ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೈ’ಗೆ ಬಳ್ಳಾರಿ ಕಬ್ಬಿಣದ ಕಡಲೆ

ರಾಮನಗರದಲ್ಲಿ ಬಿಜೆಪಿ ಆಪರೇಷನ್: ಶಿವಮೊಗ್ಗ ಅಭ್ಯರ್ಥಿಗಾಗಿ ತಡಕಾಟ
Last Updated 10 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಕಾಂಗ್ರೆಸ್‌ಗೆ ದಿನೇ ದಿನೇ ಕಬ್ಬಿಣದ ಕಡಲೆಯಾಗುತ್ತಿರುವ ಮಧ್ಯೆಯೇ, ರಾಮನಗರದ ಕಾಂಗ್ರೆಸ್‌ ಮುಖಂಡ ಸಿ.ಎಂ. ಲಿಂಗಪ್ಪ ಅವರ ಪುತ್ರನಿಗೆ ‘ಆಪರೇಷನ್’ ಮಾಡಿರುವ ಬಿಜೆಪಿ, ಚುನಾವಣಾ ರಾಜಕೀಯಕ್ಕೆ ರಂಗು ತಂದಿದೆ.

ಶಿವಮೊಗ್ಗದಲ್ಲಿ ಇರುವ ಹುರಿಯಾಳುಗಳು ಸ್ಪರ್ಧೆಗೆ ಹಿಂದೇಟು ಹಾಕುತ್ತಿದ್ದು, ಯಾರನ್ನು ಕಣಕ್ಕೆ ಇಳಿಸುವುದು ಎಂದು ಕಾಂಗ್ರೆಸ್‌ ನಾಯಕರು ತಲೆಬಿಸಿ ಮಾಡಿಕೊಂಡಿದ್ದಾರೆ. ಇತ್ತ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಷಯದಲ್ಲಿ ಜೆಡಿಎಸ್‌ ವರಿಷ್ಠರು ತಲೆ ಕೆಡಿಸಿಕೊಳ್ಳುವಷ್ಟು ರಾಜಕೀಯ ವಿದ್ಯಮಾನಗಳು ನಡೆಯುತ್ತಿವೆ.

ಬಳ್ಳಾರಿ ಜಿಲ್ಲೆಯ ಕಾಂಗ್ರೆಸ್‌ ಶಾಸಕರ ಮಧ್ಯೆ ಭಿನ್ನಮತ ಬಿರುಸುಗೊಂಡಿದೆ. ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಅವರ ಸಹೋದರ ವೆಂಕಟೇಶ್‌ ಪ್ರಸಾದ್‌ ಅವರನ್ನು ಕಣಕ್ಕಿಳಿಸುವ ಪ್ರಸ್ತಾವಕ್ಕೆ ಕೆಲವು ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಮಹಿಳಾ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕೆ ಇಳಿಸಿರುವುದರಿಂದ, ತಮ್ಮ ಪಕ್ಷದಿಂದಲೂ ಮಹಿಳೆಯೊಬ್ಬರನ್ನು ಕಣಕ್ಕೆ ಇಳಿಸಬೇಕು ಎಂದು ನಾಗೇಂದ್ರ ವಿರೋಧಿ ಬಣದಲ್ಲಿರುವ ಶಾಸಕರಾದ ಈ. ತುಕಾರಾಂ, ಪರಮೇಶ್ವರ ನಾಯ್ಕ, ಗಣೇಶ ಅವರು ಪಟ್ಟು ಹಿಡಿದಿದ್ದಾರೆ.

ಜಿ.ನಾಗಮಣಿ ಹೆಸರನ್ನು ಈ ಗುಂಪು ತೇಲಿಬಿಟ್ಟಿದೆ. ಬಳ್ಳಾರಿ ಜಿಲ್ಲೆಯ ನಾಯಕರು ಹಾಗೂ ಶಾಸಕರ ಜತೆ ಚರ್ಚಿಸಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೆಗಲಿಗೆ ಹೊರಿಸಿದ್ದಾರೆ. ಶಿವಕುಮಾರ್ ಅವರು ಬಳ್ಳಾರಿಯಲ್ಲಿ ಪಾರುಪತ್ಯ ನಡೆಸುತ್ತಿದ್ದಾರೆ, ಅದು ತಪ್ಪಬೇಕು ಎಂದು ಆಗ್ರಹಿಸಿದ್ದ ಶಾಸಕರ ಗುಂಪು ಈ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಿದೆ. ಇದು ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯನ್ನು ಗೊಂದಲಕ್ಕೆ ಸಿಲುಕಿಸಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧಿಸಿದಂತೆ ಜಿಲ್ಲೆಯ ನಾಯಕರಾದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್‌. ಸುಂದರೇಶ್, ಬೇಳೂರು ಗೋಪಾಲಕೃಷ್ಣ ಜೊತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬುಧವಾರ ಪ್ರತ್ಯೇಕವಾಗಿ ಚರ್ಚೆ ನಡೆಸಿದರು.

‌ಸ್ಪರ್ಧಿಸಲು ಕಾಗೋಡು ಮತ್ತು ಕಿಮ್ಮನೆ ಹಿಂದೇಟು ಹಾಕಿದ್ದಾರೆ. ಸುಂದರೇಶ್ ಸಿದ್ಧರಾಗಿದ್ದಾರೆ. ಆದರೆ, ಸಾರ್ವತ್ರಿಕ ಚುನಾವಣೆಯಲ್ಲೂ ಟಿಕೆಟ್ ನೀಡಬೇಕೆಂಬ ಷರತ್ತು ಹಾಕಿದ್ದಾರೆ. ಹೀಗಾಗಿ ಶಿವಮೊಗ್ಗಕ್ಕೆ ಅಭ್ಯರ್ಥಿ ಯಾರು ಎಂಬುದು ಇನ್ನೂ ನಿಕ್ಕಿಯಾಗಿಲ್ಲ.

ಲಕ್ಷ್ಮಿ ಕಣಕ್ಕೆ: ಜೆಡಿಎಸ್‌ನಿಂದ ಲಕ್ಷ್ಮಿ ಅಶ್ವಿನ್ ಗೌಡ ಹಾಗೂ ಎಲ್. ಆರ್. ಶಿವರಾಮೇಗೌಡ ಮಧ್ಯೆ ಮಂಡ್ಯ ಕ್ಷೇತ್ರಕ್ಕೆ ಪೈಪೋಟಿ ಆರಂಭವಾಗಿದೆ. ಇಬ್ಬರೂ ತಮ್ಮದೇ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ.

ಮಂಡ್ಯ ಅಭ್ಯರ್ಥಿಗೆ ಬಿಜೆಪಿ ಹುಡುಕಾಟ

ಬಳ್ಳಾರಿ, ಶಿವಮೊಗ್ಗ ಹಾಗೂ ಜಮಖಂಡಿ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯನ್ನು ಆಖೈರುಗೊಳಿಸಿರುವ ವಿರೋಧ ಪಕ್ಷ ಬಿಜೆಪಿ, ಮಂಡ್ಯ ಮತ್ತು ರಾಮನಗರದ ಮೇಲೆ ದೃಷ್ಟಿ ನೆಟ್ಟಿದೆ.

ಬುಧವಾರ ನಡೆದ ದಿಢೀರ್ ಬೆಳವಣಿಗೆಯಲ್ಲಿ ರಾಮನಗರದಲ್ಲಿ ‘ಆಪರೇಷನ್ ಕಮಲ’ ನಡೆಸಿರುವ ಮಾಜಿ ಸಚಿವ ಸಿ.ಪಿ. ಯೋಗೀಶ್ವರ, ವಿಧಾನಪರಿಷತ್ತಿನ ಕಾಂಗ್ರೆಸ್ ಸದಸ್ಯ ಹಾಗೂ ದೇವೇಗೌಡರ ಕುಟುಂಬದ ವಿರೋಧಿ ಸಿ.ಎಂ. ಲಿಂಗಪ್ಪ ಪುತ್ರ ಚಂದ್ರಶೇಖರ್ ಅವರನ್ನು ಕಮಲದ ತೆಕ್ಕೆಗೆ ಕರೆ ತಂದಿದ್ದಾರೆ. ಮಂಡ್ಯದಿಂದ ಯಾರನ್ನು ಕಣಕ್ಕೆ ಇಳಿಸಬೇಕು ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಕಾಂಗ್ರೆಸ್‌ನಲ್ಲಿರುವ ಮಾಜಿ ಶಾಸಕ ಚಲುವರಾಯಸ್ವಾಮಿ ಅವರನ್ನು ಕರೆತರುವ ಯತ್ನಕ್ಕೆ ಸ್ವಲ್ಪ ಹಿನ್ನಡೆಯಾಗಿದ್ದು, ವಿಧಾನಪರಿಷತ್ತಿನ ಮಾಜಿ ಸದಸ್ಯ ಅಶ್ವತ್ಥ ನಾರಾಯಣ ಹೆಸರು ಮುಂಚೂಣಿಗೆ ಬಂದಿದೆ.

* ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳು ಯಾವಾಗಲೂ ಹೆಚ್ಚು ಇರುತ್ತಾರೆ. ನನ್ನ ಸಹೋದರ ವೆಂಕಟೇಶ್ ಪ್ರಸಾದ್ ಕೂಡಾ ಆಕಾಂಕ್ಷಿ.

-ಬಿ. ನಾಗೇಂದ್ರ, ಬಳ್ಳಾರಿ ಗ್ರಾಮೀಣ ಕ್ಷೇತ್ರ, ಕಾಂಗ್ರೆಸ್‌

* ರಾಮನಗರ ಹಾಗೂ ಮಂಡ್ಯ ಕ್ಷೇತ್ರಗಳಿಗೆ ಎರಡು ಮೂರು ದಿನಗಳಲ್ಲಿ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಿದ್ದೇವೆ.

- ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT