ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 42 ಕೋಟಿ ವಶ: ಸಿಬಿಐ ತನಿಖೆಗೆ ಬೊಮ್ಮಾಯಿ ಆಗ್ರಹ

Published 14 ಅಕ್ಟೋಬರ್ 2023, 11:39 IST
Last Updated 14 ಅಕ್ಟೋಬರ್ 2023, 11:39 IST
ಅಕ್ಷರ ಗಾತ್ರ

ಬೆಂಗಳೂರು: ಗುತ್ತಿಗೆದಾರ ಮತ್ತು ಅವರ ಸಂಬಂಧಿಕರ ಮನೆಗಳಲ್ಲಿ ಆದಾಯ ತೆರಿಗೆ (ಐ.ಟಿ) ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುವ ₹ 42 ಕೋಟಿ ನಗದು ಮೂಲದ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ಗುತ್ತಿಗೆದಾರರಿಗೆ ಬಾಕಿ ಬಿಲ್‌ ಮೊತ್ತ ಪಾವತಿಯಾದ ತಕ್ಷಣ ಒಬ್ಬ ಗುತ್ತಿಗೆದಾರ ಹಾಗೂ ಅವರ ಸಂಬಂಧಿಕರ ಮನೆಯಲ್ಲಿ ಇಷ್ಟೊಂದು ದೊಡ್ಡ ಮೊತ್ತ ಪತ್ತೆಯಾಗಿರುವುದು ಇದೇ ಮೊದಲು. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಕಮಿಷನ್‌ ಹಾವಳಿ ಹೆಚ್ಚಾಗಿದೆ. ಈ ಸರ್ಕಾರ ಬಿಲ್‌ ಪಾವತಿಗೆ ಶೇಕಡ ಹತ್ತರಷ್ಟು ಕಮಿಷನ್‌ ಪಡೆಯುತ್ತಿರುವುದು ಸಾಬೀತಾಗಿದೆ’ ಎಂದರು.

ಈಗ ಪತ್ತೆಯಾಗಿರುವ ಹಣದ ಕುರಿತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಹಾಗೂ ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿ ಪ್ರಕರಣ ದಾಖಲಿಸಬೇಕು. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಎರಡೂ ಸಂಸ್ಥೆಗಳಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಗುತ್ತಿಗೆದಾರರ ಸಂಘವೇ ಕೇಂದ್ರ: ‘ಗುತ್ತಿಗೆದಾರರ ಸಂಘದವರು ನಮ್ಮ ಸರ್ಕಾರದ ವಿರುದ್ಧ ದಾಖಲೆ ಇಲ್ಲದೆ ಸುಳ್ಳು ಆರೋಪ ಮಾಡಿದ್ದರು. ಈಗ ಗುತ್ತಿಗೆದಾರರ ಸಂಘವೇ ಕಮಿಷನ್‌ ಸಂಗ್ರಹ ಕೇಂದ್ರವಾಗಿದೆ. ಗುತ್ತಿಗೆದಾರ ಮತ್ತು ಸರ್ಕಾರ ಒಟ್ಟಾಗಿ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ’ ಎಂದು ಬೊಮ್ಮಾಯಿ ಆರೋಪಿಸಿದರು.

‘ಬಾಕಿ ಬಿಲ್‌ ಪಾವತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಅವರೇ ಹೇಳಿದ್ದಾರೆ. ಕಮಿಷನ್‌ ಕೊಟ್ಟವರಿಗೆ ಆಯ್ದು ಬಿಲ್‌ ಪಾವತಿಸುವ ವ್ಯವಸ್ಥೆ ಇದೆ ಎಂದು ಆರೋಪಿಸಿದ್ದಾರೆ. ಸಮಸ್ಯೆ ಪರಿಹರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಅಂದರೆ, ಭ್ರಷ್ಟಾಚಾರ ಇರುವುದನ್ನು ಮುಖ್ಯಮಂತ್ರಿಯವರು ಒಪ್ಪಿಕೊಂಡಿದ್ದಾರೆಯೆ’ ಎಂದು ಪ್ರಶ್ನಿಸಿದರು.

‘ಕಮಿಷನ್‌ ಪಡೆದಿದ್ದನ್ನು ಯಾರಾದರೂ ನೋಡಿದ್ದಾರಾ? ಎಂದು ಸಿದ್ದರಾಮಯ್ಯ ಕೇಳಿದ್ದಾರೆ. ನಮ್ಮ ಸರ್ಕಾರದ ವಿರುದ್ಧ ಶೇಕಡ 40ರಷ್ಟು ಕಮಿಷನ್‌ ಆರೋಪ ಮಾಡಿದಾಗ ಅವರು ನೋಡಿದ್ದರಾ? ಈ ಪ್ರಕರಣವನ್ನೂ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ ದಾಸ್‌ ಆಯೋಗದ ತನಿಖೆಗೆ ವಹಿಸಲಿ ಅಥವಾ ಲೋಕಾಯುಕ್ತದ ತನಿಖೆಗೆ ವಹಿಸಲಿ’ ಎಂದು ಆಗ್ರಹಿಸಿದರು.

‘ಕೈ ಹೈಕಮಾಂಡ್‌ಗಾಗಿ ಲೂಟಿ’

‘ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಾಗಿ ಕಾಂಗ್ರೆಸ್‌ ಹೈಕಮಾಂಡ್‌ಗೆ ಹಣ ಸಂದಾಯ ಮಾಡಲು ರಾಜ್ಯದ ಲೂಟಿ ಮಾಡಲಾಗುತ್ತಿದೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯಲ್ಲಿ ರಾಜ್ಯದ ಕಾಂಗ್ರೆಸ್‌ ಸರ್ಕಾರದ ನಿಜ ಬಣ್ಣ ಬಯಲಾಗಿದೆ’ ಎಂದು ಬಿಜೆಪಿ ಶಾಸಕ ಆರ್‌. ಅಶೋಕ ಹೇಳಿದರು. ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು ‘ಐದು ರಾಜ್ಯಗಳ ಚುನಾವಣೆಗೆ ಸಾವಿರಾರು ಕೋಟಿ ರೂಪಾಯಿ ಕೊಡುವುದಾಗಿ ರಾಜ್ಯ ಸರ್ಕಾರದ ಪ್ರಮುಖರು ಕಾಂಗ್ರೆಸ್‌ ಹೈಕಮಾಂಡ್‌ಗೆ ವಾಗ್ದಾನ ಮಾಡಿದ್ದಾರೆ. ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಯವರಿಂದ ಶಹಬ್ಬಾಸ್‌ ಗಿರಿ ಪಡೆಯಲು ಲೂಟಿಗೆ ಇಳಿದಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT