ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

BJP ರಾಜ್ಯ ಸಂಘಟನಾ ಕಾರ್ಯದರ್ಶಿ ಹುದ್ದೆಯಿಂದ ಜಿ.ವಿ. ರಾಜೇಶ್‌ ದಿಢೀರ್ ಎತ್ತಂಗಡಿ!

Published 25 ಮೇ 2024, 16:16 IST
Last Updated 25 ಮೇ 2024, 16:16 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹುದ್ದೆಯಿಂದ ಜಿ.ವಿ. ರಾಜೇಶ್‌ ಅವರನ್ನು ದಿಢೀರ್ ಎತ್ತಂಗಡಿ ಮಾಡಲಾಗಿದ್ದು, ರಾಷ್ಟ್ರೀಯ ಸ್ವಯಸೇವಕ ಸಂಘದ ಸಹ ಸಂಸ್ಥೆ ‘ಸಾಮರಸ್ಯ’ದ ಹೊಣೆ ವಹಿಸಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನವರಾದ ರಾಜೇಶ್, ಆರ್‌ಎಸ್‌ಎಸ್‌ ಪ್ರಚಾರಕರಾಗಿ ಹಲವು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಿದ್ದರು.  2022ರ ಜುಲೈನಲ್ಲಿ ಅವರನ್ನು ‘ಸಂಘ’ವು ಪಕ್ಷದ ಕೆಲಸಕ್ಕೆ ನಿಯೋಜಿಸಿತ್ತು. ಪ್ರಚಾರಕ ಹುದ್ದೆಯಿಂದ ಸಂಘಟನಾ ಕಾರ್ಯದರ್ಶಿಯಂತಹ ಅತ್ಯಂತ ಜವಾಬ್ದಾರಿಯ, ಮಹತ್ವದ ಹುದ್ದೆಗೆ ಬಂದವರ ಅವಧಿ ಸಾಮಾನ್ಯವಾಗಿ ಮೂರು ವರ್ಷ ಇರುತ್ತದೆ. ಅವಧಿಪೂರ್ಣವೇ ಅವರನ್ನು ಬದಲಾವಣೆ ಮಾಡಿರುವುದು ಪಕ್ಷದೊಳಗೆ ಹಲವು ಚರ್ಚೆಯನ್ನು ಹುಟ್ಟುಹಾಕಿದೆ. ‌

ಜವಾಬ್ದಾರಿಯಿಂದ ಬಿಡುಗಡೆ ಮಾಡುವಂತೆ ರಾಜೇಶ್ ಅವರೇ ಸಂಘದ ಪ್ರಮುಖರನ್ನು ಕೇಳಿಕೊಂಡಿದ್ದರು ಎಂಬ ಚರ್ಚೆಯೂ ನಡೆದಿದೆ. 

ಪಕ್ಷದ ಹಿರಿಯರು, ಹಲವು ಮಾಜಿ ಮುಖ್ಯಮಂತ್ರಿಗಳ ಜತೆಗೆ ಸಮನ್ವಯ ಸಾಧಿಸುವುದರ ಜತೆಗೆ ಸಂಘ ಮತ್ತು ಪಕ್ಷದ ಮಧ್ಯೆ ಸೇತುವೆಯಾಗಿ ಕಾರ್ಯನಿರ್ವಹಿಸುವ ಹೊಣೆ ಅವರದ್ದಾಗಿತ್ತು. ವಿಧಾನಸಭೆ ಚುನಾವಣೆಯಲ್ಲಿ ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿಯಂತಹ ಮೂಲ ಬಿಜೆಪಿಗರು ಪಕ್ಷ ಬಿಟ್ಟು ಹೋದರು. ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಅರುಣುಕುಮಾರ ಪುತ್ತಿಲ ಅವರು ‘‍‍ಪುತ್ತಿಲ ಪರಿವಾರ’ ರಚಿಸಿಕೊಂಡು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣರಾದರು. ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಧ್ಯಕ್ಷನ ಅಣ್ಣನೇ ಸ್ಪರ್ಧಿಸಿದ್ದ ಶಿವಮೊಗ್ಗದಲ್ಲಿ ಕೆ.ಎಸ್. ಈಶ್ವರಪ್ಪ ಬಂಡಾಯ ಸ್ಪರ್ಧೆ, ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ರಘುಪತಿ ಭಟ್ ಸ್ಪರ್ಧೆ ಇವೆಲ್ಲ ಬೆಳವಣಿಗೆಳು ನಡೆಯುತ್ತಿದ್ದರೂ, ಗಮನಿಸದೇ ಇದ್ದುದು ರಾಜೇಶ್ ಅವರ ವೈಫಲ್ಯ ಎಂದೇ ಹೇಳಲಾಗುತ್ತಿದೆ.

ಸಂಘ ನಿಷ್ಠರಾಗಿದ್ದ ಅನೇಕರು ಪಕ್ಷ ತೊರೆಯುವ, ಬಂಡಾಯ ಏಳುವುದರ ಬಗ್ಗೆ ಮುಂಜಾಗ್ರತೆ ವಹಿಸಿ, ಹಿರಿಯರ ಜತೆ ಚರ್ಚಿಸಿ ಮಾತುಕತೆ ಮೂಲಕ ಬಗೆಹರಿಸುವ, ರಾಜಕೀಯ ಸವಾಲುಗಳನ್ನು ಪರಿಹರಿಸುವ ಹೊಣೆಯೂ ಸಂಘಟನಾ ಕಾರ್ಯದರ್ಶಿ ಅವರ ಮೇಲಿತ್ತು. ಅದನ್ನು ಸಮರ್ಥವಾಗಿ ನಿಭಾಯಿಸದೇ ಇರುವುದು ರಾಜೇಶ್ ಬದಲಾವಣೆಗೆ ಕಾರಣ ಎನ್ನಲಾಗುತ್ತಿದೆ.

ರಾಜ್ಯ ಸಂಘಟನಾ ಕಾರ್ಯದರ್ಶಿಯ ವೈಫಲ್ಯವು ಪಕ್ಷದಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಜಿಲ್ಲಾ ಮಟ್ಟದಲ್ಲೂ ಸಂಘಟನಾ ಕಾರ್ಯದರ್ಶಿ ಹುದ್ದೆ ಸೃಷ್ಟಿಸಿ ಕಿರಿಯರನ್ನು ನಿಯೋಜಿಸಲಾಗಿದೆ. ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕವಾಗುವ ಅನುಭವಿಗಳ ಜತೆಗೆ ಕಿರಿಯರು ಸಮನ್ವಯದಿಂದ ಕೆಲಸ ಮಾಡುವ ಬದಲಿಗೆ, ಹಿರಿಯರನ್ನೇ ನಿಯಂತ್ರಿಸುತ್ತಿದ್ದಾರೆ. ಈ ಬಗ್ಗೆ ದೂರುಗಳ ಬಂದರೂ ಅದರನ್ನು ನಿವಾರಿಸುವಲ್ಲಿ ಆಸ್ಥೆ ವಹಿಸದೇ ಇರುವುದು ಸಮಸ್ಯೆ ಕಾರಣ. ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳನ್ನೂ ಬದಲಾವಣೆ ಮಾಡಬೇಕು ಎಂಬ ಕೂಗು ಪಕ್ಷದಲ್ಲಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT