ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವಿ ಕಾಲೇಜುಗಳಲ್ಲೂ ಬಿ.ಇಡಿ: 4 ವರ್ಷಗಳ ಕೋರ್ಸ್‌ಗೆ ಎನ್‌ಸಿಇಆರ್‌ಟಿ ಶಿಫಾರಸು

Published 29 ಜನವರಿ 2024, 23:30 IST
Last Updated 29 ಜನವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಮುಂದಿನ ಶೈಕ್ಷಣಿಕ ಸಾಲಿನಿಂದ ನಾಲ್ಕು ವರ್ಷಗಳ ಬಿ.ಇಡಿ ಕೋರ್ಸ್‌ (ಸಂಯೋಜಿತ ಪದವಿ) ಅಳವಡಿಸಿಕೊಳ್ಳಲು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್‌ (ಎನ್‌ಸಿಇಆರ್‌ಟಿ) ಶಿಫಾರಸು ಮಾಡಿದ್ದು, ಇತರೆ ಪದವಿ ಕಾಲೇಜುಗಳಲ್ಲೂ ಕೋರ್ಸ್‌ ಆರಂಭಿಸಲು ಅವಕಾಶ ನೀಡಿದೆ.

ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಜತೆ ಭಾರತದ ವಿದ್ಯಾರ್ಥಿಗಳು ಸ್ಪರ್ಧೆ ನಡೆಸಲು ಗುಣಮಟ್ಟದ ಶಿಕ್ಷಕರನ್ನು ಸಿದ್ಧಗೊಳಿಸಬೇಕಿದೆ. ಶಿಕ್ಷಕರಾಗುವವರಿಗೆ ಪದವಿ ಹಂತದಲ್ಲೇ ಬೋಧನಾ ತರಬೇತಿಯ ಅಗತ್ಯವಿದೆ. ಪಿಯು ಉತ್ತೀರ್ಣರಾದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸೆಳೆದು ಭವಿಷ್ಯದ ಅತ್ಯುತ್ತಮ ಶಿಕ್ಷಕರನ್ನಾಗಿ ರೂಪಿಸಲು ನಾಲ್ಕು ವರ್ಷಗಳ ಬಿ.ಇಡಿ ಕೋರ್ಸ್‌ ನೆರವಾಗಲಿದೆ ಎಂದು ಎನ್‌ಸಿಇಆರ್‌ಟಿ ತನ್ನ ಶಿಫಾರಸಿನಲ್ಲಿ ಉಲ್ಲೇಖಿಸಿದೆ.

ಕರ್ನಾಟಕದಲ್ಲಿ ಮೊದಲು ಒಂದು ವರ್ಷದ ಬಿ.ಇಡಿ ಕೋರ್ಸ್‌ ಇತ್ತು. ಕಲಾ ಮತ್ತು ವಿಜ್ಞಾನ ವಿಷಯಗಳಲ್ಲಿ ಪದವಿ ‍ಪೂರೈಸಿದ ವಿದ್ಯಾರ್ಥಿಗಳು ಪ್ರೌಢಶಾಲಾ ಹಂತದವರೆಗೆ ಶಿಕ್ಷಕರಾಗಿ ಕೆಲಸ ಮಾಡಲು ಅರ್ಹತೆ ಪಡೆಯುತ್ತಿದ್ದರು. ಪದವಿಪೂರ್ವ ಉಪನ್ಯಾಸಕರಿಗೆ ಬಿ.ಇಡಿ ಕಡ್ಡಾಯ ಮಾಡಿದ ನಂತರ ವಾಣಿಜ್ಯ ಪದವೀಧರರಿಗೂ ಅವಕಾಶ ನೀಡಲಾಯಿತು. ಎನ್‌ಸಿಇಆರ್‌ಟಿ ಶಿಫಾರಸಿನ ಅನ್ವಯ 2016–17ನೇ ಸಾಲಿನಿಂದ ಎರಡು ವರ್ಷಗಳಿಗೆ ನಿಗದಿ ಮಾಡಲಾಗಿತ್ತು.

ಇತರೆ ಶಿಕ್ಷಣ ಸಂಸ್ಥೆಗಳಿಗೂ ಅವಕಾಶ: ಖಾಸಗಿ, ಅನುದಾನಿತ ಹಾಗೂ ಸರ್ಕಾರಿ ಕಾಲೇಜುಗಳೂ ಸೇರಿ ಎಲ್ಲ ಶಿಕ್ಷಣ ಮಹಾವಿದ್ಯಾಲಯಗಳಲ್ಲೂ ಎರಡು ವರ್ಷದ ಕೋರ್ಸ್‌ ಅಳವಡಿಸಿಕೊಳ್ಳಲಾಗಿದೆ. ಈ  ಕಾಲೇಜುಗಳು ಎನ್‌ಸಿಆರ್‌ಟಿ ಶಿಫಾರಸಿನ ಅನ್ವಯ ನಾಲ್ಕು ವರ್ಷಗಳ ಬಿ.ಇಡಿ ಕೋರ್ಸ್ ಅಳವಡಿಸಿಕೊಳ್ಳಬಹುದು. ಇಲ್ಲವೇ ಹಿಂದಿನಂತೆ ಎರಡು ವರ್ಷದ ಕೋರ್ಸ್‌ ಮುಂದುವರಿಸಬಹುದು. ಅಲ್ಲದೇ, ಬಿ.ಎ, ಬಿ.ಎಸ್‌ಸಿ, ಬಿ.ಕಾಂ ಸೇರಿದಂತೆ ವಿವಿಧ ಪದವಿ ಪದವಿ ಶಿಕ್ಷಣ ನೀಡುತ್ತಿರುವ ಇತರೆ ಶಿಕ್ಷಣ ಸಂಸ್ಥೆಗಳೂ ಹೊಸದಾಗಿ ನಾಲ್ಕು ವರ್ಷಗಳ ಬಿ.ಇಡಿ ಕೋರ್ಸ್‌ ಆರಂಭಿಸಲು ಅನುಮತಿ ಪಡೆಯಬಹುದು. ಈಗಾಗಲೇ ಎಂಟು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಸಂಯೋಜಿತ ಬಿ.ಇಡಿ ಪದವಿ ಆರಂಭಿಸಲು ಬೇಡಿಕೆ ಸಲ್ಲಿಸಿವೆ. 

‘ಸಂಯೋಜಿತ ಶಿಕ್ಷಕರ ಶಿಕ್ಷಣ ಮತ್ತು ತರಬೇತಿ ಯೋಜನೆ ಅಡಿ ನಾಲ್ಕು ವರ್ಷಗಳ ಬಿ.ಇಡಿ ಪದವಿ ನಿಗದಿ ಮಾಡಲಾಗಿದೆ. ಪಿಯು ನಂತರ ಎಂಜಿನಿಯರಿಂಗ್‌, ವೈದ್ಯಕೀಯ ಸೇರಿದಂತೆ ವೃತ್ತಿಪರ ಕೋರ್ಸ್‌ ಆಯ್ಕೆ ಮಾಡಿಕೊಳ್ಳುವ ಮಕ್ಕಳೂ ಬಿ.ಇಡಿ ಪದವಿ ಮಾಡಬಹುದು. ಆ ಮೂಲಕ ಪ್ರತಿಭಾವಂತರನ್ನು ಶಿಕ್ಷಣ ಕ್ಷೇತ್ರದತ್ತ ಸೆಳೆಯುವ ಗುರಿ ಹೊಂದಲಾಗಿದೆ’ ಎನ್ನುತ್ತಾರೆ ಎನ್‌ಸಿಇಆರ್‌ಟಿ ಅಧಿಕಾರಿಗಳು.

ಮತ್ತೊಂದು ಬಾರಿ ಅವಕಾಶಕ್ಕೆ ಮನವಿ

ಪಿಯು ಕಾಲೇಜುಗಳ ಉಪನ್ಯಾಸಕರಿಗೆ ಬಿ.ಇಡಿ ಕೋರ್ಸ್‌ ಮುಗಿಸಲು ಇನ್ನೂಂದು ಬಾರಿ ವೇತನಸಹಿತ ರಜೆಯ ಸೌಲಭ್ಯ ಕಲ್ಪಿಸಬೇಕು ಎಂದು ರಾಜ್ಯ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಸರ್ಕಾರಕ್ಕೆ ಪತ್ರ ಬರೆದಿದೆ. 

ರಾಜ್ಯದ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ 2008ರಿಂದ ಬಿ.ಇಡಿ ಕಡ್ಡಾಯಗೊಳಿಸಲಾಗಿದೆ. ಅಧಿಸೂಚನೆಯ ನಂತರ ನೇಮಕಾತಿ ಹೊಂದಿದ ಉಪನ್ಯಾಸಕರಿಗೆ ಒಂದು ಬಾರಿ ವೇತನಸಹಿತ ರಜೆ, ಮತ್ತೊಂದು ಬಾರಿ ಶಿಷ್ಯ ವೇತನ ನೀಡಿ ಬಿ.ಇಡಿಗೆ ಅವಕಾಶ ನೀಡಲಾಗಿತ್ತು. ಈಗ ನೇಮಕಾತಿ ಹೊಂದಿ 10 ವರ್ಷಗಳು ಪೂರೈಸಿದ್ದು, ಬಿ.ಇಡಿ ಮಾಡದೇ ಇರುವವರಿಗೆ ಕಾಲಮಿತಿ ವೇತನ ಬಡ್ತಿ ತಡೆಹಿಡಿಯಲಾಗಿದೆ. ಅಂಥವರಿಗೆ ಇನ್ನೊಂದು ಅವಕಾಶ ನೀಡಬೇಕು ಎಂದು ಸಂಘದ ಅಧ್ಯಕ್ಷ ನಿಂಗೇಗೌಡ ಎ.ಎಚ್‌ ಸರ್ಕಾರಕ್ಕೆ ಮನವಿ ಮಾಡಿದ್ದಾರೆ .

ಎನ್‌ಇಪಿಯಲ್ಲಿನ ನಾಲ್ಕು ವರ್ಷಗಳ ಪದವಿ ರದ್ದತಿ/ಮುಂದುವರಿಕೆ ಕುರಿತು ಎಸ್‌ಇಪಿ ಆಯೋಗ ಪರಿಶೀಲಿಸುತ್ತಿದೆ. ಬಿ.ಇಡಿ ಕುರಿತ ಎನ್‌ಸಿಇಆರ್‌ಟಿ ಶಿಫಾರಸನ್ನೂ ಪರಿಶೀಲಿಸಲಾಗುವುದು.
-ಡಾ.ಎಂ.ಸಿ.ಸುಧಾಕರ್, ಉನ್ನತ ಶಿಕ್ಷಣ ಸಚಿವ
ಬಿ.ಇಡಿ ಶಿಕ್ಷಣ ನೀಡುತ್ತಿರುವ ರಾಜ್ಯದ ಶೇ 50ರಷ್ಟು ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ. ಸರ್ಕಾರಿ ಕೋಟಾದ ಸೀಟುಗಳೇ ಖಾಲಿ ಉಳಿಯುತ್ತಿವೆ. ಇನ್ನು ನಾಲ್ಕು ವರ್ಷಗಳ ಕೋರ್ಸ್‌ನಿಂದ ಹಲವು ಕಾಲೇಜುಗಳು ಬಾಗಿಲು ಮುಚ್ಚುತ್ತವೆ.
-ಎನ್‌.ಎಸ್‌.ರುದ್ರೇಶ್, ಉಪನ್ಯಾಸಕರು, ರಾಘವೇಂದ್ರ ಶಿಕ್ಷಣ ಮಹಾವಿದ್ಯಾಲಯ, ಮಲ್ಲಾಡಿಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT