ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20 ವರ್ಷಗಳ ಬಳಿಕ ಅರ್ಜಿದಾರರಿಗೆ ಪರಿಹಾರ

ಹೈಕೋರ್ಟ್‌ ತಪರಾಕಿಗೆ ಪತರುಗುಟ್ಟಿದ ಬಿಡಿಎ
Published 16 ಫೆಬ್ರುವರಿ 2024, 0:00 IST
Last Updated 16 ಫೆಬ್ರುವರಿ 2024, 0:00 IST
ಅಕ್ಷರ ಗಾತ್ರ

ಬೆಂಗಳೂರು: ಹೈಕೋರ್ಟ್‌ ಕಿಡಿ ಕಾರಿದ ಬೆನ್ನಲ್ಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ನಗರದ ಸರ್‌.ಎಂ.ವಿಶ್ವೇಶ್ವರಯ್ಯ 7ನೇ ಹಂತದ ಬಡಾವಣೆ ರಚನೆಗಾಗಿ 2003ರಲ್ಲಿ ವ್ಯಕ್ತಿಯೊಬ್ಬರಿಂದ ವಶಪಡಿಸಿಕೊಂಡಿದ್ದ 15 ಗುಂಟೆ ಜಮೀನಿಗೆ ಪರಿಹಾರವಾಗಿ ₹ 1.80 ಕೋಟಿ ಮೌಲ್ಯದ (ಪ್ರಸ್ತುತ ಮಾರ್ಗಸೂಚಿ ದರ) ಅಭಿವೃದ್ಧಿಪಡಿಸಿದ ನಿವೇಶನ ನೀಡುವ ಭರವಸೆ ನೀಡಿದೆ.

ನಗರದ ಮುದ್ದಯ್ಯನಪಾಳ್ಯದ ಮುದ್ದೇಗೌಡ (60) ಸಲ್ಲಿಸಿರುವ ನಿಯಮಿತ ಮೊದಲ ಮೇಲ್ಮನವಿ (ಆರ್‌ಎಫ್‌ಎ) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ನೇತೃತ್ವದ ವಿಭಾಗೀಯ ಪೀಠಕ್ಕೆ ಈ ಕುರಿತಂತೆ ಬಿಡಿಎ ಆಯುಕ್ತ ಎನ್‌.ಜಯರಾಮ್‌ ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

ಇದೇ 13ರಂದು ಈ ಮೇಲ್ಮನವಿ ವಿಚಾರಣೆ ನಡೆಸಿದ್ದ ನ್ಯಾಯಪೀಠವು, ‘ಅರ್ಜಿದಾರರ 15 ಗುಂಟೆ ಜಮೀನನ್ನು 2003ರಲ್ಲೇ ಸ್ವಾಧೀನಕ್ಕೆ ಪಡೆದಿರುವುದಾಗಿ ಬಿಡಿಎ ಪರ ವಕೀಲರು ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದ್ದಾರೆ. ಆದರೆ, 21 ವರ್ಷ ಕಳೆದರೂ ಪರಿಹಾರ ನೀಡಿಲ್ಲ ಎಂದರೆ ಹೇಗೆ? ಬಿಡಿಎ ಅನ್ನು ಸುಗ್ರೀವಾಜ್ಞೆ ಮೂಲಕ ಮುಚ್ಚಲು ಆದೇಶಿಸುವುದೇ ಲೇಸು’ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಅಂತೆಯೇ, ‘ಅರ್ಜಿದಾರರಿಗೆ ಯಾವಾಗ ಪರಿಹಾರ ನೀಡಲಾಗುತ್ತದೆ ಎನ್ನುವುದನ್ನು ನಿಖರವಾಗಿ ತಿಳಿಸಿ’ ಎಂದು ಬಿಡಿಎ ಆಯುಕ್ತರಿಗೆ ತಾಕೀತು ಮಾಡಿತ್ತು.

ಗುರುವಾರ ವಿಚಾರಣೆ ಸಂರ್ಭದಲ್ಲಿ ಬಿಡಿಎ ಪರ ಹೈಕೋರ್ಟ್‌ ವಕೀಲ ಬಿ.ವಚನ್‌ ಹಾಜರಾಗಿ ಅರ್ಜಿದಾರರಿಗೆ ಪರಿಹಾರ ರೂಪದಲ್ಲಿ ನೀಡುವ ನಿವೇಶನ ಮತ್ತು ಅದರ ಮಾರ್ಗಸೂಚಿ ದರದ ಕುರಿತ ಮಾಹಿತಿಯನ್ನು ಪ್ರಮಾಣ ಪತ್ರದ ಮೂಲಕ ನ್ಯಾಯಪೀಠಕ್ಕೆ ಸಲ್ಲಿಸಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ಪ್ರಮಾಣ ಪತ್ರದಲ್ಲಿ ಏನಿದೆ?

‘ಗಿಡದಕೊನೇನ ಹಳ್ಳಿಯ ಸರ್ವೇ ನಂಬರ್‌ 50ರಲ್ಲಿ ಅರ್ಜದಾರರಿಗೆ ಸೇರಿದ 15 ಗುಂಟೆ ಜಮೀನನ್ನು ಬಿಡಿಎ 2003ರಲ್ಲಿ ವಶಪಡಿಸಿಕೊಂಡಿತ್ತು. ಅರ್ಜಿದಾರರು 2003ರಲ್ಲಿ ₹ 12,81,898 ಪರಿಹಾರ ಪಡೆಯಲು ಅರ್ಹರಾಗಿದ್ದರು. ಆದರೆ, ಸದ್ಯದ ಮಾರ್ಗಸೂಚಿ ಬೆಲೆಯ ಅನುಸಾರ ಅರ್ಜಿದಾರರು, ಅಭಿವೃದ್ಧಿಪಡಿಸಿದ 4,492 ಚದರ ಅಡಿ ನಿವೇಶನ ಪಡೆಯಲು ಅರ್ಹರಾಗಿದ್ದಾರೆ. ಆದಾಗ್ಯೂ, ಅವರಿಗೆ ಹೆಚ್ಚುವರಿಯಾಗಿ 158 ಚದರ ಅಡಿ ಜಾಗ ಮಂಜೂರು ಮಾಡಲಾಗುತ್ತಿದೆ’ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

‘ಸರ್‌.ಎಂ.ವಿಶೇಶ್ವರಯ್ಯ ಬಡಾವಣೆಯ 7ನೇ ಬ್ಲಾಕಿನ ನಿವೇಶನ ಸಂಖ್ಯೆ 909/1ರಲ್ಲಿನ ₹ 1,03,69,500 ಮೌಲ್ಯದ 2,325 ಚದರ ಅಡಿ ಹಾಗೂ ನಾಡಪ್ರಭು ಕೆಂಪೇಗೌಡ ಬಡಾವಣೆಯ 1ನೇ ಬ್ಲಾಕಿನ ನಿವೇಶನ ಸಂಖ್ಯೆ 1814ರಲ್ಲಿನ ₹ 80,77,050 ಮೌಲ್ಯದ 2,325 ಚದರ ಅಡಿ ನಿವೇಶನ ಮಂಜೂರು ಮಾಡಲಾಗುವುದು. ಹೆಚ್ಚುವರಿಯಾಗಿ ಮಂಜೂರು ಮಾಡುವ 158 ಚದರ ಅಡಿಗೆ ಅರ್ಜಿದಾರರೇ ₹ 5,48,892 ಬಾಕಿ ಮೊತ್ತವನ್ನು ಬಿಡಿಎಗೆ ಪಾವತಿಸಬೇಕು’ ಎಂದು ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT