ಬೆಂಗಳೂರು: 'ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ವಿವಿಧ ಹಗರಣಗಳ ತನಿಖೆಯನ್ನು ಬೇರೆ ಬೇರೆ ಸಂಸ್ಥೆಗಳು ನಡೆಸುತ್ತಿದ್ದು, ಈ ಪ್ರಕರಣಗಳ ತನಿಖೆಯ ಪ್ರಗತಿ ಪರಿಶೀಲನೆಗೆ ವಾರದೊಳಗೆ ಸಮಿತಿ ಸಭೆ ನಡೆಸುತ್ತೇನೆ' ಎಂದು ಸಮಿತಿಯ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, 'ಎಲ್ಲ ಹಗರಣ ಪ್ರಕರಣಗಳನ್ನು ಗುರುತಿಸಿದ್ದೇವೆ. ಅವುಗಳ ತನಿಖೆ ಯಾವ ಹಂತದಲ್ಲಿವೆ ಎಂಬುದನ್ನು ಪರಿಶೀಲಿಸಿ, ಸಚಿವ ಸಂಪುಟಕ್ಕೆ ವರದಿ ಸಲ್ಲಿಸುತ್ತೇವೆ' ಎಂದರು.
'ತ್ವರಿತಗತಿಯಲ್ಲಿ ತನಿಖೆ ನಡೆಯಬೇಕು ಎಂಬ ಉದ್ದೇಶದಿಂದ ಮುಖ್ಯಮಂತ್ರಿಯವರು ಸಮಿತಿ ರಚಿಸಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಬಾಕಿ ಇರುವ ಪ್ರಕರಣಗಳ ಪ್ರಗತಿ ಪರಿಶೀಲನೆ ವೇಳೆ ಗಮನಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ವಿಚಾರ ಸಚಿವ ಸಂಪುಟ ಸಭೆಯ ಗಮನಕ್ಕೆ ಬಂದ ಬಳಿಕ ತ್ವರಿತಗತಿಯಲ್ಲಿ ಮಾಡಲು ಮುಖ್ಯಮಂತ್ರಿ ಸಮಿತಿ ರಚಿಸಿದ್ದಾರೆ' ಎಂದು ಹೇಳಿದರು.
'ಬಿಜೆಪಿಯವರು ಏನಾದರು ಹೇಳಿಕೊಳ್ಳಲಿ. ನಮ್ಮನ್ನು ಟೀಕೆ ಮಾಡುವುದಕ್ಕೆ, ಸಲಹೆ ನೀಡಲು, ತಪ್ಪು ಮಾಡಿದಾಗ ಹೇಳುವುದಕ್ಕೆ ಅವರಿಗೆ ಜವಾಬ್ಧಾರಿಗಳಿರುತ್ತವೆ. ಆಡಳಿತ ನಡೆಸುವರಿಗೂ ಅವರಿಗೆ ಆದಂತಹ ಜವಾಬ್ದಾರಿಗಳಿರುತ್ತವೆ' ಎಂದರು.
'ಮುಖ್ಯಮಂತ್ರಿ ಸ್ಥಾನದ ಬಗ್ಗೆ ಚರ್ಚೆ ಅನಗತ್ಯ. ನಾವು ಜನರಿಗೆ ಕೊಟ್ಟ ಭರವಸೆಗಳನ್ನು, ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಆಡಳಿತ ಮಾಡಬೇಕು. ಬಿಜೆಪಿಯವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಸರ್ಕಾರವನ್ನು ಅಸ್ಥಿರಗೊಳಿಸಲು, ಸರ್ಕಾರದ ಕಾರ್ಯಕ್ರಮಗಳು ಅನುಷ್ಟಾನ ಆಗಬಾರದು ಎಂಬ ಉದ್ದೇಶದಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆ. ಇದೆಲ್ಲವನ್ನು ಬದಿಗೊತ್ತಿ ನಾವು ಕೆಲಸ ಮಾಡಬೇಕಿದೆ' ಎಂದು ಹೇಳಿದರು.
'ಮುಖ್ಯಮಂತ್ರಿ ಸ್ಥಾನದ ಚರ್ಚೆಯ ಬಗ್ಗೆ ಶಿಸ್ತು ಕ್ರಮದ ಕುರಿತು ಪಕ್ಷದ ಅಧ್ಯಕ್ಷರು ಕಡಿವಾಣ ಹಾಕುತ್ತಾರೆ. ಅಧ್ಯಕ್ಷರು ಅಮೆರಿಕ ಪ್ರವಾಸದಲ್ಲಿದ್ದು, ಬಂದನಂತರ ಈ ಬಗ್ಗೆ ಗಮನ ಹರಿಸುತ್ತಾರೆ' ಎಂದು ಸ್ಪಷ್ಟಪಡಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಹಗರಣದ ಇ.ಡಿ. ಚಾರ್ಜ್‌ಶೀಟ್ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ, 'ನಾವ್ಯಾರೋ ಹೇಳಿದ ಹೇಳಿಕೆ ಮುಖ್ಯವಲ್ಲ. ತನಿಖಾ ಸಂಸ್ಥೆಗಳು ಸಿಕ್ಕಂತಹ ಸಾಕ್ಷ್ಯಾಧಾರಗಳ ಆಧಾರದ ಮೇಲೆ ತೀರ್ಮಾನ ಮಾಡುತ್ತಾರೆ. ನಾವು ನೀಡುವ ಹೇಳಿಕೆಗಳು ಮೇಲ್ನೋಟಕ್ಕೆ ಮಾತ್ರ. ತನಿಖೆ ಕೈಗೊಂಡ ಬಳಿಕ ಸತ್ಯಾಸತ್ಯತೆ ಗೊತ್ತಾಗುತ್ತದೆ. ಮಾಜಿ ಸಚಿವ ನಾಗೇಂದ್ರ ಅವರ ಪಾತ್ರ ಇದೆ ಎಂದು ಇ.ಡಿ.ಯವರು ಹೇಳುತ್ತಿದ್ದಾರೆ. ಬೇಕಾದಷ್ಟು ಸಲ ಹಾಗೇ ಆಗುತ್ತದೆ. ಅವರು ಹೇಳಿರುವುದಕ್ಕೆ ನಮಗೆ ಸಾಕ್ಷ್ಯ ಸಿಕ್ಕಿರುವುದಿಲ್ಲ. ನಾವು ಹೇಳಿರುವುದಕ್ಕೆ ಅವರಿಗೆ ಸಾಕ್ಷ್ಯ ಸಿಕ್ಕಿರುವುದಿಲ್ಲ. ಬೇಕಾದಷ್ಟು ಸಲ ಹೀಗಾಗಿದೆ. ವಿವಿಧ ತನಿಖಾ ಸಂಸ್ಥೆಗಳ ತನಿಖಾ ವಿಧಾನವೇ ಬೇರೆ ಇರುತ್ತದೆ. ಆ ದೃಷ್ಟಿಯಿಂದ ಮಾಡುತ್ತಾರೆ. ಇ.ಡಿ.ಯವರು ಮತ್ತು ಎಸ್‌ಐಟಿಯವರು ಇಬ್ಬರು ಚಾರ್ಜ್‌ಶೀಟ್ ಸಲ್ಲಿಸುತ್ತಾರೆ' ಎಂದು ಹೇಳಿದರು.
ಡಿಕೆಶಿ- 'ರಾಹುಲ್ ಗಾಂಧಿ ಭೇಟಿ ಆಕಸ್ಮಿಕ:-
ಅಮೆರಿಕಾದಲ್ಲಿ ಡಿ.ಕೆ. ಶಿವಕುಮಾರ್ ಮತ್ತು ರಾಹುಲ್ ಗಾಂಧಿ ಭೇಟಿಯಾಗಿರುವುದು ನನಗೆ ಗೊತ್ತಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಬಂದಿರುವ ಫೋಟೊಗಳನ್ನು ಗಮನಿಸಿದ್ದೇನೆ. ಅವರು ಕುಟುಂಬ ಸಮೇತ ಅಮೆರಿಕಾ ಪ್ರವಾಸ ಹೋಗಿದ್ದಾರೆ. ಆಕಸ್ಮಿಕವಾಗಿ ಅದೇ ಹೋಟೆಲ್‌ನಲ್ಲಿ ಸಿಕ್ಕಿದ್ದಾರೆ ಎಂದರೆ, ಓಡಿ ಹೋಗಲು ಆಗುತ್ತಾ? ಅವರಿಗೆ ಸತ್ಕರಿಸಿರುತ್ತಾರೆ. ಅದು ಬಿಟ್ಟರೆ ಬೇರೆನು ಗೊತ್ತಿಲ್ಲ' ಎಂದರು.
'ಯಾವುದೇ ಬಿಪಿಎಲ್ ಕಾರ್ಡ್‌ಗಳನ್ನು ಕಡಿತ ಮಾಡುವುದಿಲ್ಲ. ತೆರಿಗೆ ಪಾವತಿ ಮಾಡುತ್ತಿರುವವರು ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರಲ್ಲ ಎಂಬುದು ನಿಯಮದಲ್ಲಿದೆ. ಸುಳ್ಳು ದಾಖಲೆ ಸಲ್ಲಿಸಿ, ಅಧಿಕಾರಿಗಳ ಮನವೊಲಿಸಿ ಕಾರ್ಡ್ ಪಡೆದಿರುವುದು ತಪ್ಪಲ್ಲವೇ? ಯಾರ ಕಾರ್ಡ್‌ನ್ನು ತೆಗೆಯಲು ಹೋಗುವುದಿಲ್ಲ' ಎಂದರು..
'ಸರ್ಕಾರ ಬಡವರ ಅನ್ನ ಕಿತ್ತುಕೊಳ್ಳುವ ಯತ್ನ ಮಾಡುತ್ತಿದೆ ಎಂದಿರುವ ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಏನೋ ಹೇಳುತ್ತಾರೇ ಪಾಪ. ಎಚ್.ಡಿ.ಕುಮಾರಸ್ವಾಮಿ ಅವರು ದೊಡ್ಡ ಜವಾಬ್ಧಾರಿಯಲ್ಲಿದ್ದಾರೆ. ರಾಜ್ಯಕ್ಕೆ ದೊಡ್ಡ ಕೈಗಾರಿಕೆ, ಸ್ಟೀಲ್ ಇಂಡಸ್ಟ್ರೀಸ್ ನೀಡಿದರೆ ಚೆಂದ' ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.