ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆಗೆ ಕೊರಗುವವರು ಪಾಕಿಸ್ತಾನ ನೋಡಿ: ನಟಿ ತಾರಾ ಅನುರಾಧ

ಬಿಜೆಪಿ ಮಹಿಳಾ ಮೋರ್ಚಾ ಸಮಾವೇಶದಲ್ಲಿ ನಟಿ ತಾರಾ ಅನುರಾಧ ಹೇಳಿಕೆ
Last Updated 25 ಫೆಬ್ರುವರಿ 2023, 12:28 IST
ಅಕ್ಷರ ಗಾತ್ರ

ಚಿತ್ರದುರ್ಗ: ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂಬುದಾಗಿ ಕೊರಗುವ ಮುನ್ನ ಪಕ್ಕದ ದೇಶಗಳನ್ನು ಒಮ್ಮೆ ನೋಡಿ. ಪಾಕಿಸ್ತಾನ, ಶ್ರೀಲಂಕ, ಬಾಂಗ್ಲಾದೇಶ, ಚೀನಾ, ನೇಪಾಳದ ಸ್ಥಿತಿ ಗಮನಿಸಿದರೆ ಭಾರತದ ಜೀವನ ಭದ್ರತೆಯ ಬಗ್ಗೆ ಹೆಮ್ಮೆ ಪಡುತ್ತೀರಿ ಎಂದು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ, ನಟಿ ತಾರಾ ಅನುರಾಧ ಅಭಿಪ್ರಾಯಪಟ್ಟರು.

ಇಲ್ಲಿನ ಚಂದ್ರವಳ್ಳಿ ಆಟದ ಮೈದಾನದಲ್ಲಿ ಬಿಜೆಪಿ‌ ಮಹಿಳಾ ಮೋರ್ಚಾ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಅಡುಗೆ ಅನಿಲ, ಪೆಟ್ರೋಲ್‌, ಚಿನ್ನದ ಬೆಲೆ ಹೆಚ್ಚಾಯಿತು ಎಂಬ ಆರೋಪವನ್ನು ಕಾಂಗ್ರೆಸ್ ಮಾಡುತ್ತಿದೆ. ಇಂತಹ ಆರೋಪಗಳಿಗೆ ಕಿವಿಗೊಡುವ ಮುನ್ನ ನೆರೆಹೊರೆಯ ದೇಶಗಳ ಸ್ಥಿತಿಗೆ ಹೋಲಿಕೆ ಮಾಡಿ ನೋಡಿ. ಪಾಕಿಸ್ತಾನದಲ್ಲಿ ಪೆಟ್ರೋಲ್‌, ಡೀಸೆಲ್‌, ಅಕ್ಕಿ ಬೆಲೆ ಎಷ್ಟಾಗಿದೆ ಎಂಬುದು ಗೊತ್ತಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಆಡಳಿತದ ಕಾರಣಕ್ಕೆ ಭಾರತಕ್ಕೆ ಇನ್ನೂ ಇಂತಹ ಸ್ಥಿತಿ ಬಂದಿಲ್ಲ’ ಎಂದು ಪ್ರತಿಪಾದಿಸಿದರು.

‘ಕೇಂದ್ರದಲ್ಲಿ ಯುಪಿಎ ಸರ್ಕಾರ ಆಡಳಿತ ಮಾಡಿದ ಹತ್ತು ವರ್ಷಗಳಲ್ಲಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ವಿಶ್ವದ ಹತ್ತನೇ ಶ್ರೀಮಂತ ಮಹಿಳೆಯಾಗಿ ಬೆಳೆದರು. ಆದರೆ, ಮೋದಿ ಅವರ ಐದು ವರ್ಷಗಳ ಆಳ್ವಿಕೆಯ ಅವಧಿಯಲ್ಲಿ ಭಾರತ ಮೋರನೇ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮಿತು. ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ದೇಶದ ಜಿಡಿಪಿ ದರ ಶೇ 4.77 ಇತ್ತು. ಚಾಯ್‌ವಾಲ ಮೋದಿ ಪ್ರಧಾನಿಯಾದಾಗ ಇದೇ ಜಿಡಿಪಿ ದರ ಶೇ 7.2ಕ್ಕೆ ಏರಿಕೆಯಾಯಿತು. ಎಂತಹ ಪಕ್ಷ, ನಾಯಕ ಬೇಕು ಎಂಬ ಆಯ್ಕೆ ನಿಮ್ಮ ಮುಂದಿದೆ’ ಎಂದು ಹೇಳಿದರು.

ಸಮಾವೇಶ ಉದ್ಘಾಟಿಸಿದ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ‘ಸ್ವಾತಂತ್ರ್ಯ ಸಿಕ್ಕ ಆರಂಭದ 60 ವರ್ಷ ದೇಶದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್‌ ಈಗ ಉಚಿತ ವಿದ್ಯುತ್‌, ಪಡಿತರ ನೀಡುವ ಆಶ್ವಾಸನೆ ನೀಡುತ್ತಿದೆ. ಅಧಿಕಾರದಲ್ಲಿದ್ದ ಅವಧಿಯಲ್ಲಿ ಎಂತಹ ಆಡಳಿತ ನೀಡಿತು ಎಂಬುದಕ್ಕೆ ಇದೇ ಸಾಕ್ಷಿ. ಯುವಜನರಿಗೆ ಉದ್ಯೋಗ, ಮಹಿಳೆಯರಿಗೆ ನೆರವು ನೀಡುವ ಕಾರ್ಯವನ್ನು ಕಾಂಗ್ರೆಸ್‌ ಈವರೆಗೆ ಮಾಡಿಲ್ಲ. ಹುಸಿ ಭರವಸೆಗಳಿಗೆ ಮತದಾರರು ಮರಳಾಗಬಾರದು’ ಎಂದರು.

‘ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಹಾಗೂ ಬಿ.ಎಸ್‌.ಯಡಿಯೂರಪ್ಪ ನೀಡಿದ ಕಾರ್ಯಕ್ರಮಗಳನ್ನು ಪ್ರತಿ ಮನೆಗೆ ತಲುಪಿಸಬೇಕಿದೆ. ಜನಪರ ಯೋಜನೆ ಬಗ್ಗೆ ಜನರಿಗೆ ಮಾಹಿತಿ ನೀಡಬೇಕಿದೆ. ಎರಡು ತಿಂಗಳಲ್ಲಿ ಚುನಾವಣೆ ಬರಲಿದೆ. ಕಾರ್ಯಕರ್ತರು ಶ್ರಮವಹಿಸಿ ಕೆಲಸ ಮಾಡಬೇಕು. ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ಹೇಳಿದರು.

ಹಿರಿಯೂರು ಶಾಸಕಿ ಕೆ.ಪೂರ್ಣಿಮಾ, ‘ದುಡಿದು ಕುಟುಂಬ ನಿರ್ವಹಿಸುವ ಮಹಿಳೆಯರಿಗೆ ಸರ್ಕಾರ ಹಲವು ಯೋಜನೆ ನೀಡಿದೆ. ಮಹಿಳೆ ಇನ್ನಷ್ಟು ಸಬಲಾರಾಗಬೇಕು ಎಂಬುದು ಸರ್ಕಾರದ ಆಶಯ. ಹೆಣ್ಣು ಭ್ರೂಣ ಹತ್ಯೆ ತಡೆಯಲು ಬಿ.ಎಸ್.ಯಡಿಯೂರಪ್ಪ ಅವರು ಭಾಗ್ಯಲಕ್ಷ್ಮಿ ಯೋಜನೆ ರೂಪಿಸಿದರು. ಹೆಣ್ಣು ಮಕ್ಕಳು ಕುಟುಂಬಕ್ಕೆ ಭಾರ ಎಂಬ ಅಪವಾದವನ್ನು ತೊಡೆದು ಹಾಕಲು ಪ್ರಯತ್ನ ಮಾಡಿದರು. ಬಿಸಿಯೂಟ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಸಹಾಯಧನವನ್ನು ಹೆಚ್ಚು ಮಾಡಲಾಗಿದೆ’ ಎಂದು ಹೇಳಿದರು.

‘ಮಹಿಳಾ ಸಬಲೀಕರಣಕ್ಕೆ ಒತ್ತು’

ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಒತ್ತು ನೀಡಿದೆ. ಹೆಣ್ಣು ಮಕ್ಕಳ ಏಳಿಗೆಗಾಗಿ ಸುಕನ್ಯಾ ಸಮೃದ್ಧಿ, ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷೆ ಗೀತಾ ವಿವೇಕಾನಂದ ತಿಳಿಸಿದರು.

‘ಮೋದಿ ಅವರು ಶೌಚಾಲಯ ನಿರ್ಮಾಣಕ್ಕೆ ಒತ್ತು ನೀಡಿದರು. ಇದರಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಮತದಾನ ಮಾಡುವ ಮುನ್ನ ಜವಾಬ್ದಾರಿಯಿಂದ ನಿರ್ಧಾರ ಕೈಗೊಳ್ಳಿ. ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿಗೆ ನೆರವಾಗಿ’ ಎಂದು ಕೋರಿಕೊಂಡರು.

‘ಸ್ತ್ರೀಗೆ ಉನ್ನತ ಸ್ಥಾನ’

ಸ್ತ್ರೀಯರಿಗೆ ಬಿಜೆಪಿ ಉನ್ನತ ಸ್ಥಾನಗಳನ್ನು ನೀಡುತ್ತಿದೆ. ರಾಷ್ಟ್ರಪತಿ ಹುದ್ದೆಯನ್ನು ಪರಿಶಿಷ್ಟ ಪಂಗಡದ ದ್ರೌಪತಿ ಮುರ್ಮು ಅವರಿಗೆ ಕಲ್ಪಿಸಿ ಔದಾರ್ಯ ಮೆರೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಅಭಿಪ್ರಾಯಪಟ್ಟರು.

‘ಹೆಣ್ಣು ಮಕ್ಕಳ ಶಿಕ್ಷಣ, ಸ್ವಸಹಾಯ ಗುಂಪು, ಕಾರ್ಖಾನೆ ಸ್ಥಾಪನೆಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಕಿರು ಉದ್ದಿಮೆಗೆ ಶೇ 50 ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಪುರುಷರ ಮೇಲಿನ ಅವಲಂಬನೆ ಕಡಿಮೆ ಮಾಡಲು ಸ್ತ್ರೀ ಸಾಮರ್ಥ್ಯ ಯೋಜನೆಯಡಿ ಹೆಚ್ಚು ಸಹಾಯಧನ ನೀಡಲಾಗುತ್ತಿದೆ’ ಎಂದು ಹೇಳಿದರು.

ಬಿಜೆಪಿ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ವಿಜಯ ರಾಟ್ಕರ್, ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಶೈಲಜಾ ರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ, ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್, ಮುಖಂಡರಾದ ಎಸ್.ಲಿಂಗಮೂರ್ತಿ, ನರೇಶ್, ಶಿಲ್ಪಾ ಸುವರ್ಣ, ಶ್ಯಾಮಲಾ, ಚಂದ್ರಿಕಾ ಇದ್ದರು.

ಮಹಿಳೆಯರ ಬಗ್ಗೆ ಇಂದಿರಾ ಗಾಂಧಿ ಅವರಿಗಿಂತ ಹೆಚ್ಚು ಕಾಳಜಿ ತೋರಿದ್ದು ಮೋದಿ. ಸೌದೆ ಉರಿಸುವುದರಿಂದ ಆಗುತ್ತಿದ್ದ ಪರಿಣಾಮ ಅರಿತು ಅಡುಗೆ ಅನಿಲ ಉಚಿತವಾಗಿ ನೀಡಿದರು.

-ಎಂ.ಚಂದ್ರಪ್ಪ, ಶಾಸಕ, ಹೊಳಲ್ಕೆರೆ

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ವಿಶೇಷ ಗಮನ ಹರಿಸಿದ್ದು ಬಿ.ಎಸ್.ಯಡಿಯೂರಪ್ಪ. ಸೈಕಲ್ ನೀಡಿದ್ದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಯಿತು.

-ಜಿ.ಎಚ್.ತಿಪ್ಪಾರೆಡ್ಡಿ, ಶಾಸಕ, ಚಿತ್ರದುರ್ಗ

ಸ್ತ್ರೀಯರಿಗೆ ರಕ್ಷಣೆ ಮಾಡುವ ಬದಲು ಹಗುರವಾಗಿ ನಡೆದುಕೊಂಡಿದ್ದು ಕಾಂಗ್ರೆಸ್‌. ಅಭದ್ರತೆ, ಅಸುರಕ್ಷಿತ ವಾತಾವರಣ ನಿರ್ಮಿಸಿತ್ತು. ಮಹಿಳೆ ತಲೆ ಎತ್ತಿ ನಡೆಯದಂತಹ ಸ್ಥಿತಿ ಸೃಷ್ಟಿಸಿತ್ತು.

-ಕೆ.ಎಸ್. ನವೀನ್, ವಿಧನಾಪರಿಷತ್ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT