ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Belagavi Session: ಡಿಕೆಶಿ ಪ್ರಕರಣ ವಾಪಸ್‌- ಪರಸ್ಪರ ವಾಗ್ವಾದ

Published 15 ಡಿಸೆಂಬರ್ 2023, 20:04 IST
Last Updated 15 ಡಿಸೆಂಬರ್ 2023, 20:04 IST
ಅಕ್ಷರ ಗಾತ್ರ

ವಿಧಾನಸಭೆ/ ಪರಿಷತ್: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಆರೋಪದ ಮೇಲೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ವಿರುದ್ಧ ಸಿಬಿಐ ತನಿಖೆಗೆ ಹಿಂದಿನ ಸರ್ಕಾರ ನೀಡಿದ್ದ ಅನುಮತಿ ವಾಪಸ್ ಪಡೆದ ಪ್ರಕರಣವನ್ನು ವಿರೋಧ ಪಕ್ಷ ಬಿಜೆಪಿ ಉಭಯ ಸದನಗಳಲ್ಲೂ ಪ್ರಸ್ತಾಪಿಸಿತು.

ಕಾಂಗ್ರೆಸ್ ನೇತೃತ್ವದ ಸರ್ಕಾರದ ಕ್ರಮ ಪ್ರಶ್ನಿಸಿ ನಿಲುವಳಿ ಸೂಚನೆ ಮಂಡಿಸಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಶುಕ್ರವಾರ ಯತ್ನಿಸಿದರು. ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತಿದೆ ಎಂದು ಹೇಳಿ ಸಭಾಧ್ಯಕ್ಷ ಯು.ಟಿ.ಖಾದರ್ ಅವರು ಅವಕಾಶ ನಿರಾಕರಿಸಿದರು.

ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಅಶೋಕ, ರಾಜ್ಯ ಸಚಿವ ಸಂಪುಟದಲ್ಲಿ ತೆಗೆದುಕೊಂಡ ತೀರ್ಮಾನ ಸಂವಿಧಾನ ಬಾಹಿರವಾಗಿದೆ. ರಾಜಕೀಯ ದುರುದ್ದೇಶಗಳಿಂದ ಕೂಡಿದೆ ಎಂದು ಹರಿಹಾಯ್ದರು.

ಯಡಿಯೂರಪ್ಪ ಸರ್ಕಾರ ಇದ್ದಾಗ ಡಿ.ಕೆ.ಶಿವಕುಮಾರ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ್ದರು. ಹಿಂದೆ ಕಾಂಗ್ರೆಸ್‌ ಸರ್ಕಾರ ಇದೇ ರೀತಿ ಯಡಿಯೂರಪ್ಪ ಮತ್ತು ಜನಾರ್ದನ ರೆಡ್ಡಿ ಅವರ ವಿರುದ್ಧದ ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಿತ್ತು. ಆ ಬಳಿಕ ಬಿಜೆಪಿ ಸರ್ಕಾರ ಬಂದರೂ ಪ್ರಕರಣ ಹಿಂತೆಗೆದುಕೊಳ್ಳುವ ಕೆಲಸ ಮಾಡಲಿಲ್ಲ. ಆದರೆ ಈ ಸರ್ಕಾರ ತಮಗೆ ತೋಚಿದಂತೆ ನಿರ್ಣಯವನ್ನು ಕೈಗೊಳ್ಳುವ ಮೂಲಕ ನ್ಯಾಯಾಂಗದ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡಿದೆ ಎಂದು ದೂರಿದರು.

ಇದಕ್ಕೆ ಬಿಜೆಪಿಯ ಎಲ್ಲಾ ಶಾಸಕರು ದನಿಗೂಡಿಸಿ ಈ ಕುರಿತ ಚರ್ಚೆಗೆ ಅವಕಾಶ ನೀಡುವಂತೆ ಆಗ್ರಹಿಸಿದರು. ಅದನ್ನು ಸಭಾಧ್ಯಕ್ಷರು ಒಪ್ಪಲಿಲ್ಲ.

ಪರಿಷತ್‌ನಲ್ಲೂ ಆಗ್ರಹ

ಕಲಾಪ ಆರಂಭ ಆಗುತ್ತಿದ್ದಂತೆ ನಿಯಮ 59ರ ಅಡಿ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ, ‘ಸಿಬಿಐ ದಾಖಲಿಸಿಕೊಂಡಿದ್ದ ಪ್ರಕರಣ ವಾಪಸ್ ಪಡೆದಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ಈ ಕುರಿತು ಚರ್ಚೆಗೆ ಅವಕಾಶ ನೀಡಬೇಕು’ ಎಂದು ಕೋರಿದರು.‌

ಈ ವೇಳೆ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರು ಆರೋಪ– ಪ್ರತ್ಯಾರೋಪದಲ್ಲಿ ತೊಡಗಿದಾಗ, ತಮ್ಮ ಅಭಿಪ್ರಾಯ ತಿಳಿಸುವಂತೆ ಕಾನೂನು ಸಚಿವ ಎಚ್.ಕೆ. ಪಾಟೀಲರಿಗೆ ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದರು.

‘ಬಿಜೆಪಿ ಇದನ್ನು ನಿಲುವಳಿ ಸೂಚನೆಗೆ ಎತ್ತಿಕೊಂಡಿದ್ದೇ ತಪ್ಪು. ಯಾವ ವಿಚಾರ ನ್ಯಾಯಾಲಯದಲ್ಲಿ ಇದೆಯೊ ಅದನ್ನೇ ಚರ್ಚೆಗೆ ತಂದರೆ ಹೇಗೆ? ಅದಕ್ಕೆ ಅವಕಾಶ ಕೊಡಬಾರದು’ ಎಂದು ಎಚ್.ಕೆ. ಪಾಟೀಲ ಹೇಳಿದರು.

ಆಗ ಸಭಾಪತಿ, ‘ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವಾಗ ಚರ್ಚೆಗೆ ಅವಕಾಶ ನೀಡುವುದಿಲ್ಲ. ಇದು ನ್ಯಾಯಾಂಗ ನಿಂದನೆ ಆಗುತ್ತದೆ’ ಎಂದು ರೂಲಿಂಗ್ ನೀಡಿದರು. ಅದನ್ನು ಒಪ್ಪದ ಬಿಜೆಪಿ ಸದಸ್ಯರು ಚರ್ಚೆಗೆ ಅವಕಾಶ ನೀಡುವಂತೆ ಪಟ್ಟುಹಿಡಿದರು.

‘ಪ್ರಕರಣ ಕೋರ್ಟ್‌ನಲ್ಲಿ ಇರುವಾಗ ವಾಪಸ್ ಪಡೆದಿದ್ದು ಹೇಗೆ? ಇದು ನ್ಯಾಯಾಲಯದ ವಿಷಯದಲ್ಲಿ ಸರ್ಕಾರದ ಮಧ್ಯಪ್ರವೇಶ ಅಲ್ಲವೇ’ ಎಂದ ಬಿಜೆಪಿಯ ಎನ್‌. ರವಿಕುಮಾರ್ ಪ್ರಶ್ನಿಸಿದರು.

‘ಸರ್ಕಾರ ಅಡ್ಡದಾರಿ ಹಿಡಿದು ಸಿಬಿಐ ಕೇಸ್ ವಾಪಸ್ ಪಡೆದಿದೆ’ ಎಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದಾಗ, ‘ರಾಜಕೀಯ ದುರುದ್ದೇಶದಿಂದ ಸಿಬಿಐಗೆ ಕೊಟ್ಟಿದ್ದು ನೀವು’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸಭಾಪತಿ, ‘ಈ ವಿಷಯದ ಮೇಲೆ ಮತ್ತೆ ಮಾತನಾಡಬೇಡಿ’ ಎಂದು ಗರಂ ಆಗಿ ಚರ್ಚೆಗೆ ಅಂತ್ಯ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT