ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರಣ್ಯ ಅಭಿವೃದ್ಧಿ ನಿಗಮ: ವಜಾಗೊಂಡ ‍ಪಾಪೇಗೌಡ ಗುತ್ತಿಗೆಯಡಿ ಮರುನೇಮಕ

ಅರಣ್ಯ ಅಭಿವೃದ್ಧಿ ನಿಗಮದ ಕ್ರಮಕ್ಕೆ ನೌಕರರ ಆಕ್ಷೇಪ
Published 31 ಮೇ 2024, 23:30 IST
Last Updated 31 ಮೇ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದಲ್ಲಿ ಮುಂದುವರಿಯಲು ‘ಅನರ್ಹ’ ಎಂದು ಅರಣ್ಯ ಇಲಾಖೆಯ ಶಿಸ್ತು ಪ್ರಾಧಿಕಾರದ ಶಿಫಾರಸಿನಿಂದಾಗಿ ವಜಾಗೊಂಡಿದ್ದ ಪ್ರಥಮ ದರ್ಜೆ ಸಹಾಯಕ ಎಂ.ಪಾಪೇಗೌಡ ಅವರನ್ನು ಮತ್ತೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿ ಹಲವು ವಿಭಾಗಗಳ ಉಸ್ತುವಾರಿ ವಹಿಸಿರುವುದು ನಿಗಮದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

‘ಪಾಪೇಗೌಡ ತಮ್ಮ ಸೇವಾ ಅವಧಿಯಲ್ಲಿ ಪ್ರತಿನಿತ್ಯವೂ ಮಾಧ್ಯಮಗಳ ಮೂಲಕ ಅರಣ್ಯ ಅಭಿವೃದ್ಧಿ ನಿಗಮದ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಅಪಪ್ರಚಾರ ಮಾಡಿಸುತ್ತಿದ್ದರು’ ಎಂಬ ಆರೋಪ ಮೇಲೆ ಇತ್ತು. ಈ ಬಗ್ಗೆ ಶಿಸ್ತು ಪ್ರಾಧಿಕಾರ ವಿಚಾರಣೆ ನಡೆಸಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು.

ಇದೀಗ ಅವರನ್ನು ಹೊರಗುತ್ತಿಗೆಯ ಮೇಲೆ ನೇಮಕ ಮಾಡಿಕೊಂಡು ಹಲವು ಮಹತ್ವದ ಜವಾಬ್ದಾರಿಗಳನ್ನು ನೀಡಲಾಗಿದೆ. ಇದು ಅರಣ್ಯ ಇಲಾಖೆಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ವಜಾಕ್ಕೆ ಕಾರಣಗಳು?

ಇವರು ಕರ್ನಾಟಕ ಹೈಕೋರ್ಟ್‌, ಲೋಕಾಯುಕ್ತ ಮತ್ತು ಕೇಂದ್ರೀಯ ಅಧಿಕಾರಯುಕ್ತ ಸಮಿತಿಯಲ್ಲಿ ನಿಗಮದ ಅಧಿಕಾರಿಗಳ ವಿರುದ್ಧ ಪದೇ ಪದೇ ದಾವೆಗಳನ್ನು ಹೂಡಿದ್ದರು. ಅವುಗಳಲ್ಲಿ ಹಲವು ಅರ್ಜಿಗಳು ವಜಾಗೊಂಡಿವೆ. ಅಲ್ಲದೇ, ರಾಜಕೀಯ ವ್ಯಕ್ತಿಗಳಿಂದ ಮತ್ತು ಹೊರಗಿನ ಪ್ರಾಧಿಕಾರಿಗಳಿಂದ ಪ್ರಭಾವ ಮೂಲಕ ಮೇಲಧಿಕಾರಿಗಳಿಗೆ ಮತ್ತು ಸಿಬ್ಬಂದಿ ಮೇಲೆ ಅನಗತ್ಯ ಒತ್ತಡ ತರುತ್ತಿದ್ದರು ಎಂದು ಶಿಸ್ತು ಪ್ರಾಧಿಕಾರ ತನ್ನ ವರದಿಯಲ್ಲಿ ತಿಳಿಸಿದೆ.

ಸುದ್ದಿವಾಹಿನಿಗಳು ಮತ್ತು ಇತರ ಮಾಧ್ಯಮಗಳನ್ನು ಬಳಸಿಕೊಂಡು ನಿಗಮದ ಪ್ರತಿಷ್ಠೆಗೆ ಧಕ್ಕೆ ತಂದಿದ್ದರು. ನಿಗಮದಿಂದ ಅವರಿಗೆ ನೀಡಿದ್ದ ಎಚ್ಚರಿಕೆ, ಮೆಮೋಗಳು ಮತ್ತು ಸೂಚನೆಗಳನ್ನು ಉಲ್ಲಂಘಿಸುತ್ತಿದ್ದರು. ಕಚೇರಿಯಲ್ಲಿನ ಸಿಬ್ಬಂದಿಗೆ ಕಿರುಕುಳ ನೀಡುತ್ತಾ, ಮಾಧ್ಯಮಗಳ ಮೂಲಕ ಆಪಾದನೆ ಮಾಡುತ್ತಿದ್ದರು. ಅದನ್ನು ಸಾಬೀತುಪಡಿಸಲು ಸಾಧ್ಯವಾಗದೇ ಇದ್ದಾಗ ನಿಗಮದವರಿಂದ ತಮಗೆ ಬೆದರಿಕೆ ಇದೆ ಎಂದು ಹೇಳಿ ರಕ್ಷಣೆ ನೀಡುವಂತೆ ಕೋರುತ್ತಿದ್ದರು. 2018ರಿಂದ 2020ರ ಅವಧಿಯಲ್ಲಿ 44 ಅರ್ಜಿಗಳನ್ನು ಮಾಹಿತಿ ಹಕ್ಕಿನಡಿ ಸಲ್ಲಿಸಿದ್ದಾರೆ ಎಂದು ಹೇಳಿದೆ.

ನಿಗಮಕ್ಕೆ ಉಪಯುಕ್ತವಾಗಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯಾಗುವ ಬದಲಿಗೆ ಪಾಪೇಗೌಡ ಅವರು ನಿಗಮಕ್ಕೆ ಹೊರೆಯಾಗಿದ್ದಾರೆ. ಇವರು ನ್ಯಾಯಾಲಯಗಳಲ್ಲಿ ಹೂಡುವ ದಾವೆ, ಲೋಕಾಯುಕ್ತಕ್ಕೆ ಸಲ್ಲಿಸುವ ದೂರು ಮತ್ತು ಮಾಹಿತಿ ಹಕ್ಕು ಅಡಿ ಸಲ್ಲಿಸುವ ಅರ್ಜಿಗಳಿಂದಾಗಿ ನಿಗಮವು ತನ್ನ ಶಕ್ತಿ ಮತ್ತು ಹಣವನ್ನು ಆ ಅವುಗಳಿಗೇ ವ್ಯಯಿಸುವಂತಾಗಿದೆ ಎಂದು ತಿಳಿಸಿದೆ.

ನಿಗಮವು ಒಂದು ವಾಣಿಜ್ಯ ಉದ್ದಿಮೆಯಾಗಿದ್ದು, ಸರ್ಕಾರದಿಂದ ಯಾವುದೇ ಅನುದಾನ ಪಡೆಯುತ್ತಿಲ್ಲ. ನಿಗಮವು ಪಾಪೇಗೌಡ ಅವರಿಂದ ಯಾವುದೇ ಕೆಲಸ ಪಡೆಯಲು ಸಾಧ್ಯವಾಗುತ್ತಿಲ್ಲ. ಇವರಿಗೆ ವೇತನ ರೂಪದಲ್ಲಿ ₹50 ಲಕ್ಷ ಪಾವತಿಸಲಾಗಿದೆ.  ಇವರ ದೂರು– ಅರ್ಜಿಗಳಿಗೆ ವಕೀಲರನ್ನು ನೇಮಿಸಲು ಅಪಾರ ಹಣ ವ್ಯಯಿಸಲಾಗಿದೆ ಎಂದು ಹೇಳಿದೆ.

ಈ ವರದಿ ಆಧರಿಸಿ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಅಂದಿನ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಶಿಸ್ತು ಪ್ರಾಧಿಕಾರಿಯಾಗಿದ್ದ ಮಧುಶರ್ಮ ಅವರು ಪಾಪೇಗೌಡ ಅವರನ್ನು ಸೇವೆಯಿಂದ ವಜಾಗೊಳಿಸಿದ್ದರು. ಅಲ್ಲದೇ, ಭವಿಷ್ಯದಲ್ಲಿ ಮುಂದಿನ ನೌಕರಿ ಪಡೆಯದಂತೆ ಅನರ್ಹಗೊಳಿಸಿದ್ದರು.

ನಿಗಮದಿಂದ ಯಾವುದೇ ರೀತಿಯ ಸೇವೆ ಮತ್ತು ಆರ್ಥಿಕ ಸೌಲಭ್ಯಗಳನ್ನು ಪಡೆಯಲು ಪಾಪೇಗೌಡ ಅರ್ಹರಿರುವುದಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಿ ಕೆಲಸದಿಂದ ವಜಾ ಮಾಡಿದ್ದರೂ, ಮರಳಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ನೌಕರರು ಹೇಳಿದ್ದಾರೆ.

ಈಗ ಹೊಸ ಜವಾಬ್ದಾರಿ

ಏಪ್ರಿಲ್‌ನಲ್ಲಿ ಹೊರಗುತ್ತಿಗೆಯಡಿ ನೇಮಕಾತಿ ಮಾಡಿದ ಬಳಿಕ ಹಲವು ಜವಾಬ್ದಾರಿ ನೀಡಲಾಗಿದೆ.

  • ಅರಣ್ಯ ಭೂಮಿ ಒತ್ತುವರಿ ಮಾಡಿರುವವರು ಮತ್ತು ಹೊಸದಾಗಿ ಮಾಡಲು ಯತ್ನಿಸುವವರ ಮೇಲೆ ನಿಗಾ ಇಡುವುದು

  • ಮರಳು, ಮಣ್ಣು, ಕಲ್ಲು, ಗಣಿಗಾರಿಕೆ, ಮರಗಿಡಗಳನ್ನು ತೆಗೆದು ಸಾಗಿಸುತ್ತಿರುವುದರ ಮೇಲೆ ಕಣ್ಗಾವಲು

  • ಅರಣ್ಯ ನೆಡುತೋಪುಗಳಲ್ಲಿ ಯಾವುದೇ ವ್ಯಕ್ತಿ ಅತಿಕ್ರಮ ಪ್ರವೇಶ, ನಿಗಮದ ಅಥವಾ ಅರಣ್ಯ ಪ್ರದೇಶದಲ್ಲಿ ಅಕ್ರಮ ಕಡಿತಲೆ ಮಾಡುತ್ತಿರುವುದರ ಮೇಲೆ ನಿಗಾ

  • ನಿಗಮದ ವತಿಯಿಂದ ನಿರ್ವಹಿಸಲಾಗುತ್ತಿರುವ ಕಾಮಗಾರಿಗಳಲ್ಲಿನ ಅಕ್ರಮಗಳ ಬಗ್ಗೆ ಕಣ್ಗಾವಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT