ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಗಳವಾರ ಬಿಜೆಪಿ ನೂತನ ಪದಾಧಿಕಾರಿಗಳ ಸಭೆ

ಪದಾಧಿಕಾರಿ ನೇಮಕ: ಎಲ್ಲ ಸಮಾಜ, ಪ್ರದೇಶಗಳಿಗೂ ಆದ್ಯತೆ–ವಿಜಯೇಂದ್ರ
Published 24 ಡಿಸೆಂಬರ್ 2023, 14:58 IST
Last Updated 24 ಡಿಸೆಂಬರ್ 2023, 14:58 IST
ಅಕ್ಷರ ಗಾತ್ರ

ಬೆಂಗಳೂರು: 'ರಾಜ್ಯ ಬಿಜೆಪಿಯ ನೂತನ ಪದಾಧಿಕಾರಿಗಳ ಪಟ್ಟಿಯಲ್ಲಿ ವಿವಿಧ ಸಮಾಜಗಳು, ಪಂಗಡಗಳು, ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಸೇರಿ ಎಲ್ಲ ಭಾಗಗಳಿಗೂ ಪ್ರಾತಿನಿಧ್ಯ ನೀಡಲಾಗಿದೆ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು, ‘ಪದಾಧಿಕಾರಿ ಪಟ್ಟಿಯಲ್ಲಿ ಪಕ್ಷವು ಯುವಕರು ಮತ್ತು ಹಿರಿಯರಿಗೆ ಆದ್ಯತೆ ನೀಡಿದೆ. ಭ್ರಷ್ಟ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹೋರಾಟ ಮಾಡುವುದರ ಜತೆಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲೂ ಪಕ್ಷದ ಎಲ್ಲ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ’ ಎಂದು ಹೇಳಿದರು.

‘ಮಂಗಳವಾರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಎಲ್ಲ ನೂತನ ಪದಾಧಿಕಾರಿಗಳ ಸಭೆ ಕರೆದಿದ್ದೇನೆ. ಮುಂದಿನ ಲೋಕಸಭಾ ಚುನಾವಣೆವರೆಗೂ ನಾವು ವಿಶ್ರಾಂತಿ ಪಡೆಯುವ ಪ್ರಶ್ನೆಯೇ ಇಲ್ಲ. ನಾವೆಲ್ಲರೂ ಒಗ್ಗಟ್ಟಿನಿಂದ, ಒಂದಾಗಿ ಪಕ್ಷದ ಸಂಘಟನೆಗೆ ಬಲ ತುಂಬಬೇಕೆಂಬ ಸಂದೇಶ ಕೊಡಲಿದ್ದೇವೆ’ ಎಂದು ವಿಜಯೇಂದ್ರ ತಿಳಿಸಿದರು.

‘ಮೈತ್ರಿ ವಿಚಾರವಾಗಿ ಎಚ್‌.ಡಿ. ಕುಮಾರಸ್ವಾಮಿ ಅವರ ಜೊತೆ ದೆಹಲಿಯಲ್ಲಿ ಚರ್ಚಿಸಿದ್ದೇವೆ. ಲೋಕಸಭಾ ಚುನಾವಣೆ, ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತ್ತೊಮ್ಮೆ ಕುಳಿತು ಚರ್ಚಿಸಿ ಸುಸೂತ್ರವಾಗಿ ಎಲ್ಲ ವಿಷಯಗಳನ್ನು ಶೀಘ್ರವೇ ಬಗೆಹರಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಕ್ಕಳ ಭವಿಷ್ಯದ ಜತೆ ಚೆಲ್ಲಾಟ ಆಡುತ್ತಿದ್ದಾರೆ. ಕನಿಷ್ಠ ಶಿಕ್ಷಣ ಕ್ಷೇತ್ರವನ್ನಾದರೂ ಕೆಟ್ಟ ರಾಜಕೀಯದಿಂದ ದೂರವಿಡಲಿ. ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವುದೇಕೆ? ಮೊದಲಿಗೆ ಹೇಳುವುದನ್ನು ಹೇಳಿ, ನಂತರ ನಾನು ಆ ರೀತಿ ಹೇಳಿಯೇ ಇಲ್ಲ ಎನ್ನುತ್ತಾರೆ. ರಾಜ್ಯದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ’ ಎಂದರು.


ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT