ಬೆಳಗಾವಿ: ರಾಜ್ಯದಲ್ಲಿ ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗೆ ಓದುತ್ತಿರುವ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರ್ಗಗಳ ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನವನ್ನು ಮುಂದುವರಿಸಲಾಗುವುದು ಎಂದು ಸಮಾಜ ಕಲ್ಯಾಣ ಹಾಗೂ ಹಿಂದುಳಿದವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಶೂನ್ಯವೇಳೆಯಲ್ಲಿ ಜೆಡಿಎಸ್‌ನ ಮರಿತಿಬ್ಬೇಗೌಡ ಈ ವಿಷಯ ಕುರಿತು ಪ್ರಸ್ತಾಪಿಸಿದರು.
ಕೇಂದ್ರ ಸರ್ಕಾರವು 1–8ನೇ ತರಗತಿಯವರೆಗಿನ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ನಿಲ್ಲಿಸಿದೆ. ಆದರೆ, ನಮ್ಮ ರಾಜ್ಯದಲ್ಲಿ ರಾಜ್ಯ ಸರ್ಕಾರವೇ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ವೇತನವನ್ನು ನೀಡುತ್ತಿದ್ದು, ಅದನ್ನು ಮುಂದುವರಿಸಲಾಗುತ್ತದೆ ಎಂದರು.
ಹಿಂದುಳಿ ವರ್ಗಗಳ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನಕ್ಕೆ ಹಣಕಾಸಿನ ಕಾರಣಕ್ಕೆ ತಡೆಯಾಗಿತ್ತು. ಗೊಂದಲ ಬಗೆಹರಿಸಿದ್ದು, ಅದನ್ನು ಮುಂದುವರಿಸುತ್ತೇವೆ ಎಂದು ವಿವರಿಸಿದರು.
ಗುಂಡಿಗೆ ವೆಚ್ಚ– ‘ಪ್ರಜಾವಾಣಿ’ ವರದಿ ಪ್ರಸ್ತಾಪ:ಬೆಂಗಳೂರಿನ ರಸ್ತೆಗಳಿಗೆ ₹25 ಸಾವಿರ ಕೋಟಿ ವೆಚ್ಚ ಮಾಡಲಾಗಿದ್ದರೂ ಗುಂಡಿ ಮುಕ್ತವಾಗಿಸಲು ಸಾಧ್ಯವಾಗಿಲ್ಲ ಎಂದು ಕಾಂಗ್ರೆಸ್‌ನ ಯು.ಬಿ.ವೆಂಕಟೇಶ್ ಹೇಳಿದರು.
‘₹25 ಸಾವಿರ ಕೋಟಿ ರಸ್ತೆ–ಗುಂಡಿ ಪಾಲು’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ‘ಯಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ ಪ್ರಸ್ತಾಪಿಸಿದ ಅವರು, ಏಳು ವರ್ಷದಲ್ಲಿ ಇಷ್ಟೆಲ್ಲ ವೆಚ್ಚ ಮಾಡಿದ್ದರೂ ಗುಂಡಿ ಸಮಸ್ಯೆ ಪರಿಹಾರವಾಗಿಲ್ಲ’ ಎಂದು ದೂರಿದರು. ಶುಕ್ರವಾರ ಉತ್ತರ ಕೊಡಿಸುವುದಾಗಿ ಸಭಾಪತಿ ಹೇಳಿದರು.