ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ಭ್ರಷ್ಟಾಚಾರ: ಸಿದ್ದರಾಮಯ್ಯ– ಬಿಎಸ್‌ವೈ ಬೈದಾಟ

ವಿಜಯೇಂದ್ರ ವಿರುದ್ಧ ಆರೋಪ
Last Updated 26 ಸೆಪ್ಟೆಂಬರ್ 2020, 20:13 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ‘ನನ್ನ ಪುತ್ರ ವಿಜಯೇಂದ್ರನ ಮೇಲೆ ಮಾಡಿರುವ ಆರೋಪ ಸಾಬೀತುಪಡಿಸುವ ಜವಾಬ್ದಾರಿ ನಿಮ್ಮದು. ಸಿಬಿಐಗಾದರೂ ಕೊಡಿ,ಲೋಕಾಯುಕ್ತಕ್ಕಾದರೂ ಹೋಗಿ. ಸತ್ಯಾಂಶ ಹೊರಬರಬೇಕು. ಆರೋಪ ನಿಜವಾದರೆ ನಾನು ರಾಜೀನಾಮೆ ಕೊಡುತ್ತೇನೆ’ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸವಾಲು ಹಾಕಿದರು.

ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಉತ್ತರ ನೀಡಿದ ಯಡಿಯೂರಪ್ಪ, ‘ಬಿಡಿಎ ಗೃಹ ನಿರ್ಮಾಣ ಯೋಜನೆಯ ಟೆಂಡರ್‌ ನನ್ನ ಕಾಲದಲ್ಲಿ ಆಗಿಲ್ಲ. ನಿಮ್ಮ ಕಾಲದಲ್ಲಿ ಆಗಿದ್ದು. ಅದಕ್ಕೂ ನಮಗೂ ಸಂಬಂಧ ಇಲ್ಲ’ ಎಂದರು.

ಅದಕ್ಕೂ ಮೊದಲು ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡಿದ ಸಿದ್ದರಾಮಯ್ಯ, ಬಿಡಿಎ ಟೆಂಡರ್‌ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣವನ್ನು ಪ್ರಸ್ತಾಪಿಸಿದರು. ಇದು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಮಧ್ಯೆ ಆರೋಪ– ಪ್ರತ್ಯಾರೋಪಕ್ಕೆ ಎಡೆ ಮಾಡಿಕೊಟ್ಟಿತು.

ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಮಧ್ಯೆ ಒಂದು ಹಂತದಲ್ಲಿ ಮಾತಿನ ಚಕಮಕಿಯೇ ನಡೆಯಿತು. ಇಬ್ಬರೂ ಏಕವಚನದಲ್ಲಿ ಬೈದಾಡಿಕೊಂಡರು.

‘ಈ ರೀತಿ ಆರೋಪ ಮಾಡುವ ನಿನಗೆ ತಲೆ ಕಟ್ಟಿದೆಯೇನೊ’ ಎಂದು ಯಡಿಯೂರಪ್ಪ ಪ್ರಶ್ನಿಸಿದಾಗ, ನಿನಗೆ ತಲೆಕೆಟ್ಟಿದೆಯೇ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಆಗ, ಕಾನೂನು ಸಚಿವ ಮಾಧುಸ್ವಾಮಿ, ‘ಇಡೀ ಕೃತ್ಯದಲ್ಲಿ ನಮ್ಮ ಸರ್ಕಾರದ ಪಾಲು ಇಲ್ಲ. ಬಿಡಿಎ ಸಂಬಂಧಪಟ್ಟಂತೆ ಗೃಹ ನಿರ್ಮಾಣ ಯೋಜನೆಯ ಟೆಂಡರ್‌, ಎಲ್ಲವೂ ನೀವು ಮಂತ್ರಿ ಆಗಿದ್ದಾಗ ನಡೆದಿರುವುದು’ ಎಂದು ಕಾಂಗ್ರೆಸ್‌ನ ಕೆ.ಜೆ ಜಾರ್ಜ್ ಅವರನ್ನು ಉದ್ದೇಶಿಸಿ ಹರಿಹಾಯ್ದರು.

ಮತ್ತೆ ವಾಗ್ವಾದ ನಡೆದಾಗ, ‘ನಿನ್ನ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ’ ಎಂದು ಯಡಿಯೂರಪ್ಪ ಏರುಧ್ವನಿಯಲ್ಲಿ ಹೇಳಿದರು. ‘ನೀನು ಮೊದಲು ರಾಜೀನಾಮೆ ಕೊಡಬೇಕು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಿಂದ ತನಿಖೆ ನಡೆಸಬೇಕು’ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

'ವಿಶ್ವಾಸ’ ಮತ ಗೆದ್ದ ಯಡಿಯೂರಪ್ಪ: ಕಾಂಗ್ರೆಸ್‌ ಮಂಡಿಸಿದ ‘ಅವಿಶ್ವಾಸ’ದ ಮೇಲೆ ನಡೆದ ಚರ್ಚೆಯ ಬಳಿಕ ಅದನ್ನು ಧ್ವನಿಮತಕ್ಕೆ ಹಾಕಿದಾಗ, ಯಡಿಯೂರಪ್ಪ ಅವರು ವಿಶ್ವಾಸ ಮತದಲ್ಲಿ ಗೆಲುವು ಪಡೆದರು. ‘ಮುಂಬರುವ ಉಪ ಚುನಾವಣೆಯಲ್ಲಿ ನೀವು ಇದೇ ಆರೋಪ‌ ಮಾಡಿ. ನಾವು ಗೆದ್ದು ಬರುತ್ತೇವೆ.‌ ಇನ್ನು ಹತ್ತು ವರ್ಷ ನಿಮಗೆ ಪ್ರತಿಪಕ್ಷ ಕಾಯಂ’ ಎಂದೂ ಯಡಿಯೂರಪ್ಪ ಹೇಳಿದರು.

***

ವಿಧಾನ ಪರಿಷತ್ ಕಲಾಪ


ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಮಸೂದೆ ಬಾಕಿ
ಬೆಂಗಳೂರು:
ಭೂ ಸುಧಾರಣೆ ತಿದ್ದುಪಡಿ ಮಸೂದೆ ಮತ್ತು ಕೃಷಿ ತ್ಪನ್ನಗಳ ಮಾರುಕಟ್ಟೆ ವ್ಯವಹಾರ ನಿಯಂತ್ರಣ (ತಿದ್ದುಪಡಿ) ಮಸೂದೆಗಳ ಅಂಗೀಕಾರ ಬಾಕಿ ಇರುವಾಗಲೇ ಶನಿವಾರ ತಡರಾತ್ರಿ ವಿಧಾನ ಪರಿಷತ್ ಕಲಾಪ ಅಂತ್ಯಗೊಂಡಿತು.

ಕಂದಾಯ ಸಚಿವ ಆರ್.ಅಶೋಕ ಅವರು ಭೂ ಸುಧಾರಣಾ ತಿದ್ದುಪಡಿ ಮಸೂದೆಯನ್ನು ಅಂಗೀಕಾರಕ್ಕಾಗಿ ರಾತ್ರಿ 11.45ಕ್ಕೆ ಮಂಡಿಸಿದರು. ವಿಧಾನಸಭೆಯ ಅಂಗೀಕಾರ ಪಡೆದಿರುವ ಮಸೂದೆಯನ್ನು ಪರಿಷತ್ ನಲ್ಲಿ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ವಿರೋಧಿಸಿದವು. ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಮತ್ತು ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಅವರು ಮಸೂದೆಯನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದರು.

ತಡರಾತ್ರಿ 1 ಗಂಟೆಯಾದರೂ ಚರ್ಚೆ ನಡೆಯುತ್ತಲೇ ಇತ್ತು. 1 ಗಂಟೆ ಆಗುತ್ತಿದ್ದಂತೆ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ ಅವರು ಸದನದ ಕಲಾಪವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡಿದರು. ರಾಷ್ಟ್ರಗೀತೆಯೊಂದಿಗೆ ಕಲಾಪ‌ ಅಂತ್ಯಗೊಂಡಿತು.

ಕೃಷಿಕರಲ್ಲದವರಿಗೂ ಕೃಷಿ ಜಮೀನು ಖರೀದಿಸಲು ಅವಕಾಶ ಕಲ್ಪಿಸುವ ಮತ್ತು ಕೃಷಿ ಜಮೀನು ಹಿಡುವಳಿಯ ಪ್ರಮಾಣದ ಮಿತಿ ಹೆಚ್ಚಿಸುವ ಮಸೂದೆಗೆ ಅಂಗೀಕಾರ ದೊರೆಯಲಿಲ್ಲ.

ಕೃಷಿ ಉತ್ಪನ್ನಗಳ ಮುಕ್ತ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವ ಎಪಿಎಂಸಿ ತಿದ್ದುಪಡಿ ಮಸೂದೆಗೂ ವಿಧಾನ ಪರಿಷತ್ ಅಂಗೀಕಾರ ದೊರೆಯಲಿಲ್ಲ. ಈ ಮಸೂದೆಗೂ ವಿಧಾನಸಭೆಯ ಅಂಗೀಕಾರ ದೊರೆತಿದ್ದು, ಪರಿಷತ್ ನಲ್ಲಿ ಶನಿವಾರವೇ ಒಪ್ಪಿಗೆ ಪಡೆಯಲು ಸರ್ಕಾರ ನಿರ್ಧರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT