ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಯತ್ನಾಳ್‌- ಬೊಮ್ಮಾಯಿ ವಾಕ್ಸಮರ

ವಿರೋಧಿಗಳನ್ನು ಮನೆಯೊಳಗೆ ಬಿಟ್ಟುಕೊಳ್ಳಬೇಡಿ ಎಂದ ಯತ್ನಾಳ್‌, ರಾಜೀ ಇಲ್ಲ ಎಂದ ಬೊಮ್ಮಾಯಿ
Published 25 ಜೂನ್ 2023, 15:25 IST
Last Updated 25 ಜೂನ್ 2023, 15:25 IST
ಅಕ್ಷರ ಗಾತ್ರ

ಬೆಳಗಾವಿ: ನಗರದಲ್ಲಿ ಭಾನುವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೀಡಿದ ಮಾತಿನೇಟಿಗೆ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಷ್ಟೇ ತೀಕ್ಷ್ಣವಾಗಿ ತಿರುಗೇಟು ಕೊಟ್ಟರು.

‘ವಿರೋಧಿಗಳನ್ನು ಮನೆಯೊಳಗೆ ಬಿಟ್ಟುಕೊಳ್ಳಬೇಡಿ‌’

ಮೊದಲು ಮಾತನಾಡಿದ ಬಸನಗೌಡ ಪಾಟೀಲ ಯತ್ನಾಳ್‌, ‘ಕಾಂಗ್ರೆಸ್‌ ಸರ್ಕಾರ ಐದು ವರ್ಷ ಉಳಿಯುವುದಿಲ್ಲ. ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡುವುದಿಲ್ಲ. ಆಗ ಡಿ.ಕೆ.ಶಿವಕುಮಾರ ಅವರು ಬಸವರಾಜ ಬೊಮ್ಮಾಯಿ ಅವರ ಮನೆಗೆ ಬರುತ್ತಾರೆ. ಆ ಮೂಲಕ ಸೋನಿಯಾ ಗಾಂಧಿ ಅವರನ್ನು ಹೆದರಿಸಲು ಯತ್ನಿಸುತ್ತಾರೆ. ಬೊಮ್ಮಾಯಿ ಅವರೇ ಇಂಥದ್ದಕ್ಕೆ ಅವಕಾಶ ಕೊಡಬೇಡಿ. ಅಂಥವರನ್ನು ಮನೆಯೊಳಗೆ ಬಿಟ್ಟುಕೊಳ್ಳಬೇಡಿ’ ಎಂದು ಹೇಳಿದರು.

‘ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಶಾಮನೂರು ಶಿವಶಂಕರಪ್ಪ ಅವರು ಈಚೆಗೆ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಮನೆಗೆ ಭೇಟಿ ನೀಡಿದ್ದಾರೆ. ಸೌಜನ್ಯದ ಭೇಟಿ ಎನ್ನುತ್ತಾರೆ. ಆದರೆ, ಉದ್ದೇಶವೇ ಬೇರೆ. ಮುಖ್ಯಮಂತ್ರಿ ಕುರ್ಚಿಗಾಗಿ ಬರುವ ಅವರನ್ನು ನಾವೇಕೆ ಮನೆಗೆ ಬಿಟ್ಟುಕೊಳ್ಳಬೇಕು’ ಎಂದೂ ಪ್ರಶ್ನಿಸಿದರು.

‘ವಿರೋಧ ಪಕ್ಷದವರ ಜತೆಗೆ ಮಾತನಾಡುವುದಿಲ್ಲ, ಮನೆಗೆ ಹೋಗುವುದಿಲ್ಲ, ಅವರ ಮುಖವನ್ನೂ ನೋಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅದೇ ರೀತಿ ನಾವು ಕೂಡ ಇನ್ನು ಮುಂದೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಅವರ ಮನೆಗೆ ಹೋಗುವುದಿಲ್ಲ, ಫೋನಿನಲ್ಲಿ ಮಾತನಾಡುವುದಿಲ್ಲ, ಹಲ್ಲು ಕಿಸಿಯುವುದಿಲ್ಲ ಎಂದು ನಿರ್ಧಾರ ಮಾಡೋಣ. ಹಾಗಾದರೆ ಮಾತ್ರ ಪಕ್ಷ ಉಳಿಯುತ್ತದೆ. ನೀವು ಸ್ವಾಗತ–ಸುಸ್ವಾಗತ ಎಂದರೆ ನಮ್ಮ ಕಾರ್ಯಕರ್ತರು ಮಲಗಿ ಬಿಡುತ್ತಾರೆ’ ಎಂದು ಯತ್ನಾಳ್ ಹೇಳಿದರು.

‘ಮನೆಗೆ ಬರುವವರನ್ನು ಬೇಡ ಎನ್ನಲ್ಲು ಆಗುವುದಿಲ್ಲ’

ಇದಕ್ಕೆ ವೇದಿಕೆಯಲ್ಲೇ ತಿರುಗೇಟು ನೀಡಿದ ಬಸವರಾಜ ಬೊಮ್ಮಾಯಿ, ‘ನಾನು ಎಂದಿಗೂ ರಾಜಿ ರಾಜಕಾರಣ ಮಾಡಿಲ್ಲ. ಮಾಡುವುದೂ ಇಲ್ಲ. ಮನೆಗೆ ಬರುವವರನ್ನು ಬೇಡ ಎನ್ನಲು ಆಗುವುದಿಲ್ಲ. ಅದು ಕನ್ನಡಿಗರ ಸೌಜನ್ಯ. ಯಾರೋ ಮನೆಗೆ ಬಂದ ತಕ್ಷಣ ನಾವು ರಾಜಿ ಆಗುವುದಿಲ್ಲ ಗೌಡ್ರೆ. ನೀವು ತಲೆ ಕೆಡಿಸಿಕೊಳ್ಳಬೇಡಿ. ಕೆಲವರು ಮನೆಗೆ ಹೋಗದೆಯೇ ಒಳಗೊಳಗೇ ರಾಜಿ ಆಗಿದ್ದಾರೆ. ಇದು ಎಲ್ಲರಿಗೂ ಗೊತ್ತಿದೆ. ನಾವು ಬಹಿರಂಗವಾಗಿ, ಸ್ಪಷ್ಟವಾಗಿದ್ದೇವೆ’ ಎಂದು ಹೇಳಿದರು.

‘ಬಿಜೆಪಿ ತಾಯಿಯ ಸಮಾನ. ಕಾರ್ಯಕರ್ತರು ಅಣ್ಣ–ತಮ್ಮಂದಿರು, ಅಕ್ಕ–ತಂಗಿಯರ ಸಮಾನ. ಕಾರ್ಯಕರ್ತರಿಗೆ ದ್ರೋಹ ಮಾಡುವ ಕೆಲಸ ಮಾಡಿಲ್ಲ’ ಎಂದರು.

ಬಸನಗೌಡ ಪಾಟೀಲ ಯತ್ನಾಳ್
ಬಸನಗೌಡ ಪಾಟೀಲ ಯತ್ನಾಳ್

‘ಅಕ್ಕಿ ಖರೀದಿಯಲ್ಲಿದೆ ಕರಾಳ ಮುಖ’

‘ವಿವೇಚನೆ ಇಲ್ಲದೇ ಕಾಂಗ್ರೆಸ್‌ನವರು ಉಚಿತ ಅಕ್ಕಿ ಘೋಷಿಸಿದ್ದಾರೆ. ಅಕ್ಕಿ ಖರೀದಿಯಲ್ಲಿ ಕೆಲ ಸಚಿವರು ‘ಪರ್ಸೆಂಟೇಜ್‌’ ಹಂಚಿಕೊಳ್ಳುತ್ತಿದ್ದಾರೆ. ಖರೀದಿಯಲ್ಲಿ ಏನೆಲ್ಲ ಹುನ್ನಾರ ನಡೆದಿದೆ ಎಂದು ನನಗೆ ಗೊತ್ತಿದೆ. ಶೀಘ್ರದಲ್ಲೇ ಇವರ ಕರಾಳ ಮುಖ ಬಯಲಾಗುತ್ತದೆ’ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು. ‘ಕಾಂಗ್ರೆಸ್‌ಗೆ ಇರುವುದು ಎರಡೇ ಪ್ರಶ್ನೆ. ಒಂದು ಮೋದಿ ಅವರನ್ನು ಹೇಗೆ ಸೋಲಿಸುವುದು? ಇನ್ನೊಂದು ರಾಹುಲ್‌ ಗಾಂಧಿ ಮದುವೆ ಯಾವಾಗ ಮಾಡುವುದು? ಇವೆರಡೂ ಸಾಧ್ಯವಿಲ್ಲ’ ಎಂದು ಅವರು ಲೇವಡಿ ಮಾಡಿದರು. ‘ಮೋದಿ ಅವರನ್ನು ಎದುರಿಸುವಂಥ ವಿರೋಧ ಪಕ್ಷವೂ ಇಲ್ಲ ವಿರೋಧ ನಾಯಕನೂ ಇಲ್ಲ. ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗಲೂ 25 ಸಂಸದ ಸ್ಥಾನ ಗೆಲ್ಲಿಸಿದ್ದೇವೆ. ಈ ಬಾರಿ ಎಲ್ಲ 28 ಸ್ಥಾನಗಳನ್ನೂ ಗೆಲ್ಲಿಸೋಣ’ ಎಂದು ಅವರು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT