ಬೆಂಗಳೂರು: ‘ಸರ್ಕಾರವನ್ನು ರಚಿಸುವುದು ಹಣದ ಆಧಾರದಲ್ಲಿ ಎಂಬ ನಂಬಿಕೆ ನಮ್ಮದಲ್ಲ. ಇಲ್ಲಿನ ತನಕ ನಾವು ಸರ್ಕಾರ ರಚಿಸಿದ್ದು, ಶಾಸಕರ ಬೆಂಬಲದಿಂದಲೇ ವಿನಾ ಹಣಕಾಸಿನ ಬೆಂಬಲದಿಂದಲ್ಲ. ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆಯನ್ನು ಬಿಜೆಪಿ ಒಪ್ಪುವುದಿಲ್ಲ’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್‌ಕುಮಾರ್ ಹೇಳಿದರು.
‘ಮಹಾನ್ ನಾಯಕರೊಬ್ಬರು ಮುಖ್ಯಮಂತ್ರಿಯಾಗಲು ₹1,000 ಕೋಟಿ ಇಟ್ಟುಕೊಂಡಿದ್ದಾರೆ. ಸರ್ಕಾರ ಉರುಳಿಸಲು ಪ್ರಯತ್ನ ನಡೆದಿದೆ’ ಎಂಬ ಯತ್ನಾಳ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಆ ರೀತಿಯ ಹೇಳಿಕೆ ಅವರ ವೈಯಕ್ತಿಕವಾದುದು. ಇದನ್ನು ಬಿಜೆಪಿ ಒಪ್ಪಲು ಸಾಧ್ಯವಿಲ್ಲ‘ ಎಂದು ಹೇಳಿದರು.
‘ಇದನ್ನು ಪಕ್ಷದ ವರಿಷ್ಠರು ಖಂಡಿತವಾಗಿ ಗಮನಿಸುತ್ತಾರೆ’ ಎಂದು ಹೇಳಿದ ಅವರು, ‘ಯಾವ ಕಾರಣದಿಂದ ಅವರು ಇದನ್ನು ಹೇಳಿದ್ದಾರೆ ಎಂಬ ವರದಿ ತರಿಸಿಕೊಂಡು ಮುಂದಿನ ದಿನಗಳಲ್ಲಿ ಅದಕ್ಕೆ ಉತ್ತರ ನೀಡುತ್ತೇವೆ’ ಎಂದು ಸುನಿಲ್ ಹೇಳಿದರು.
‘ಪದೇ ಪದೇ ಈ ರೀತಿ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ಕಾರ್ಯಕರ್ತರು ಮತ್ತು ಪಕ್ಷದ ವಲಯದಲ್ಲಿದೆ. ದೊಡ್ಡ ಪ್ರಮಾಣದಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ಮತ್ತು ಉಳಿದ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಈ ರೀತಿಯ ಚಟುವಟಿಕೆಗಳ ಮೂಲಕ ಪಕ್ಷಕ್ಕೆ ಮುಜುಗರ ತರುವುದು ಒಳ್ಳೆಯದಲ್ಲ ಎಂಬ ಅಭಿಪ್ರಾಯ ನಮ್ಮದು’ ಎಂದರು.