ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮ ಮುಖವೇ ಬೋರ್ಡಿಂಗ್ ಪಾಸ್!

ಕೆಐಎ ಆಡಳಿತ ಮಂಡಳಿ ಹಾಗೂ ವಿಷನ್ ಬಾಕ್ಸ್‌ ಕಂಪನಿ ನಡುವೆ ಒಪ್ಪಂದ * 2019ರ ಮಾರ್ಚ್‌ನಿಂದ ಸೇವೆಗೆ ಮುಕ್ತ
Last Updated 7 ಸೆಪ್ಟೆಂಬರ್ 2018, 3:44 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣದ (ಕೆಐಎ) ಪ್ರಯಾಣಿಕರು ಇನ್ನುಮುಂದೆ ಒಳಗೆ ಪ್ರವೇಶಿಸಲು ಅವರಿಗೆ ಬೋರ್ಡಿಂಗ್ ಪಾಸ್‌ ಬೇಕಾಗಿಲ್ಲ. ತರಹೇವಾರಿ ತಪಾಸಣೆಗಾಗಿ ಗಂಟೆಗಟ್ಟಲೇ ಸರದಿಯಲ್ಲಿ ನಿಲ್ಲಬೇಕಾಗಿಯೂ ಇಲ್ಲ. ಕಂಪ್ಯೂಟರ್‌ ಸ್ಕ್ರೀನ್‌ ಮುಂದೆ ತಮ್ಮ ಮುಖ ತೋರಿಸಿ ನೇರವಾಗಿ ವಿಮಾನವೇರಬಹುದು!

ದೇಶದಲ್ಲೇ ಮೊದಲ ಬಾರಿಗೆ ‘ಬಯೋಮೆಟ್ರಿಕ್ ಸೆಲ್ಫ್ ಬೋರ್ಡಿಂಗ್’ ತಂತ್ರಜ್ಞಾನವನ್ನು ಕೆಐಎಯಲ್ಲಿ ಅಳವಡಿಸಲು ಆಡಳಿತ ಮಂಡಳಿ ತೀರ್ಮಾನಿಸಿದೆ. ಈ ಸಂಬಂಧ ಪೋರ್ಚುಗಲ್‌ನ ವಿಷನ್‍ ಬಾಕ್ಸ್‌ ಕಂಪನಿ ಜೊತೆಯಲ್ಲಿ ಗುರುವಾರ ಒಪ್ಪಂದ ಮಾಡಿಕೊಳ್ಳಲಾಗಿದೆ. ಮುಂದಿನ ಮಾರ್ಚ್‌ ವೇಳೆಗೆ ಈ ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ.

ಲಿಸ್ಬನ್‌ನಲ್ಲಿ ನಡೆದ ಸಮಾರಂಭದಲ್ಲಿ ಕೆಐಎಯ ಸಿಇಒ ಹರಿ ಮಾರರ್ ಹಾಗೂ ವಿಷನ್ ಬಾಕ್ಸ್‌ ಕಂಪನಿಯ ಸಿಇಒ ಮಿಗೆಲ್ ಲೀಟ್‍ಮನ್, ಒಪ್ಪಂದದ ಪತ್ರಕ್ಕೆ ಸಹಿ ಹಾಕಿದರು. ಪೋರ್ಚುಗಲ್‌ ಪ್ರಧಾನಿ ಆಂಟೋನಿಯೋ ಕೋಸ್ಟಾ, ಹಣಕಾಸು ಸಚಿವ ಮ್ಯಾನ್ಯುವೆಲ್ ಕಾಲ್ಡಿರಾ ಕಾಬ್ರಲ್, ಭಾರತದ ರಾಯಭಾರಿ ನಂದಿನಿ ಸಿಂಗ್ಲಾ ಅವರು ಒಪ್ಪಂದಕ್ಕೆ ಸಾಕ್ಷಿಯಾದರು.

ಹರಿ ಮರಾರ್ ಮಾತನಾಡಿ, ‘ಬೆಂಗಳೂರು ನಿಲ್ದಾಣದಿಂದ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೋರ್ಡಿಂಗ್‌ ಪ್ರಕ್ರಿಯೆ ತಡವಾಗುತ್ತಿರುವ ಬಗ್ಗೆ ಪ್ರಯಾಣಿಕರಿಂದ ದೂರುಗಳು ಬರುತ್ತಿವೆ. ಅದಕ್ಕೆ ಪರಿಹಾರವಾಗಿ ಈ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದ್ದೇವೆ’ ಎಂದು ಹೇಳಿದರು.

‘ನಿಮ್ಮ ಮುಖವೇ ಬೋರ್ಡಿಂಗ್ ಪಾಸ್’ ಎಂಬ ಧ್ಯೇಯದೊಂದಿಗೆ ಕೇಂದ್ರ ಸರ್ಕಾರದ ‘ಡಿಜಿಯಾತ್ರಾ’ ಯೋಜನೆಗೆ ಬೆಂಬಲಾರ್ಥವಾಗಿ ‘ಬಯೊಮೆಟ್ರಿಕ್ ಸೆಲ್ಫ್ ಬೋರ್ಡಿಂಗ್ ತಂತ್ರಜ್ಞಾನ’ ಅಳವಡಿಸಲಾಗುತ್ತಿದೆ. ಇದರಿಂದಾಗಿ ವಿಮಾನ ಪ್ರಯಾಣದ ಆರಂಭದಿಂದ ಅಂತ್ಯದವರೆಗಿನ ಪ್ರಕ್ರಿಯೆಗಳೆಲ್ಲವೂ ಕಾಗದರಹಿತ ಆಗಲಿವೆ. ನಿಲ್ದಾಣದಲ್ಲಿ ಚಲಿಸುವಾಗಲೇ ಪ್ರಯಾಣಿಕರನ್ನು ಮುಖಚಹರೆ ಮೂಲಕವೇ ಗುರುತಿಸಲಾಗುತ್ತದೆ. ಪದೇ ಪದೇ ದಾಖಲೆಗಳ ಪರಿಶೀಲನೆ ಇರುವುದಿಲ್ಲ’ ಎಂದರು.

ವಿಷನ್ ಬಾಕ್ಸ್‌ ಕಂಪನಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಿಗೆಲ್ ಲೀಟ್‍ಮನ್, ‘ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಜೊತೆ ಒಪ್ಪಂದ ಮಾಡಿಕೊಂಡಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ’ ಎಂದರು.

‘ನೂತನ ತಂತ್ರಜ್ಞಾನದ ಸೌಲಭ್ಯವನ್ನು ಆರಂಭದಲ್ಲಿ ಜೆಟ್‌ ಏರ್‌ವೇಸ್, ಏರ್‌ ಏಷ್ಯಾ ಹಾಗೂ ಸ್ಪೈಸ್ ಜೆಟ್‌ ಕಂಪನಿ ವಿಮಾನಗಳ ಪ್ರಯಾಣಿಕರು ಪಡೆಯಲಿದ್ದಾರೆ‘ ಎಂದು ಮರಾರ್‌ ತಿಳಿಸಿದರು.

‘ಸದ್ಯ ನಿಲ್ದಾಣದ ಮೂರು ಕಡೆ ಬೋರ್ಡಿಂಗ್ ಪಾಸ್‌ ತಪಾಸಣೆ ಮಾಡಲಾಗುತ್ತದೆ. ಅದರ ಜತೆಗೆ ಭದ್ರತಾ ಸಿಬ್ಬಂದಿಯಿಂದಲೂ ಒಂದು ಬಾರಿ ತಪಾಸಣೆ ನಡೆಯುತ್ತದೆ. ಇದರಿಂದ ಸಮಯ ವ್ಯರ್ಥವಾಗುತ್ತಿದೆ. ನೂತನ ತಂತ್ರಜ್ಞಾನ ಜಾರಿಗೆ ಬಂದರೆ, ಸಮಯದ ಉಳಿತಾಯವಾಗಲಿದೆ’ ಎಂದರು.

**

ದೇಶೀಯ ವಿಮಾನ ಪ್ರಯಾಣಿಕರಿಗೆ ಮಾತ್ರ

‘ನೂತನ ತಂತ್ರಜ್ಞಾನವನ್ನು ದೇಶೀಯ ವಿಮಾನಗಳಲ್ಲಿ ಸಂಚರಿಸುವ ಪ್ರಯಾಣಿ
ಕರು ಮಾತ್ರ ಬಳಕೆ ಮಾಡ ಬಹುದಾಗಿದೆ. ವಿದೇಶಿ ಪ್ರಜೆಗಳಿಗೆ ಈ ತಂತ್ರಜ್ಞಾನ ಅನ್ವಯವಾಗುವುದಿಲ್ಲ’ ಎಂದು ನಿಲ್ದಾಣದ ಅಧಿಕಾರಿ ಹೇಳಿದರು.

‘ವಿದೇಶಿಯರ ಮುಖ ಚಹರೆಯನ್ನು ಕಿಯೋಸ್ಕ್ ಯಂತ್ರದಲ್ಲಿ ಗುರುತಿಸಿಟ್ಟುಕೊಳ್ಳಲು ಕಾನೂನಿನಲ್ಲಿ ಕೆಲವು ಅಡೆತಡೆಗಳಿವೆ. ಆ ಸಂಬಂಧ ಕೇಂದ್ರ ಸರ್ಕಾರವೇ ನಿರ್ಧಾರ ಕೈಗೊಳ್ಳಬೇಕು. ಅಲ್ಲಿಯವರೆಗೂ ದೇಶೀಯ ಪ್ರಯಾಣಿಕರು ಮಾತ್ರ ಈ ಸೇವೆಯ ಲಾಭ ಪಡೆಯಲಿದ್ದಾರೆ. ಭದ್ರತಾ ತಪಾಸಣೆ ಎಂದಿನಂತೆ ಮುಂದುವರಿಯಲಿದೆ’ ಎಂದರು.

**

ತಂತ್ರಜ್ಞಾನದ ಬಳಕೆ ಹೇಗೆ?

* ವಿಮಾನ ನಿಲ್ದಾಣದ ಪ್ರವೇಶ ದ್ವಾರಗಳಲ್ಲಿ ಕಿಯೋಸ್ಕ್ ಯಂತ್ರಗಳನ್ನು ಅಳವಡಿಸಲಾಗುತ್ತದೆ. ಅವುಗಳ ಮೂಲಕ ‘ಬಯೊಮೆಟ್ರಿಕ್ ಸೆಲ್ಫ್ ಬೋರ್ಡಿಂಗ್’ ತಂತ್ರಜ್ಞಾನ ಕಾರ್ಯ ನಿರ್ವಹಿಸಲಿದೆ.

* ಪ್ರಯಾಣಿಕರು, ಮೊದಲ ಪ್ರವೇಶ ದ್ವಾರದಲ್ಲಿರುವ ಕಿಯೋಸ್ಕ್‌ ಯಂತ್ರದಲ್ಲಿ ಗುರುತಿನ ದಾಖಲೆಗಳ ಮಾಹಿತಿ ನಮೂದಿಸಬೇಕು. ಮುಖ ಹಾಗೂ ಕಣ್ಣಿನ ಗುರುತನ್ನುಕಿಯೋಸ್ಕ್‌ಗಳಲ್ಲಿ ದಾಖಲಿಸಬೇಕು.ಅದಾದ ಬಳಿಕ,ನಿಲ್ದಾಣದ ಇತರೆ ದ್ವಾರಗಳಲ್ಲಿರುವ ಕಿಯೋಸ್ಕ್‌ಗಳಿಗೆ ಮುಖವನ್ನಷ್ಟೇ ತೋರಿಸಿ ಸರಾಗವಾಗಿ ಮುಂದೆ ಹೋಗಬಹುದು.

*ನಿಲ್ದಾಣದಿಂದ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರು, ಒಂದು ಬಾರಿ ನೋಂದಣಿ ಮಾಡುವುದು ಕಡ್ಡಾಯ. ಅದಾದ ನಂತರ, ಜೀವನ ಪರ್ಯಂತ ಬೋರ್ಡಿಂಗ್‌ ಪಾಸ್‌ ಇಲ್ಲದೇ ನಿಲ್ದಾಣದಲ್ಲಿ ಓಡಾಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT