅಗತ್ಯವಿಲ್ಲ. ಈ ಆರ್ಥಿಕ ವರ್ಷದಲ್ಲಿ ಆಸ್ತಿ ತೆರಿಗೆ ಸಂಗ್ರಹದ ಗುರಿಯನ್ನು ತಲುಪಲೇಬೇಕು’ ಎಂದು ತಾಕೀತು ಮಾಡಿದರು.

‘ಶೇ 5ರಷ್ಟು ರಿಯಾಯಿತಿ– ನಾಳೆ ಕೊನೆ ದಿನ’:ನಗರದಲ್ಲಿ ವರ್ಷದ ಪೂರ್ತಿ ಆಸ್ತಿ ತೆರಿಗೆಯನ್ನು ಒಂದೇ ಕಂತಿನಲ್ಲಿ ಪಾವತಿಸುವವರಿಗೆ ಶೇ 5 ರಷ್ಟು ರಿಯಾಯಿತಿ ನೀಡುವ ಗಡುವು ಇದೇ 30ಕ್ಕೆ ಕೊನೆಯಾಗಲಿದೆ.

ಪ್ರತಿ ಆರ್ಥಿಕ ವರ್ಷದಲ್ಲೂ ಏಪ್ರಿಲ್‌ ತಿಂಗಳಿನಲ್ಲಿ ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ಪಾವತಿ ಮಾಡುವವರಿಗೆ ಮಾತ್ರ ಶೇ 5ರಷ್ಟು ರಿಯಾಯಿತಿ ನೀಡಲಾಗುತ್ತದೆ. ಈ ಬಾರಿ ಏಪ್ರಿಲ್‌ ಮತ್ತು ಮೇ ತಿಂಗಳುಗಳ ಬಹುತೇಕ ದಿನಗಳಲ್ಲಿ ಕೋವಿಡ್‌ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಜಾರಿಯಲ್ಲಿತ್ತು. ಹಾಗಾಗಿ ಆಸ್ತಿ ತೆರಿಗೆ ಪಾವತಿದಾರರಿಗೆ ನೀಡುವ ರಿಯಾಯಿತಿಯನ್ನು ಜೂನ್‌ 30ರವರೆಗೆ ಬಿಬಿಎಂಪಿ ವಿಸ್ತರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT