ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ‘ಕೋಟೆ’ಯಲ್ಲಿ ಮೊದಲ ಬಾರಿಗೆ ‘ಕಮಲ’ ಅರಳಿಸಿದ್ದ ಶ್ರೀನಿವಾಸ ಪ್ರಸಾದ್

Published 29 ಏಪ್ರಿಲ್ 2024, 3:08 IST
Last Updated 29 ಏಪ್ರಿಲ್ 2024, 3:08 IST
ಅಕ್ಷರ ಗಾತ್ರ

ಚಾಮರಾಜನಗರ: ಹಳೆ ಮೈಸೂರು ಭಾಗದ ಪ್ರಭಾವಿ ‘ದಲಿತ ನಾಯಕ’ ಎಂದು ಗುರುತಿಸಿಕೊಂಡಿದ್ದ ಶ್ರೀನಿವಾಸ ಪ್ರಸಾದ್ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಕ್ಷೇತ್ರದಲ್ಲಿ ಮೊದಲ ಬಾರಿಗೆ ‘ಕಮಲ’ ಅರಳುವಂತೆ ಮಾಡಿದ್ದರು.

2017ರಲ್ಲಿ ತಮ್ಮನ್ನು ಏಕಾಏಕಿ ಸಚಿವ ಸ್ಥಾನದಿಂದ ತೆಗೆದಿದ್ದಕ್ಕೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮೇಲೆ ಮುನಿಸಿಕೊಂಡಿದ್ದ ಅವರು, ಕಾಂಗ್ರೆಸ್ ತೊರೆದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ನಂತರ ನಂಜನಗೂಡು ವಿಧಾನಸಭಾ ಕ್ಷೇತ್ರಕ್ಕೆ ನಡೆದಿದ್ದ ಉಪ ಚುನಾವಣೆಯಲ್ಲಿ ಸೋಲನ್ನು ಕಂಡಿದ್ದರು. 2019ರ ಚುನಾವಣೆಯಲ್ಲಿ ತಮ್ಮ ‘ಸ್ವಾಭಿಮಾನ’ವನ್ನೇ ಪಣಕ್ಕಿಟ್ಟು, ಕಾಂಗ್ರೆಸ್‌ನ ಆರ್.ಧ್ರುವನಾರಾಯಣ ಅವರ ವಿರುದ್ಧ ರೋಚಕವಾಗಿ (1817 ಮತಗಳ ಅಂತರ) ಗೆಲುವು ಸಾಧಿಸಿದ್ದರು.

ಗೆಲುವಿನ ಬಳಿಕ ಹಳೆ ಮೈಸೂರು ಭಾಗದಲ್ಲಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಂಡಿದ್ದರು.

1974ರಲ್ಲಿ ಚುನಾವಣಾ ರಾಜಕೀಯ ಪ್ರವೇಶಿಸಿದ್ದ ಶ್ರೀನಿವಾಸ ಪ್ರಸಾದ್‌ ಅವರು ಆರು ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾಗಿ, ಕೇಂದ್ರದ ಅಟಲ್‌ ಬಿಹಾರಿ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿ, ಎರಡು ಬಾರಿ ನಂಜನಗೂಡು ಶಾಸಕರಾಗಿ, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಐದು ದಶಕಗಳ ರಾಜಕೀಯ ಅನುಭವಹೊಂದಿದ್ದರು.

ಕೊನೆ ಕ್ಷಣದಲ್ಲಿ ಸ್ಪರ್ಧೆ

2017ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಶ್ರೀನಿವಾಸ ಪ್ರಸಾದ್ ಅವರು ನಂಜನಗೂಡಿನ ಉಪ ಚುನಾವಣೆ ಸೋಲಿನ ನಂತರ ಚುನಾವಣಾ ರಾಜಕೀಯದಿಂದ ದೂರವಾಗಿದ್ದರು. ವಯಸ್ಸು ಹಾಗೂ ಅನಾರೋಗ್ಯ ಕಾರಣದಿಂದ ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದೂ ಹೇಳಿದ್ದರು.

2018ರಲ್ಲಿ ನಂಜನಗೂಡು ಕ್ಷೇತ್ರದಲ್ಲಿ ಅಳಿಯ ಹರ್ಷವರ್ಧನ್‌ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿದ್ದರು.

‘2019 ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಲ್ಲಿ ನಾನು ಹೇಳುವ ಅಭ್ಯರ್ಥಿಗೆ ಟಿಕೆಟ್‌ ಕೊಡಿ, ಗೆಲ್ಲಿಸುತ್ತೇನೆ’ ಎಂದು ಹೇಳುತ್ತಿದ್ದ ಅವರು, ಸ್ವತಃ ಸ್ಪರ್ಧಿಸಲು ಯೋಚಿಸಿರಲಿಲ್ಲ.

ಆದರೆ, ಕೊನೆಗೆ ಅವರೇ ಅಭ್ಯರ್ಥಿಯಾಗಲು ಒಪ್ಪುವ ಮೂಲಕ ಕಾಂಗ್ರೆಸ್‌ ಹಾಗೂ ಇತರ ಪಕ್ಷಗಳಿಗೆ ಅಚ್ಚರಿ ಮೂಡಿಸಿದ್ದರು. 20 ವರ್ಷಗಳ ನಂತರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು.

ಮೋದಿ ಅಲೆ, ತಮ್ಮ ವರ್ಚಸ್ಸಿನ ಕಾರಣಕ್ಕೆ ಕಡಿಮೆ ಅಂತರದಲ್ಲಿ ಗೆಲುವಿನ ದಡ ಸೇರಲು ಪ್ರಸಾದ್ ಯಶಸ್ವಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT