ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ್‌ ಜೋಡೊ | ನ್ಯಾಯಯಾತ್ರೆಯಲ್ಲ ಡೋಂಗಿ ಯಾತ್ರೆ: ಆರ್‌.ಅಶೋಕ

Published 14 ಜನವರಿ 2024, 14:40 IST
Last Updated 14 ಜನವರಿ 2024, 14:40 IST
ಅಕ್ಷರ ಗಾತ್ರ

ಬೆಂಗಳೂರು:‘ ದೇಶದಲ್ಲಿ ನ್ಯಾಯಾಂಗವನ್ನು ದಮನ ಮಾಡಿದ ಕಾಂಗ್ರೆಸ್‌ ನಾಯಕರು ಈಗ ನ್ಯಾಯಯಾತ್ರೆ ಮಾಡುತ್ತಿರುವುದು ಡೋಂಗಿತನ. ತುರ್ತುಪರಿಸ್ಥಿತಿ ಹೇರಿಕೆ ಮೂಲಕ ಪ್ರಜಾಪ್ರಭುತ್ವವನ್ನು ಹೊಸಕಿದ ಇವರ ಪಕ್ಷದ ಯಾತ್ರೆಗೆ ಮೂರು ಕಾಸಿನ ಬೆಲೆಯೂ ಇಲ್ಲ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಹರಿಹಾಯ್ದರು.

ಜಯನಗರ 4 ನೇ ಹಂತದ ಗಣೇಶ ದೇವಾಲಯದ ಆವರಣದಲ್ಲಿ ಭಾನುವಾರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. ಅಯೋಧ್ಯೆಯ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಪ್ರಯುಕ್ತ ಇದೇ 14 ರಿಂದ ದೇವಾಲಯಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

‘ಕಾಂಗ್ರೆಸ್‌ ನಾಯಕರು ದಕ್ಷಿಣ ಭಾರತದಿಂದ ಭಾರತ್‌ ಜೋಡೊ ಯಾತ್ರೆ ಮಾಡಿದರು. ಆಗ ಉತ್ತರ ಭಾರತದ ಮೂರು ರಾಜ್ಯಗಳಲ್ಲೂ ಸೋತು ಹೋದರು. ರಾಹುಲ್‌ಗಾಂಧಿ ಎಲ್ಲೆಲ್ಲಿ ಪಾದಯಾತ್ರೆ ಮಾಡಿ ನೆಲವನ್ನು ಸ್ಪರ್ಶಿಸುತ್ತಾರೋ ಅಲ್ಲೆಲ್ಲ ಕಾಂಗ್ರೆಸ್‌ ಅವನತಿ ಕಾಣುತ್ತಿದೆ. ಈಗ ನ್ಯಾಯಯಾತ್ರೆ ಮಾಡುತ್ತಿರುವ ಇವರು ಈ ಹಿಂದೆ ಸರ್ವಾಧಿಕಾರಿ ಆಡಳಿತವನ್ನು ದೇಶದ ಮೇಲೆ ಹೇರಿದ ಕುಖ್ಯಾತಿ ಹೊಂದಿದ್ದಾರೆ. ನ್ಯಾಯಾಂಗ ಮತ್ತು ಪತ್ರಿಕಾರಂಗವನ್ನು ದಮನ ಮಾಡಿದ ಕಾಂಗ್ರೆಸ್‌ ನಾಯಕರಿಗೆ ನ್ಯಾಯ ಕೇಳಲು ಯಾವ ನೈತಿಕತೆ ಇದೆ’ ಎಂದು ಪ್ರಶ್ನಿಸಿದರು.

‘ನೆಹರೂ ಕಾಲದಿಂದ ರಾಹುಲ್‌ಗಾಂಧಿಯವರೆಗೆ ಆ ಪರಿವಾರದ ಎಲ್ಲರೂ ರಾಮ ಮಂದಿರವನ್ನು ವಿರೋಧಿಸಿ ಭಾರತೀಯರ ಭಾವನೆಗೆ ಧಕ್ಕೆ ತಂದಿದ್ದಾರೆ’ ಎಂದು ಅಶೋಕ ಹೇಳಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಮ ಮಂದಿರದ ವಿಚಾರವಾಗಿ ನಿತ್ಯವೂ ದಾಳಿ ಸ್ವರೂಪದಲ್ಲಿ ಮಾತನಾಡುತ್ತಿದ್ದು, ರಾಮ ಮಂದಿರ ವಿರೋಧಿ ಅವರ ನಿಲುವನ್ನು ಖಂಡಿಸುತ್ತೇನೆ. ತಿರುಪತಿಗೆ ಏಕೆ ಹೋಗಬೇಕು? ಧರ್ಮಸ್ಥಳಕ್ಕೇ ಏಕೆ ಹೋಗಬೇಕು? ಯಲ್ಲಮ್ಮ ದೇವಸ್ಥಾನಕ್ಕೆ ಏಕೆ ಹೋಗಬೇಕು ಎಂದು ಪ್ರಶ್ನಿಸುತ್ತಾರೆ. ಮಸೀದಿಗೆ ಏಕೆ ಹೋಗಬಾರದು, ಟೋಪಿ ಏಕೆ ಹಾಕಬೇಕು, ಮನೆಯಲ್ಲೇ ಪೂಜೆ ಮಾಡಿ ಎಂದು ಕೂಡ ಪ್ರಶ್ನೆ ಮಾಡಬಾರದು. ತಾವೂ ಹಿಂದೂ ಎಂದು ಸಿದ್ದರಾಮಯ್ಯ ಹೇಳಿಕೊಳ್ಳುವುದು ಕೂಡ ಡೋಂಗಿ’ ಎಂದರು.

ಸಂಸದ ಮುನಿಸ್ವಾಮಿ, ಶಾಸಕ ಕೆ.ಸಿ.ರಾಮಮೂರ್ತಿ ಮತ್ತು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

’ಸೋಮಣ್ಣಗೆ ರಾಜ್ಯಸಭೆ ಟಿಕೆಟ್‌ ನಮ್ಮ ಆಕ್ಷೇಪ ಇಲ್ಲ‘

‘ವಿ.ಸೋಮಣ್ಣ ಅವರಿಗೆ ರಾಜ್ಯಸಭೆಗೆ ಟಿಕೆಟ್‌ ನೀಡುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಹೈಕಮಾಂಡ್‌ ಟಿಕೆಟ್‌ ನೀಡಿದರೆ ಅದನ್ನು ಸ್ವಾಗತಿಸುತ್ತೇವೆ’ ಎಂದು ಆರ್‌.ಅಶೋಕ ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ‘ಸೋಮಣ್ಣ ಅವರು ದೆಹಲಿಯಿಂದ ಮರಳಿದ ತಕ್ಷಣವೇ ನನಗೆ ದೂರವಾಣಿ ಕರೆ ಮಾಡಿ ಮಾತನಾಡಿದರು. ಎಲ್ಲವೂ ಒಳ್ಳೆಯದಾಗಿದೆ. ಸಮಸ್ಯೆ ಏನಿಲ್ಲ. ಪಕ್ಷದಲ್ಲಿ ಎಲ್ಲರೂ ಒಟ್ಟಿಗೆ ಕೆಲಸ ಮಾಡೋಣ. ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ’ ಎಂದು ಹೇಳಿದ್ದಾಗಿ  ವಿವರಿಸಿದರು. ‘ರಾಜ್ಯಸಭಾ ಟಿಕೆಟ್‌ ವಿಚಾರವನ್ನೂ ಸೋಮಣ್ಣ ಪ್ರಸ್ತಾಪಿಸಿದ್ದು ಹೈಕಮಾಂಡೇ ಹೇಳಿರುವುದರಿಂದ ನಮ್ಮ ತಕರಾರೇನೂ ಇಲ್ಲ’ ಎಂದೂ ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT