ಬೆಂಗಳೂರು: ಬೆಂಗಳೂರು–ಮಂಗಳೂರು ಇಂಟಿಗ್ರೇಟೆಡ್ ಗ್ರೀನ್ ಫೀಲ್ಡ್ ಹೈ ಸ್ಪೀಡ್ ಕಾರಿಡಾರ್ ನಿರ್ಮಾಣ ಕುರಿತಂತೆ ಯೂರೋಪಿಯನ್ ಬ್ಯುಸಿನೆಸ್ ಅಂಡ್ ಟೆಕ್ನಾಲಜಿ ಸಂಸ್ಥೆಯ ನಿಯೋಗ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಗುರುವಾರ ಚರ್ಚೆ ನಡೆಸಿತು.
ಈ ಹೈಸ್ಪೀಡ್ ಕಾರಿಡಾರ್ ನಿರ್ಮಾಣದಿಂದ ಮಂಗಳೂರು ಅಭಿವೃದ್ಧಿಯ ಜತೆಗೆ ಮಾರ್ಗ ಮಧ್ಯೆ ಬರುವ ಇತರ ಎಲ್ಲ ನಗರಗಳ ಅಭಿವೃದ್ಧಿಗೂ ಸಹಕಾರಿಯಾಗಲಿದೆ. 6 ರಿಂದ 8 ಪಥಗಳ ಈ ಕಾರಿಡಾರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಹಂತದ ಮಾತುಕತೆ ನಡೆಯಿತು ಎಂದು ದಿನೇಶ್ ಗುಂಡೂರಾವ್ ಸುದ್ದಿಗಾರರಿಗೆ ತಿಳಿಸಿದರು.
ಈ ಯೋಜನೆಯಿಂದ ಮಂಗಳೂರು ಮಾತ್ರವಲ್ಲದೇ, ಇತರ ನಗರಗಳಿಗೂ ಹೆಚ್ಚಿನ ಬಂಡವಾಳ ಹರಿದು ಬರಲಿದ್ದು, ಈ ಎಲ್ಲ ನಗರಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಮಂಗಳೂರು ಬಂದರಿಗೂ ಇದು ಸಂಪರ್ಕ ಕಲ್ಪಿಸುವುದರಿಂದ ವ್ಯಾಪಾರ– ಉದ್ಯಮಗಳ ಬೆಳವಣಿಗೆಗೂ ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರಿಡಾರ್‌ನ ಸಾಗಿ ಹೋಗುವ ನಕಾಶೆ ಸಮೇತ ಹೆಚ್ಚಿನ ಮಾಹಿತಿಯೊಂದಿಗೆ ಚರ್ಚಿಸುವ ಅಗತ್ಯವಿದೆ. ಈ ವಿಚಾರವಾಗಿ ಲೋಕೋಪಯೋಗಿ ಸಚಿವರು ಮತ್ತು ಮುಖ್ಯಮಂತ್ರಿ ಅವರ ಜತೆ ಮಾತುಕತೆ ನಡೆಸುವುದಾಗಿಯೂ ದಿನೇಶ್ ಭರವಸೆ ನೀಡಿದರು.
ಮಂಗಳೂರು ಸುಸ್ಥಿರ ಅಭಿವೃದ್ಧಿಗೆ ಸಹಾಯಕವಾಗುವ ಇಂತಹ ಯೋಜನೆಗಳನ್ನು ರಾಜ್ಯ ಸರ್ಕಾರ ಪ್ರೋತ್ಸಾಹಿಸಲಿದೆ. ಇಂತಹ ಯೋಜನೆಗಳ ಅನುಷ್ಠಾನಕ್ಕೆ ಖಾಸಗಿ ಸಹಭಾಗಿತ್ವವೂ ಬೇಕಾಗಿದೆ ಎಂದು ಅವರು ಹೇಳಿದರು.